58ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ತಂದೆಯಾದ ಸಲ್ಮಾನ್ ಸಹೋದರ ಅರ್ಬಾಜ್ ಖಾನ್

ಅರ್ಬಾಜ್ ಮತ್ತು ಶುರಾ ಮೊದಲು ‘ಪಾಟ್ನಾ ಶುಕ್ಲಾ’ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಬಳಿಕ ಅವರು ಕೆಲವು ತಿಂಗಳ ಕಾಲ ಡೇಟಿಂಗ್‌ನಲ್ಲಿ ಇದ್ದು, 2023ರಲ್ಲಿ ವಿವಾಹವಾದರು.

Update: 2025-10-06 05:51 GMT
Click the Play button to listen to article

ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಅವರು ತಮ್ಮ 58ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗುವ ಮೂಲಕ ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಅವರ ಎರಡನೇ ಪತ್ನಿ, ಮೇಕಪ್ ಕಲಾವಿದೆ ಶುರಾ ಖಾನ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಖಾನ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅರ್ಬಾಜ್ ಮತ್ತು ಶುರಾ, 'ಪಾಟ್ನಾ ಶುಕ್ಲಾ' ಚಿತ್ರದ ಸೆಟ್‌ನಲ್ಲಿ ಭೇಟಿಯಾಗಿ, ಪ್ರೀತಿಸಿ ಮದುವೆಯಾಗಿದ್ದರು. ಇದೀಗ, ತಮ್ಮ ಮೊದಲ ಮಗುವಿನ ಆಗಮನದಿಂದ ಇಬ್ಬರೂ ಸಂತಸದಲ್ಲಿದ್ದಾರೆ. ಅರ್ಬಾಜ್ ಖಾನ್ ಅವರಿಗೆ ಇದು ಎರಡನೇ ಮಗು. ಅವರ ಮೊದಲ ಪತ್ನಿ, ನಟಿ ಮಲೈಕಾ ಅರೋರಾ ಅವರಿಂದ ಅರ್ಹಾನ್ ಖಾನ್ ಎಂಬ 22 ವರ್ಷದ ಮಗನಿದ್ದಾನೆ. 1998ರಲ್ಲಿ ವಿವಾಹವಾಗಿದ್ದ ಅರ್ಬಾಜ್ ಮತ್ತು ಮಲೈಕಾ, 19 ವರ್ಷಗಳ ದಾಂಪತ್ಯದ ನಂತರ 2017ರಲ್ಲಿ ವಿಚ್ಛೇದನ ಪಡೆದಿದ್ದರು.

ಮಗನೇ ನನ್ನ ಪ್ರಪಂಚ ಎಂದ ಮಲೈಕಾ

ಒಂದೆಡೆ ಅರ್ಬಾಜ್ ಖಾನ್ ಅವರ ಜೀವನದಲ್ಲಿ ಹೊಸ ಸಂಭ್ರಮ ಮನೆಮಾಡಿದ್ದರೆ, ಮತ್ತೊಂದೆಡೆ ಅವರ ಮಾಜಿ ಪತ್ನಿ ಮಲೈಕಾ ಅರೋರಾ ಅವರು ತಮ್ಮ ಮಗನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ಸುದ್ದಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, 'ನಿಮ್ಮ ಪ್ರಿಯ ಐಕಾನ್ ಯಾರು?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನನ್ನು ಹಲವರು ಪ್ರೇರೇಪಿಸಿದ್ದಾರೆ. ಆದರೆ, ನನ್ನ ಜೀವನದ ಅತ್ಯಂತ ಪ್ರಿಯ ವ್ಯಕ್ತಿ ಎಂದರೆ ಅದು ನನ್ನ ಮಗನೇ. ಅವನೇ ನನ್ನ ಜಗತ್ತು," ಎಂದು ಭಾವುಕರಾಗಿ ನುಡಿದಿದ್ದಾರೆ.

ತಮ್ಮ ವಿಚ್ಛೇದನದ ಬಗ್ಗೆ ಈ ಹಿಂದೆ ಮಾತನಾಡಿದ್ದ ಮಲೈಕಾ, "ನನ್ನ ಮದುವೆ ಮುಂದುವರಿಯಬೇಕೆಂದು ನಾನು ಬಯಸಿದ್ದೆ. ಆದರೆ ಅದು ಆಗಲಿಲ್ಲ. ಅದಕ್ಕಾಗಿ ನಾನು ಪ್ರೀತಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ನಾನು ಸಂತೋಷವಾಗಿರಲಿಲ್ಲ, ಹಾಗಾಗಿ ನನ್ನನ್ನು ನಾನು ಮೊದಲು ನೋಡಿಕೊಳ್ಳಬೇಕು ಎಂದು ನಿರ್ಧರಿಸಿದೆ. ಕೆಲವರು ಅದನ್ನು ಸ್ವಾರ್ಥ ಎಂದರು, ಆದರೆ ಇಂದು ನನ್ನ ಆ ನಿರ್ಧಾರವೇ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ," ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು.

ಹೀಗೆ, ಮಲೈಕಾ ಅವರು ಪ್ರೀತಿ ಮತ್ತು ಕುಟುಂಬದ ಬಗ್ಗೆ ಮಾತನಾಡುತ್ತಿದ್ದರೆ, ಅರ್ಬಾಜ್ ಖಾನ್ ಅವರು ತಮ್ಮ ಬದುಕಿನ ಹೊಸ ಪುಟವನ್ನು ತೆರೆದು, ಸಂಭ್ರಮಿಸುತ್ತಿದ್ದಾರೆ. 

Tags:    

Similar News