ಕಾವೇರಿ ʼತೆರೆʼಮರೆಗೆ
ಸದಾಶಿವನಗರ- ಪ್ಯಾಲೇಜ್ ಗುಟ್ಟಹಳ್ಳಿ ಸಮೀಪದ ಫೇಮಸ್ ಸಿಂಗಲ್ ಸ್ಕ್ರೀನ್ 'ಕಾವೇರಿ' ಸಂಪೂರ್ಣವಾಗಿ ತನ್ನ ಪ್ರದರ್ಶನವನ್ನು ನಿಲ್ಲಿಸಿದೆ. ಈ ಸಿನಿಮಾ ಮಂದಿರದ ಹೆಸರಿನಲ್ಲಿ ಗುರುತಿಸಿಕೊಂಡಿರುವ ಕಾವೇರಿ ಜಂಕ್ಷನ್‌ನಲ್ಲಿ ಇನ್ನು ಮುಂದೆ ʼಕಾವೇರಿʼ ಇರುವುದಿಲ್ಲ!;
ಸುಮಾರು 50 ವರ್ಷಗಳಿಂದ ಬೆಂಗಳೂರಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದ ಕಾವೇರಿ ಚಿತ್ರಮಂದಿಗೆ ಈಗ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ಯಾಲೇಜ್ ಗುಟ್ಟಹಳ್ಳಿಯಲ್ಲಿದ್ದ ಫೇಮಸ್ ಸಿಂಗಲ್ ಸ್ಕ್ರೀನ್ 'ಕಾವೇರಿ' ಸಂಪೂರ್ಣವಾಗಿ ತನ್ನ ಪ್ರದರ್ಶನವನ್ನು ನಿಲ್ಲಿಸಿದೆ. ಇಲ್ಲಿ ಕನ್ನಡವೂ ಸೇರಿದಂತೆ ಹಿಂದಿ ಹಾಗೂ ಪರಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು.
ಬೆಂಗಳೂರಿನ ಏರಿಯಾಗಳನ್ನು ಥಿಯೇಟರ್‌ಗಳ ಹೆಸರಿನಿಂದಲೇ ಗುರುತಿಸುತ್ತಿದ್ದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಕಾವೇರಿ ಕೂಡ ಒಂದಾಗಿತ್ತು. ಕಾವೇರಿ ಚಿತ್ರಮಂದಿರ ಬೆಂಗಳೂರಿನ ಒಂದು ಲ್ಯಾಂಡ್ ಮಾರ್ಕ್ ಆಗುವಷ್ಟು ಫೇಮಸ್. 1974, ಜನವರಿ 11ರಂದು ಈ ಚಿತ್ರಮಂದಿರ ಆರಂಭಗೊಂಡಿತ್ತು. ಡಾ. ರಾಜ್‌ಕುಮಾರ್ ನಟಿಸಿದ 'ಬಂಗಾರದ ಪಂಜರ' ಈ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿದ್ದ ದೊಡ್ಡ ಚಿತ್ರಮಂದಿರಗಳ ಪೈಕಿ ಕಾವೇರಿ ಕೂಡ ಒಂದಾಗಿತ್ತು. ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಈ ಚಿತ್ರಮಂದಿರವನ್ನು ನಿರ್ಮಾಣ ಮಾಡಲಾಗಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಹೀಗಾಗಿ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದರು. ಅಷ್ಟೇ ಅಲ್ಲ ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ 'ಪರಮಾತ್ಮ' ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.
ಇತ್ತೀಚೆಗೆ ಹೆಚ್ಚಾಗಿ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶನ ಮಾಡಲಾಗುತ್ತಿತ್ತು. 'ಬಡೇ ಮಿಯಾ ಛೋಟೇ ಮಿಯಾʼ, 'ಮೈದಾನ್' ಈ ಎರಡು ಸಿನಿಮಾಗಳನ್ನು ಪ್ರದರ್ಶನ ಮಾಡಿದ ಬಳಿಕ ಕಾವೇರಿ ಥಿಯೇಟರ್ ಅನ್ನು ಬಂದ್ ಮಾಡಲಾಗಿದೆ. ಪ್ರೇಕ್ಷಕರು ಓಟಿಟಿ ಹಾಗೂ ಮಲ್ಟಿಪ್ಲೆಕ್ಸ್ ಕಡೆ ವಾಲಿರುವುದು ಈ ಚಿತ್ರಮಂದಿರ ಮುಚ್ಚುವುದಕ್ಕೆ ಕಾರಣ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್ ಕಡೆ ಜನರು ಹೆಚ್ಚಾಗಿ ವಾಲುತ್ತಿದ್ದಾರೆ. ಈ ಕಾರಣಕ್ಕೆ ಸಿಂಗಲ್ ಸ್ಕ್ರೀನ್‌ಗೆ ಜನರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರಿಯ ಚಿತ್ರಮಂದಿರಗಳಾದ ಕಪಾಲಿ, ಸಾಗರ್, ಕಲ್ಪನಾ, ಮೆಜೆಸ್ಟಿಕ್, ಪಲ್ಲವಿ ಅಂತಹ ಚಿತ್ರಮಂದಿರಗಳು ಈ ಹಿಂದೆನೇ ಮುಚ್ಚಿದ್ದವು. ಈಗ ಆ ಸಾಲಿಗೆ ಕಾವೇರಿ ಚಿತ್ರಮಂದಿರವೂ ಸೇರಿಕೊಂಡಿದೆ.