ವಿಶ್ವದಾದ್ಯಂತ 'ಅನಿಮಲ್' ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದೆಷ್ಟು ಗೊತ್ತಾ?

ಆಕ್ಷನ್ ಡ್ರಾಮಾ ಚಿತ್ರ ʼಅನಿಮಲ್ʼ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 600 ಕೋಟಿ ರೂಪಾಯಿಗಳನ್ನು ಗಳಿಸಿದೆ.

Update: 2024-02-05 06:30 GMT

ಮುಂಬೈ: ಆಕ್ಷನ್ ಡ್ರಾಮಾ ಚಿತ್ರ "ಅನಿಮಲ್" ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 600.67 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಗುರುವಾರ ತಿಳಿಸಿದೆ. ರಣ್‌ಬೀರ್ ಕಪೂರ್ ನಟನೆಯ ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರವು ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ಟಿ -ಸಿರೀಸ್‌ ನಿರ್ಮಾಣ ಮಾಡಿದ್ದು, "ದಿ ಬ್ಲಾಕ್‌ಬಸ್ಟರ್‌ನ ವಿಜಯೋತ್ಸವ ಮುಂದುವರಿಯುತ್ತದೆ," ಎಂದು ಬ್ಯಾನರ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದೆ. ಚಿತ್ರ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಚಿತ್ರವಿಮರ್ಶಕರು ಮತ್ತು ಕೆಲ ವೀಕ್ಷಕರ ಗುಂಪು ಈ ಚಿತ್ರವನ್ನು ಸ್ತ್ರೀದ್ವೇಷ ಮತ್ತು ಹಿಂಸಾತ್ಮಕ ಚಿತ್ರ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಈ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಬಿಡುಗಡೆಗೂ ಮುನ್ನ ಈ ಸಿನಿಮಾಗೆ ಸಿಬಿಎಫ್‌ಸಿ "ಎ" ಸರ್ಟಿಫಿಕೇಟ್ ನೀಡಲಾಗಿದೆ.

ಇನ್ನು ಈ ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ಟ್ರಿಪ್ಟಿ ಡಿಮ್ರಿ, ಸುರೇಶ್ ಒಬೆರಾಯ್ ಮತ್ತು ಪ್ರೇಮ್ ಚೋಪ್ರಾ ನಟಿಸಿದ್ದಾರೆ. "ಅನಿಮಲ್" ಒಂದು ಹಿಂಸಾತ್ಮಕ ಜಗತ್ತನ್ನು ಚಿತ್ರಿಸುವ ಚಲನಚಿತ್ರವಾಗಿದ್ದು, ರಣವಿಜಯ್ ಸಿಂಗ್ (ರಣಬೀರ್ ಕಪೂರ್) ಮತ್ತು ಅವನ ತಂದೆ ಬಲ್ಬೀರ್ ಸಿಂಗ್ (ಅನಿಲ್ ಕಪೂರ್) ನಡುವಿನ ಕಠಿಣ ಸಂಬಂಧವನ್ನು ಕೇಂದ್ರೀಕರಿಸುವ ಸಿನಿಮಾವಾಗಿದೆ.

ಚಿತ್ರವು ಟಿ- ಸಿರೀಸ್‌, ಸಿನಿ1 ಸ್ಟುಡಿಯೋಸ್ ಮತ್ತು ಭದ್ರಕಾಳಿ ಪಿಕ್ಚರ್ಸ್‌ನಿಂದ ನಿರ್ಮಾಣಗೊಂಡಿದ್ದು, ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಮುರಾದ್ ಖೇತಾನಿ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಒಡೆತನದಲ್ಲಿದೆ.

Tags:    

Similar News