Amazon prime video event 2024: ಕಾಂತಾರದ ಕಂಪು ಹರಡಿದ ರಿಷಬ್‌ ಶೆಟ್ಟಿ

ಕಾಂತಾರ ಚಿತ್ರದ ಪ್ರೀಕ್ವೆಲ್‌ ಚಿತ್ರ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಚಿತ್ರದ ಒಟಿಟಿ ಹಕ್ಕು ಭಾರಿ ಮೊತ್ತಕ್ಕೆ ಅಮೆಜಾನ್ ಪ್ರೈಂ ಪಾಲಾಗಿದೆ.

Update: 2024-03-21 13:49 GMT
ಅಮೆಜಾನ್ ಪ್ರೈಂ ವಿಡಿಯೋ ಕಾರ್ಯಕ್ರಮದಲ್ಲಿ ರಿಷಬ್‌ ಶೆಟ್ಟಿ
Click the Play button to listen to article

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ ಬಿಡುಗಡೆಗೊಂಡು ಎರಡು ವರ್ಷಗಳಾದರೂ ಆ ಸಿನಿಮಾದ ಹವಾ ಇನ್ನೂ ಕಡಿಮೆಯಾಗಿಲ್ಲ. ಇದೀಗ ಕಾಂತಾರ ಚಿತ್ರದ ಪ್ರೀಕ್ವೆಲ್‌ ಚಿತ್ರದ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಚಿತ್ರದ ಒಟಿಟಿ ಹಕ್ಕು ಭಾರಿ ಮೊತ್ತಕ್ಕೆಅಮೆಜಾನ್ ಪ್ರೈಂಗೆ ಮಾರಾಟವಾಗಿದೆ.

ಮಂಗಳವಾರ ( ಮಾ. 19) ರಂದು ಮುಂಬೈನಲ್ಲಿ ಅಮೆಜಾನ್ ಪ್ರೈಂ ವಿಡಿಯೋ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ಖ್ಯಾತ ನಟ ರಿಷಬ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.

ರಿಷಬ್ ಶೆಟ್ಟಿ ವೇದಿಕೆಗೆ ಬರುವ ಮುಂಚೆಯೇ ‘ಕಾಂತಾರ’ ಸಿನಿಮಾದ ವರಾಹ ರೂಪಂ ಹಾಡಿಗೆ ಯಕ್ಷಗಾನ ಪ್ರದರ್ಶನ ನಡೆಯಿತು.

ಕನ್ನಡದಲ್ಲಿಯೇ ಮಾತು ಆರಂಭಿಸಿದ ರಿಷಬ್‌

ವರುಣ್ ಧವನ್ ರಿಷಬ್ ಶೆಟ್ಟಿ ಅವರನ್ನು ವೇದಿಕೆಗೆ ಆಹ್ವಾನಿಸಿದ್ದು, ವೇದಿಕೆ ಏರಿದ ರಿಷಬ್‌ ʼಎಲ್ಲರಿಗೂ ನಮಸ್ಕಾರʼ ಎಂದು ಹೇಳುವ ಮೂಲಕ ಕನ್ನಡದಲ್ಲಿ ಮಾತನ್ನು ಆರಂಭಿಸಿದರು. ಬಳಿಕ ಕಾಂತಾರ ಸಿನಿಮಾದ ಬಗ್ಗೆ ಮನದುಂಬಿ ಮಾತನಾಡಿದರು.

ಯಕ್ಷಗಾನದಿಂದಲೇ ನನ್ನ ನಟನೆ ಆರಂಭ

ನನ್ನ ನಟನೆ ಯಕ್ಷಗಾನದಿಂದ ಪ್ರಾರಂಭವಾಗಿತ್ತು. ನಾನು ಬಾಲ್ಯದಿಂದಲೇ ಯಕ್ಷಗಾನವನ್ನು ಮಾಡುತ್ತಾ ಬಂದಿದ್ದೇನೆ. ಮೊದಲಿನಿಂದಲೂ ನಮ್ಮ ಊರಿನ ಜನಪದ ಕತೆಗಳನ್ನು ಹೇಳುವ ಹಂಬಲ ನನ್ನಲ್ಲಿ ಇತ್ತು. ಹಾಗಾಗಿ ಕಾಲೇಜ್ ನಲ್ಲಿದ್ದಾಗ ಕಾಂತಾರ ಚಿತ್ರದ ಕಥೆ ನನ್ನ ತಲೆಯಲ್ಲಿ ಓಡುತ್ತಲೇ ಇತ್ತು. ಹಾಗಾಗಿ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಸಿನಿಮಾ ಮಾಡುವ ಕಲೆಯನ್ನು ಅರಿತುಕೊಂಡು, ಕಾಂತಾರ ಸಿನಿಮಾ ಮಾಡಲು ನಿರ್ಧರಿಸಿದೆ. ಸರಿಯಾದ ಸಮಯಕ್ಕೆ ಹೊಂಬಾಳೆ ಸಂಸ್ಥೆಯ ನೆರವು ನನಗೆ ಸಿಕ್ಕ ಕಾರಣ ಸಿನಿಮಾ ತೆರೆ ಮೇಲೆ ಬಂತು. ಕಾಂತಾರ ಕಥೆ ಇಂದು ನಿನ್ನೆ ಹುಟ್ಟಿದ್ದಲ್ಲ, ಅನೇಕ ವರ್ಷಗಳಿಂದ ನನ್ನ ಮನದಲ್ಲಿ ಮೂಡಿದ್ದ ಕಥೆ ಇದು ಎಂದು ರಿಷಬ್‌ ಶೆಟ್ಟಿ ಹೇಳಿದರು.

 

ಇದೇ ಸಂದರ್ಭದಲ್ಲಿ ಕಾಂತಾರ 2 ಸಿನಿಮಾದ ಬಗ್ಗೆ ಮಾತನಾಡಿದ ರಿಷಬ್‌, ಕಾಂತಾರ 2 ಸಿನಿಮಾಕ್ಕಾಗಿ ಊರಿನ ಬಳಿಯೇ ದೊಡ್ಡದಾದ ಸೆಟ್‌ ನಿರ್ಮಾಣ ಮಾಡಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಇನ್ನು ಕಾಂತಾರ ಸಿನಿಮಾವನ್ನು ಭಾರತದ ಎಲ್ಲಾ ಪ್ರೇಕ್ಷಕರು ವೀಕ್ಷಿಸಿ ಸಿನಿಮಾಕ್ಕೆ ದೊಡ್ಡ ಗೌರವನ್ನು ನೀಡಿದ್ದೀರಿ. ಅದು ನನ್ನ ಪುಣ್ಯ ಎಂದು ರಿಷಬ್‌ ಶೆಟ್ಟಿ ತಲೆಬಾಗಿದರು.

ಯಾವುದು ಹೆಚ್ಚು ಪ್ರಾದೇಶಿಕವೋ ಅದೇ ಹೆಚ್ಚು ವಿಶ್ವಮಾನ್ಯ

ಈ ಕಾರ್ಯಕ್ರಮದಲ್ಲಿ ಹೊಂಬಾಳೆ ಫಿಲ್ಮ್ಸ್​ನ ಸಹ ನಿರ್ಮಾಪಕ ಆಗಿರುವ ಚೆಲುವೇ ಗೌಡ ಅವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅವರು, ಕಾಂತಾರ ಅಥವಾ ಇನ್ಯಾವುದೇ ಕತೆಯನ್ನು ನಾವು ಆಯ್ಕೆ ಮಾಡುವಾಗ ನಾವು ಪ್ರೇಕ್ಷಕರಿಗೆ ಏನು ಭಿನ್ನವಾಗಿ ನೀಡುತ್ತಿದ್ದೇವೆ ಎಂಬುದನ್ನು ನೋಡುತ್ತೇವೆ. ನಾವು ‘ಕಾಂತಾರ’ ಕತೆ ಕೇಳಿದಾಗ, ಇದು ನೆಲದ ಕತೆ ಅದರಲ್ಲಿಯೂ ಕರಾವಳಿ ಭಾಗದ ಸಂಸ್ಕೃತಿ ಎಂದು ಅರ್ಥವಾಯಿತು.

 

ಈ ಸಿನಿಮಾವನ್ನು ಇತರೆ ಭಾಗದ ಜನರಿಗೆ ತೋರಿಸುವ ಉದ್ದೇಶದಿಂದ ಈ ಪ್ರಾಜೆಕ್ಟ್​ ಗೆ ಬಂಡವಾಳ ಹಾಕಿದ್ದೇವೆ. ಯಾವುದು ಹೆಚ್ಚು ಪ್ರಾದೇಶಿಕವೋ ಅದೇ ಹೆಚ್ಚು ವಿಶ್ವಮಾನ್ಯ ಎಂಬುದು ನಮ್ಮ ಹಾಗೂ ರಿಷಬ್​ರ ನಂಬಿಕೆ ಎಂದು ಅವರು ಹೇಳಿದರು.

ಭಾರೀ ಮೊತ್ತಕ್ಕೆ ಡೀಲ್‌

ರಿಷಬ್‌ ಶೆಟ್ಟಿ ನಿರ್ದೇಶನ, ಅಭಿನಯದ ಕಾಂತಾರ ಚಿತ್ರದ ಪ್ರೀಕ್ವೆಲ್‌ ಚಿತ್ರ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಚಿತ್ರದ ಒಟಿಟಿ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಕುರಿತಂತೆ ಅಮೇಜಾನ್ ಪ್ರೈಮ್ ಸಂಸ್ಥೆ ಟ್ವೀಟ್ ಮಾಡಿದ್ದು, ಮುಂಬೈಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಆದರೆ ಅಮೆಜಾನ್ ಹಾಗೂ ಹೊಂಬಾಳೆ ನಡುವೆ ಎಷ್ಟು ಕೋಟಿಗೆ ಈ ಸಿನಿಮಾದ ಒಟಿಟಿ ಹಕ್ಕಿನ ಡೀಲ್ ಆಗಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

‘ಕಾಂತಾರ’ ಪ್ರೀಕ್ವೆಲ್ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ʼಕಾಂತಾರʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.

ದಾಖಲೆಯ ವೀಕ್ಷಣೆ ಕಂಡ ಕಾಂತಾರ ಫಸ್ಟ್‌ ಲುಕ್‌ ಪೋಸ್ಟರ್‌

2022ರಲ್ಲಿ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಗೆ ಮುಹೂರ್ತ ನೆರವೇರಿದೆ. ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಈಗಾಗಲೇ ಫಸ್ಟ್‌ ಲುಕ್‌ ಪೋಸ್ಟರ್‌ ದಾಖಲೆಯ ವೀಕ್ಷಣೆ ಕಂಡಿದೆ.

Tags:    

Similar News