ಮತ್ತೊಮ್ಮೆ ನಟಿ ಆಲಿಯಾ ಭಟ್ ಡೀಪ್‌ಫೇಕ್ ವಿಡಿಯೋ ವೈರಲ್
ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡರೆ ₹ 1 ಲಕ್ಷ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬಾಲಿವುಡ್ ನಟಿ ಆಲಿಯಾ ಭಟ್ ಮತ್ತೊಮ್ಮೆ ಡೀಪ್‌ಫೇಕ್ ವಿಡಿಯೋ ಹಾವಳಿಗೆ ಸಿಲುಕಿದ್ದಾರೆ. ಆಲಿಯಾ ಭಟ್ ಅವರ ಹೊಸ ಡೀಪ್‌ಫೇಕ್ ವಿಡಿಯೋ ಇದೀಗ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 'ನನ್ನೊಂದಿಗೆ ಸಿದ್ಧರಾಗಿ' ಟ್ರೆಂಡ್‌ನಲ್ಲಿ ಭಾಗವಹಿಸುವುದನ್ನು ತೋರಿಸುತ್ತದೆ. ಕಪ್ಪು ಕುರ್ತಾದಲ್ಲಿ ತಯಾರಾಗುತ್ತಿರುವುದನ್ನು ಮತ್ತು ಮೇಕಪ್ ಹಾಕಿಕೊಳ್ಳುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.
ಆಲಿಯಾ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ನಟಿ ವಮಿಕಾ ಗಬ್ಬಿ ಅವರ ಮುಖದೊಂದಿಗೆ ಆಲಿಯಾ ಭಟ್ ಅವರ ಮುಖವನ್ನು ಜೋಡಿಸಿರುವ ಡೀಪ್‌ಫೇಕ್ ವಿಡಿಯೋ ಕೂಡ ವೈರಲ್ ಆಗಿತ್ತು. ಮತ್ತೊಂದು ಡೀಪ್‌ಫೇಕ್ ವಿಡಿಯೋದಲ್ಲಿ ಆಲಿಯಾ ಭಟ್ ಅವರ ತಿರುಚಿದ ಮುಖವನ್ನು ಹೊಂದಿರುವ ಮಹಿಳೆ ಅಶ್ಲೀಲ ಸನ್ನೆಗಳನ್ನು ಮಾಡುವುದನ್ನು ತೋರಿಸಿದೆ.
ಆಲಿಯಾ ಭಟ್ ಅವರ ಡೀಪ್‌ಫೇಕ್ ವೀಡಿಯೊಗೆ ಹಲವಾರು ಇನ್‌ಸ್ಟಾಗ್ರಾಮ್ ಬಳಕೆದಾರರು ಪ್ರತಿಕ್ರಿಯಿಸಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
'AI ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿದೆ' ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, 'ನಾನು ಈಗ AI ಗೆ ಹೆದರುತ್ತಿದ್ದೇನೆ' ಎಂದಿದ್ದಾರೆ.
ರಶ್ಮಿಕಾ ಮಂದಣ್ಣ, ಕಾಜೋಲ್, ಕತ್ರಿನಾ ಕೈಫ್, ಅಮೀರ್ ಖಾನ್, ರಣವೀರ್ ಸಿಂಗ್ ಮತ್ತು ಸಾರಾ ತೆಂಡೂಲ್ಕರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಡೀಪ್‌ಫೇಕ್ ವಿಡಿಯೋಗಳು ಈ ಹಿಂದೆ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದವು.
ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡರೆ ₹ 1 ಲಕ್ಷ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಡೀಪ್‌ಫೇಕ್ ವಿಡಿಯೋಗಳನ್ನು ರಚಿಸಲು AI ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದು ತುಂಬ ಆಘಾತಕಾರಿ ಸಂಗತಿಯಾಗಿದ್ದು, ಕೃತಕ ಬುದ್ಧಿಮತ್ತೆಯ ಈ ಸಮಯದಲ್ಲಿ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.