ವಿಜಯ ರಾಘವೇಂದ್ರಗೆ ನಾಯಕಿಯಾಗಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ‌

ಈ ಸಿನಿಮಾವನ್ನು ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದು, ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

Update: 2025-09-20 13:02 GMT

ವರ್ಷ ಬೊಳ್ಳಮ್ಮ

ತಮಿಳಿನ '96' ಮತ್ತು 'ಬಿಗಿಲ್' ನಂತಹ ಸೂಪರ್‌ಹಿಟ್ ಚಿತ್ರಗಳ ಮೂಲಕ ದಕ್ಷಿಣ ಭಾರತದಾದ್ಯಂತ ಖ್ಯಾತಿ ಗಳಿಸಿರುವ ನಟಿ ವರ್ಷಾ ಬೊಳ್ಳಮ್ಮ, ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಟ ವಿಜಯ್ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ, ಸಾಮಾಜಿಕ ಕಳಕಳಿಯ 'ಮಹಾನ್' ಚಿತ್ರದಲ್ಲಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಪಿ.ಸಿ. ಶೇಖರ್ ನಿರ್ದೇಶನದಲ್ಲಿ, ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಈ ಚಿತ್ರವು ವರ್ಷಾ ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಈ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿರುವ ವರ್ಷಾ, "ನಾನು ಮೂಲತಃ ಕನ್ನಡದವಳಾದರೂ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದೀಗ ಮೊದಲ ಬಾರಿಗೆ ನನ್ನ ಮಾತೃಭಾಷೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ," ಎಂದರು.

"ಮಹಾನ್' ಒಂದು ರೈತರ ಕುರಿತಾದ ಚಿತ್ರ. ರೈತರ ಬದುಕಿನ ಬವಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ. ಪಿ.ಸಿ. ಶೇಖರ್ ಅವರು ಈ ಚಿತ್ರದ ಕಥೆ ಹೇಳಿದಾಗ, ಅದರಲ್ಲಿರುವ ಸಾಮಾಜಿಕ ಕಳಕಳಿ ನನಗೆ ಬಹಳ ಇಷ್ಟವಾಯಿತು. ಅವರಂತಹ ಸದಭಿರುಚಿಯ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದು ಮತ್ತು ವಿದ್ಯಾಸಂಸ್ಥೆ ನಡೆಸುತ್ತಿರುವ ಪ್ರಕಾಶ್ ಬುದ್ದೂರು ಅವರಂತಹ ನಿರ್ಮಾಪಕರ ಕಳಕಳಿಯುಳ್ಳ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನನಗೆ ಸಂತಸ ತಂದಿದೆ," ಎಂದು ಅವರು ಹೇಳಿದರು.

ಚಿತ್ರದ ನಾಯಕ ವಿಜಯ್ ರಾಘವೇಂದ್ರ ಅವರ ಬಗ್ಗೆ ಮಾತನಾಡಿದ ಅವರು, "ನಾನು ವಿಜಯ್ ರಾಘವೇಂದ್ರ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ," ಎಂದು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.

'ಮಹಾನ್' ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ವರ್ಷಾ ಬೊಳ್ಳಮ್ಮ ಅವರೊಂದಿಗೆ ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. 

Tags:    

Similar News