ʼಉತ್ತರಕಾಂಡʼ ಸಿನಿಮಾದಿಂದ ರಮ್ಯಾ ಹೊರಕ್ಕೆ: ಸಿನಿಮಾ, ರಾಜಕೀಯದಿಂದ ದೂರ ಸರಿದ ಕ್ವೀನ್!
ಡಾಲಿ ಧನಂಜಯ್ ಅಭಿನಯದ ʼಉತ್ತರಕಾಂಡʼ ಚಿತ್ರದಿಂದ ರಮ್ಯಾ ಹೊರನಡೆದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.;
ಡಾಲಿ ಧನಂಜಯ್ ಅಭಿನಯದ ʼಉತ್ತರಕಾಂಡʼ ಚಿತ್ರದ ನಾಯಕ ನಟಿಯಾಗಿ ಮೋಹಕ ತಾರೆ ರಮ್ಯಾ ಕಾಣಿಸಿಕೊಳ್ಳುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರೆ ಎಂದುಕೊಂಡವರಿಗೆ ನಿರಾಸೆಯಾಗಿದೆ.
ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರದಿಂದ ರಮ್ಯಾ ಹೊರ ನಡೆದಿದ್ದಾರೆ. ಈ ವಿಷಯವನ್ನು ಸ್ವತಃ ರಮ್ಯಾ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಧೃಡಪಡಿಸಿದ್ದಾರೆ.
ಉತ್ತರಕಾಂಡ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಮ್ಯಾ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ, ಚಿತ್ರ ಘೋಷಣೆಯಾಗಿ ಒಂದೂವರೆ ವರ್ಷ ಕಳೆದರೂ, ಚಿತ್ರೀಕರಣ ಪ್ರಾರಂಭವಾಗಿಲ್ಲ. ಕಲಾವಿದರ ಆಯ್ಕೆ ಮುಗಿದು, ಇನ್ನೇನು ಚಿತ್ರೀಕರಣ ಆರಂಭವಾಗಬೇಕು ಎನ್ನುವಷ್ಟರಲ್ಲಿ ರಮ್ಯಾ ಚಿತ್ರತಂಡದಿಂದ ಹೊರನಡೆದಿದ್ದಾರೆ. ಬಹುತೇಕರು ಲೋಕಸಭೆ ಚುನಾವಣೆ ನಿಮಿತ್ತ ನಟಿ ರಮ್ಯಾ ಸಿನಿಮಾ ಕೈ ಬಿಟ್ಟಿರಬಹುದು ಎಂದುಕೊಂಡಿದ್ದರು. ಆದರೆ ಪೋಸ್ಟ್‌ನಲ್ಲಿ ರಾಜಕೀಯದಿಂದಲೇ ದೂರ ಸರಿಯುವುದಾಗಿ ರಮ್ಯಾ ಹೇಳಿದ್ದಾರೆ.
ರಮ್ಯಾ ಪೋಸ್ಟ್‌ನಲ್ಲಿ ಏನಿದೆ
ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಮ್ಯಾ, ಉತ್ತರಕಾಂಡ ಸಿನಿಮಾ ಮಾತ್ರವಲ್ಲದೇ ರಾಜಕೀಯದ ಬಗ್ಗೆಯೂ ತಿಳಿಸಿದ್ದಾರೆ. "ಡೇಟ್ ಕೊರತೆಯಿಂದ ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆ ಚಿತ್ರದಿಂದ ಹಿಂದೆ ಸರಿದಿದ್ದೇನೆ. ಈ ಮೂಲಕ ನಾನು ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಹೋಲ್ಡ್ ಮಾಡಿದ್ದೇನೆ. ಉತ್ತರಕಾಂಡ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಿಂದಲೂ ಹೊರನಡೆದಿದ್ದ ರಮ್ಯಾ
ಈ ಹಿಂದೆ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಸ್ವಾತಿ ಮುತ್ತಿನ ಮಳೆಹನಿಯೇ' ಚಿತ್ರದಿಂದಲೂ ರಮ್ಯಾ ಹೊರ ಬಂದಿದ್ದರು. ಆದರೆ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಮೊದಲಿಗೆ ನಟಿಸುವುದಾಗಿ ಒಪ್ಪಿದ್ದ ರಮ್ಯಾ ಬಳಿಕ ಸಾಧ್ಯವಿಲ್ಲ ಎಂದಿದ್ದರು. ನಂತರ ಸಿರಿ ರವಿಕುಮಾರ್ ಆ ಪಾತ್ರವನ್ನು ನಿಭಾಯಿಸಿದ್ದರು.
ಚಿತ್ರರಂಗದಿಂದ ದೂರ ಸರಿದಿರುವ ರಮ್ಯಾ
9 ವರ್ಷಗಳಿಂದ ನಟಿ ರಮ್ಯಾ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. 2016ರಲ್ಲಿ ಬಂದಿದ್ದ 'ನಾಗರಹಾವು' ಆಕೆ ಬಣ್ಣ ಹಚ್ಚಿದ ಕೊನೆಯ ಸಿನಿಮಾ. ಆ ಬಳಿಕ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಸಂಸದೆ ಆಗಿದ್ದರು. ಬಳಿಕ ಸೋತು ದೆಹಲಿ ಸೇರಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಹಲವು ದಿನಗಳ ಕಾಲ ಕೆಲಸ ಮಾಡಿದ್ದರು.
ನಿರ್ದೇಶಕ ರೋಹಿತ್ ಪದಕಿ ಉತ್ತರಕಾಂಡ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 'ರತ್ನನ್ ಪ್ರಪಂಚ' ಕಾಂಬಿನೇಷನ್‌ನಲ್ಲಿ 'ಉತ್ತರಕಾಂಡ' ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ಧನಂಜಯ್ ಜೊತೆ ನಟಿಸಲು ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕೂಡ ಭಾಗಿ ಆಗಿದ್ದರು. ಆದರೆ ಇದೀಗ ಸಿನಿಮಾದಿಂದ ದೂರ ಸರಿದಿದ್ದು, ಹೊಸ ನಾಯಕಿಯ ಹುಡುಕಾಟವನ್ನು ಚಿತ್ರತಂಡ ನಡೆಸಬೇಕಾಗಿದೆ.
ಆಡಿಷನ್‌ಗೆ ಆಹ್ವಾನ
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಉತ್ತರಕಾಂಡ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ ಎನ್ನುವ ಮೂಲಕ ಆಡಿಷನ್ ಕಾಲ್ ಮಾಡಿತ್ತು ಚಿತ್ರತಂಡ. ʼಉತ್ತರಕಾಂಡʼದ ಮಂದಿಗ ಉತ್ತರ ಕರ್ನಾಟಕದ ಮಂದಿ ಬೇಕು!!! ಆಡಿಷನ್‌ಗೆ ಬತ್ತೀರೇನ್ರೀ?? ನಿಮ್ ವಯಸ್ಸು 12-75 ಒಳಗಿದ್ದು, ಚಲೋ acting ಮಾಡೋಕ್ ಬಂದ್ರೆ ಸಾಕು ನೋಡ್ರೀ... ಏನಂತೀರ್ರೀ? ಮಾರ್ಚ್ 27- ವಿಜಯಪುರ, ಮಾರ್ಚ್ 28- ಹುಬ್ಬಳ್ಳಿ, ಜಾಗ, ದಿನಾಂ ಗೊತ್ತಾತಲ್ಲ..ಬರ್ರೀ ಮತಾ. ಆಡಿಷನ್ ಪ್ರೋಮೋ ಬಂದೈತಿ.. ಶೇರ್ ಮಾಡ್ರೀ.. ಉತ್ತರಕರ್ನಾಟಕದಾಗ ಗುಲ್ಲೆಬ್ಸಿ ಎಂದು ಪೋಸ್ಟ್ ಹಂಚಿಕೊಂಡಿತ್ತು.
ಉತ್ತರಕಾಂಡ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೂಡ ನಟಿಸುತ್ತಾರೆ ಎನ್ನಲಾಗುತ್ತಿದೆ. ಚಿತ್ರದ ಪೋಸ್ಟರ್, ಟೀಸರ್ ಕೂಡ ರಿಲೀಸ್ ಆಗಿ ಹಿಟ್ ಆಗಿದೆ.