
ದಾಖಲೆ ಬಜೆಟ್ ಮಂಡನೆಗೆ ʼಸಿದ್ಧʼರಾಮಯ್ಯ! ಪಂಚ ಗ್ಯಾರಂಟಿಗಳ ಜತೆ ತ್ರಿವಳಿ ಸವಾಲು!
31 ಸಾವಿರ ಕೋಟಿ ರೂ. ನಷ್ಟು ಸರ್ಕಾರಕ್ಕೆ ಹೆಚ್ಚುವರಿ ಹೊರೆ ನಿಭಾಯಿಸಲು 31 ಸಾವಿರ ಕೋಟಿ ರೂ. ನಷ್ಟು ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗಲಿದೆ. ಇದನ್ನು ನಿಭಾಯಿಸಲು ರಾಜ್ಯದ ಸಾಲದ ಮಿತಿಯನ್ನು ಮೀರಿ ಸಾಲ ಮಾಡಬೇಕಾಗುತ್ತದೆ. ಆದರೆ ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆಗೆ ಕಾರಣವಾಗಬಹುದು. ಅಲ್ಲದೇ, ಭವಿಷ್ಯದ ಪೀಳಿಗೆಯ ಮೇಲೆ ಸಾಲದ ಹೊರೆ ಹೊರಿಸಿದಂತಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ಆರಂಭಿಸಿದ್ದು, ಮಾರ್ಚ್ ಮೊದಲ ವಾರದಲ್ಲಿ ಮಂಡಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯದ ರಾಜಕೀಯ ಮತ್ತು ಆರ್ಥಿಕ ಇತಿಹಾಸದಲ್ಲಿ ಸಿದ್ದರಾಮಯ್ಯ 17ನೇ ಬಾರಿ ದಾಖಲೆಯ ಬಜೆಟ್ ಮಂಡಿಸುತ್ತಿದ್ದರೂ, ಆರ್ಥಿಕ ಹೊರೆಗಳ ಮೂರು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ನಡುವೆಯೂ ಸರ್ಕಾರಕ್ಕೆ ಹೊಸದಾಗಿ ಮೂರು ಬೃಹತ್ ಆರ್ಥಿಕ ಸವಾಲುಗಳು ಎದುರಾಗಿದ್ದು, ಕಬ್ಬಿಣದ ಕಡಲೆಯಾಗಿ ಪರಿಣಿಸುವ ಸಾಧ್ಯತೆ ಇದೆ. 2026-27ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಪರಿಹಾರ, ಜಿ ರಾಮ್ ಜಿ ಯೋಜನೆ, ಜಿಎಸ್‌ಟಿ ಸರಳೀಕರಣದ ಆದಾಯ ನಷ್ಟದ ಹೊರೆಗಳು ಕಂಗೆಡಿಸುವಂತೆ ಮಾಡಿದೆ. ಇದು ಸಿದ್ದರಾಮಯ್ಯ ಬಜೆಟ್ ಲೆಕ್ಕಾಚಾರಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.
ಇಲಾಖಾವಾರು ಬೇಡಿಕೆಗಳ ಕುರಿತು ಸಿದ್ದರಾಮಯ್ಯ ಸಭೆ ಆರಂಭಿಸಿದ್ದು, ಪ್ರಸ್ತಾವನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಲಾಖಾವಾರು ಅಧಿಕಾರಿಗಳ ಜತೆ ಕಳೆದ ಬಜೆಟ್‌ನಲ್ಲಿ ಪ್ರಕಟಿಸಲಾದ ಯೋಜನೆಗಳ ಪ್ರಗತಿ, ಹೊಸ ಯೋಜನೆಗಳ ಅನುಷ್ಠಾನದ ಸಾಧಕ-ಬಾಧಕ ಕುರಿತು ಚರ್ಚೆ ನಡೆಸಿ ಬಜೆಟ್‌ಗೆ ಅನುದಾನ ಹೊಂದಿಸುವಲ್ಲಿ ತೊಡಗಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ನೀರಾವರಿ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.
ಅಲ್ಲದೇ, ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಬೇಕಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೂ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಾಗಿದೆ. ಈ ಎಲ್ಲದರ ನಡುವೆ ಸಿದ್ದರಾಮಯ್ಯಗೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪರಿಹಾರ, ವಿಬಿಜಿ ರಾಮ್ ಜಿ, ಜಿಎಸ್‌ಟಿ ಸರಳೀಕರಣದಿಂದಾದ ನಷ್ಟದ ಹೊರೆಯ ಯಾವ ರೀತಿಯಲ್ಲಿ ಸವಾಲಾಗಿ ಸ್ವೀಕರಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 18 ಸಾವಿರ ಕೋಟಿ ರೂ. ಹೊರೆ
ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನವು ಸರ್ಕಾರದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಭೂಪರಿಹಾರ ಮತ್ತು ಪುನರ್ವಸತಿಗಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 75 ಸಾವಿರ ಕೋಟಿ ರೂ ಅಗತ್ಯವಿದೆ ಎಂಬುದಾಗಿ ಅಂದಾಜಿಸಲಾಗಿದೆ. ಈ ಸಂಬಂಧ 2025ರ ಸೆ.16ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಿ ತೀರ್ಮಾನಿಸಿ, ಭೂಸ್ವಾಧೀನ ಪ್ರಕ್ರಿಯೆಗೆ ಮೊತ್ತ ನಿಗದಿ ಮಾಡಲಾಗಿದೆ. ಮುಳುಗಡೆ ಜಮೀನುಗಳ ಭೂಸ್ವಾಧೀನತೆಗಾಗಿ ಖುಷ್ಕಿ (ಒಣ) ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ., ತರಿ ಜಮೀನಿಗೆ (ನೀರಾವರಿ) ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿ ಮಾಡಲಾಗಿದೆ. ಕಾಲುವೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಖುಷ್ಕಿ (ಒಣ) ಭೂಮಿಗೆ ಪ್ರತಿ ಎಕರೆಗೆ 25 ಲಕ್ಷ ರೂ., ತರಿ ಜಮೀನಿಗೆ (ನೀರಾವರಿ) ಪ್ರತಿ ಎಕರೆಗೆ 30 ಲಕ್ಷ ರೂ. ನಿಗದಿ ಮಾಡಲಾಗಿದೆ.
ಯೋಜನೆಯಡಿಯ ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ರಮಕ್ಕೆ ಅಗತ್ಯವಿರುವ ಹೆಚ್ಚುವರಿ ಸುಮಾರು 78 ಸಾವಿರ ಕೋಟಿ ರೂ. ಮೊತ್ತವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಭರಿಸಲು ಸುಮಾರು 18 ಸಾವಿರ ಕೋಟಿ ರೂ. ವಾರ್ಷಿಕ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಆಯವ್ಯಯದಲ್ಲಿ ಕಲ್ಪಿಸಲು ತೀರ್ಮಾನಿಸಲಾಗಿತ್ತು. 2026-27 ಬಜೆಟ್ ನಲ್ಲಿ ಕೃಷ್ಣಾ ಮೇಲ್ದಂಡೆ ಹಂತ 3ರ ಪರಿಹಾರಕ್ಕಾಗಿ ಸುಮಾರು 18 ಸಾವಿರ ಕೋಟಿ ರೂ.ಗಳನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ಹೆಚ್ಚುವರಿ ಸಾಲದ ಮೊರೆ ಹೋಗಬೇಕು ಅಥವಾ ವೆಚ್ಚ ಕಡಿತದೊಂದಿಗೆ, ಇಲಾಖಾವಾರು ಅನುದಾನ ಕಡಿತಗೊಳಿಸುವ ಅಗತ್ಯ ಇದೆ. ಜಲಸಂಪನ್ಮೂಲ ಇಲಾಖೆಯ ಒಟ್ಟು ಹಂಚಿಕೆಯನ್ನು ಕಡಿತ ಮಾಡಿ ಅದನ್ನು ಭೂ ಪರಿಹಾರಕ್ಕಾಗಿ ಬಳಕೆ ಮಾಡಲು ಆರ್ಥಿಕ ಇಲಾಖೆ ಸಲಹೆ ನೀಡಿದೆ. ಆದರೆ, ಇಷ್ಟೊಂದು ಬೃಹತ್ ಮೊತ್ತದ ಹಣವನ್ನು ಬಜೆಟ್‌ನಲ್ಲಿ ಹೇಗೆ ಮೀಸಲಿಡಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಜಿ ರಾಮ್ ಜಿ ಯೋಜನೆಗೆ ಕೇಂದ್ರ-ರಾಜ್ಯ ಪಾಲಿನ ಬದಲಾವಣೆ
ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ಪರಿಷ್ಕರಿಸಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತರುತ್ತಿರುವುದು ರಾಜ್ಯದ ಬೊಕ್ಕಸಕ್ಕೆ ಪೆಟ್ಟು ನೀಡಿದೆ. ಮನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ. 90ರಷ್ಟು ಮತ್ತು ರಾಜ್ಯ ಸರ್ಕಾರ ಕೇವಲ ಶೇ. 10ರಷ್ಟು ಅನುದಾನವನ್ನು ಭರಿಸುತ್ತಿದ್ದವು. ಆದರೆ, ನೂತನ ಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯದ ಪಾಲು ಶೇ.10ರಿಂದ ಶೇ. 40ಕ್ಕೆ ಏರಿಕೆಯಾಗಲಿದೆ.
ಇದರಿಂದಾಗಿ ರಾಜ್ಯದ ಮೇಲೆ ವಾರ್ಷಿಕವಾಗಿ ಹೆಚ್ಚುವರಿ 3 ಸಾವಿರದಿಂದ 4 ಸಾವಿರ ಕೋಟಿ ರೂ.ಗಳ ಹೊರೆ ಬೀಳಲಿದೆ. ಕೇಂದ್ರದ ಈ ನಡೆಯನ್ನು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ರಾಜ್ಯ ಸರ್ಕಾರ ವಿರೋಧಿಸಿದ್ದರೂ, ಆರ್ಥಿಕವಾಗಿ ಇದನ್ನು ಸರಿದೂಗಿಸುವುದು ಸಿದ್ದರಾಮಯ್ಯ ಅವರಿಗೆ ದೊಡ್ಡ ಸವಾಲಾಗಿದೆ.
2024-25ರಲ್ಲಿ ಮನರೇಗಾದಡಿ ಕರ್ನಾಟಕದಲ್ಲಿ 6,824 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರ 6,251 ಕೋಟಿ ರೂ. ಅನುದಾನ ನೀಡಿತ್ತು. ರಾಜ್ಯ ಸರ್ಕಾರ 573 ಕೋಟಿ ರೂ. ಅನುದಾನ ನೀಡಿತ್ತು. ಗ್ರಾಮೀಣ ಅಭಿವೃದ್ಧಿ ಇಲಾಖೆ ಅಂಕಿಅಂಶ ಪ್ರಕಾರ ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರ ಮನರೇಗಾಗೆ 8,816 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ ಸುಮಾರು 470 ಕೋಟಿ ರೂ. ಬಿಡುಗಡೆ ಮಾಡಿದೆ. ಇದೀಗ 2026-27ನೇ ಸಾಲಿನಲ್ಲಿ ಜಿ ರಾಮ್ ಜಿ ಯೋಜನೆ ಜಾರಿಗೆ ಬರುತ್ತಿರುವ ಕಾರಣ ರಾಜ್ಯ ಸರ್ಕಾರವು ಶೇ.40 ರಷ್ಟು ಅನುದಾನ ನೀಡಬೇಕಾಗಿದೆ. ಇದರಿಂದ ರಾಜ್ಯದ ಮೇಲೆ ವಾರ್ಷಿಕ 3 - 4 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಬಜೆಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಮೀಸಲಿಡುವ ಸಂದಿಗ್ಧತೆಯಲ್ಲಿ ರಾಜ್ಯ ಸರ್ಕಾರ ಇದೆ.
ಜಿಎಸ್‌ಟಿ ಸರಳೀಕರಣದಿಂದ 9 ಸಾವಿರ ಕೋಟಿ ರೂ. ಹೆಚ್ಚುವರಿ ನಷ್ಟ
ರಾಜ್ಯದ ಸ್ವಂತ ತೆರಿಗೆ ಆದಾಯದ ದೊಡ್ಡ ಮೂಲವಾದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರ ಸರಳೀಕರಣವು ರಾಜ್ಯಕ್ಕೆ ಭಾರೀ ಪ್ರಮಾಣದ ಆರ್ಥಿಕ ಹಿನ್ನಡೆ ತಂದಿದೆ. ದರಗಳ ಪುನರ್ ವಿಂಗಡಣೆಯಿಂದಾಗಿ ರಾಜ್ಯದ ಜಿಎಸ್‌ಟಿ ಬೆಳವಣಿಗೆ ದರವು ಶೇ. 12ರಿಂದ ಶೇ. 5ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ವಾರ್ಷಿಕವಾಗಿ ಸುಮಾರು 9 ಸಾವಿರ ಕೋಟಿ ರೂ. ಆದಾಯದ ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಒಂದು ಕಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕು, ಇನ್ನೊಂದು ಕಡೆ ಪ್ರಮುಖ ಆದಾಯದ ಮೂಲವೇ ಬತ್ತಿ ಹೋಗುತ್ತಿದೆ. ಈ 9 ಸಾವಿರ ಕೋಟಿ ರೂ. ಕೊರತೆಯನ್ನು ತುಂಬಲು ಸರ್ಕಾರವು ಅಬಕಾರಿ ಅಥವಾ ನೋಂದಣಿ ಮತ್ತು ಮುದ್ರಾಂಕ ಶುಲ್ಕದಂತಹ ಇತರ ಮೂಲಗಳ ಮೇಲೆ ಅವಲಂಬಿತವಾಗಬೇಕಿದೆ. ಇದು ಸಾಮಾನ್ಯ ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಪ್ರೊ. ಎ.ನಾರಾಯಣ ಅವರು, "ಕೇಂದ್ರದಿಂದ ಸರಿಯಾಗಿ ಹಣ ಬಂದರೆ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಹೊರೆಯಾಗುವುದಿಲ್ಲ. ಆದರೆ, ಅನುದಾನ ಬಾರದ ಕಾಣದ ಆರ್ಥಿಕ ಹೊರೆಯಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಪರಿಹಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈಗ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಅನುದಾನ ನೀಡಲೇಬೇಕು. ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ದಕ್ಷಿಣ ರಾಜ್ಯಗಳು ಒಗ್ಗೂಡಿ ಜನತೆಯಲ್ಲಿ ಅರಿವು ಮೂಡಿಸಬೇಕು. ಅಲ್ಲದೇ, ರಾಜಕೀಯ ಸಮಸ್ಯೆಯನ್ನು ರಾಜಕೀಯವಾಗಿಯೇ ಪರಿಹರಿಸಿಕೊಳ್ಳಬೇಕು," ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಎನ್. ನಾಗಾಂಬಿಕಾ ದೇವಿ ಮಾತನಾಡಿ, "ಗ್ಯಾರಂಟಿ ಯೋಜನೆ ಸಹಜವಾಗಿ ಸರ್ಕಾರದ ಮೇಲೆ ಹೆಚ್ಚುವರಿ ಹೊರೆ ಇದ್ದೇ ಇರುತ್ತದೆ. ಇದರೊಂದಿಗೆ ಕೇಂದ್ರದ ಜಿಎಸ್‌ಟಿ ಸರಳೀಕರಣ, ವಿಬಿಜಿ ರಾಮ್ ಜಿ ಯೋಜನೆಯಿಂದ ಹೆಚ್ಚುವರಿ ಹೊರೆಯಾಗಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಪರಿಹಾರ ನೀಡಬೇಕು. ಇದಲ್ಲದೇ ಅಭಿವೃದ್ಧಿ ಯೋಜನೆಗಳಿಗೂ ಸಹ ಸರ್ಕಾರ ಅನುದಾನ ಒದಗಿಸಬೇಕು. ಇದನ್ನು ಸರ್ಕಾರ ಯಾವ ರೀತಿಯಲ್ಲಿ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕು," ಎಂದು ಹೇಳಿದರು.
ಈಗಾಗಲೇ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ವರ್ಷಕ್ಕೆ ಸರಿಸುಮಾರು 55 ಸಾವಿರ ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಈ ಯೋಜನೆಗಳು ಸರ್ಕಾರದ ಒಟ್ಟು ಬಜೆಟ್ ಗಾತ್ರದ ಗಣನೀಯ ಭಾಗವನ್ನು ಆಕ್ರಮಿಸಿಕೊಂಡಿದೆ. 2026-27ರ ವೇಳೆಗೆ ಹಣದುಬ್ಬರ ಮತ್ತು ಫಲಾನುಭವಿಗಳ ಸಂಖ್ಯೆ ಹೆಚ್ಚಳದಿಂದಾಗಿ ಈ ಮೊತ್ತ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದಕ್ಕೆ ಹೇಗೆ ಅನುದಾನ ಹೊಂದಿಸಲಾಗುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಹೆಚ್ಚುವರಿ ಹೊರೆ ನಿಭಾಯಿಸುವ ಸವಾಲು
ಕೃಷ್ಣಾ ಮೇಲ್ದಂಡೆ ಯೋಜನೆಗೆ 18 ಸಾವಿರ ಕೋಟಿ ರೂ., ವಿಬಿಜಿ ರಾಮ್ ಜಿ ಯೋಜನೆಗೆ 4 ಸಾವಿರ ಕೋಟಿ ರೂ., ಹಾಗೂ ಜಿಎಸ್‌ಟಿ ಸರಳೀಕರಣದಿಂದ 9 ಸಾವಿರ ಕೋಟಿ ರೂ. ನಷ್ಟ ಸೇರಿದಂತೆ 31 ಸಾವಿರ ಕೋಟಿ ರೂ. ನಷ್ಟು ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗಲಿದೆ.
ಇದನ್ನು ನಿಭಾಯಿಸಲು ರಾಜ್ಯದ ಸಾಲದ ಮಿತಿಯನ್ನು ಮೀರಿ ಸಾಲ ಮಾಡಬೇಕಾಗುತ್ತದೆ. ಆದರೆ ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆಗೆ ಕಾರಣವಾಗಬಹುದು. ಅಲ್ಲದೇ, ಭವಿಷ್ಯದ ಪೀಳಿಗೆಯ ಮೇಲೆ ಸಾಲದ ಹೊರೆ ಹೊರಿಸಿದಂತಾಗುತ್ತದೆ.
ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆಯಿಂದ ಪಾರಾಗಬೇಕಾದರೆ ಲೋಕೋಪಯೋಗಿ, ಶಿಕ್ಷಣ, ಆರೋಗ್ಯದಂತಹ ಪ್ರಮುಖ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಿ, ಈ ತುರ್ತು ಹೊರೆಗಳನ್ನು ನಿಭಾಯಿಸಬೇಕಾಗುತ್ತದೆ. ಇದು ರಾಜ್ಯದ ಮೂಲಸೌಕರ್ಯ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದಾಗಿದೆ.
ಈ ನಡುವೆ, ಪೆಟ್ರೋಲ್, ಡೀಸೆಲ್, ಮದ್ಯದ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸಿದರೆ ಆದಾಯ ಸಂಗ್ರಹಿಸಬಹುದು. ಆದರೆ ಇದು ಜನರ ಆಕ್ರೋಶಕ್ಕೆ ಕಾರಣವಾಗಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ ಯಾವ ರೀತಿಯಲ್ಲಿ ಸಂಪನ್ಮೂಲ ಕ್ರೋಢೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

