A solid foundation for Developed India; Minister HDK, MP Bommayi appreciated the Union Budget
x

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಬಿ.ವೈ. ರಾಘವೇಂದ್ರ

'ವಿಕಸಿತ ಭಾರತ'ಕ್ಕೆ ಭದ್ರ ಬುನಾದಿ; ಕೇಂದ್ರ ಬಜೆಟ್‌ಗೆ ಸಚಿವ ಎಚ್‌ಡಿಕೆ, ಸಂಸದ ಬೊಮ್ಮಾಯಿ ಮೆಚ್ಚುಗೆ

ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಹಾಗೆಯೇ 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ ಎಂದು ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.


Click the Play button to hear this message in audio format

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಜನಕೇಂದ್ರಿತ ಹಾಗೂ ದೇಶವನ್ನು ಆರ್ಥಕವಾಗಿ ಮುನ್ನಡೆಸುವ ಪರಿಪೂರ್ಣ ಬಜೆಟ್‌ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ್ದು, " 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ. ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಎಂದು ರಾಜ್ಯ ಸರ್ಕಾರ ಸಾಮಾನ್ಯವಾಗಿ ದೂರುತ್ತಿತ್ತು. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ 63,049 ಕೋಟಿ ರೂ. ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು" ಎಂದರು.

ರೈಲು ಸಂಪರ್ಕದಲ್ಲಿ ಕ್ರಾಂತಿ

ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ನಿರಾಶೆಯೇನೂ ಆಗಿಲ್ಲ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಹಾಗೆಯೇ ಗೋಡಂಬಿ ಮತ್ತು ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ. ಶ್ರೀಗಂಧ, ತೆಂಗು ಬೆಳೆ, ಕೋಕೋ ಬೆಳೆಗೆ ವಿಶೇಷ ಯೋಜನೆ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಿಗೆ ಉಪಯೋಗವಾಗುತ್ತದೆ. ಹೈದರಾಬಾದ್-ಬೆಂಗಳೂರು, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. ಈಗಾಗಲೇ ರಾಜ್ಯದ ಹಲವು ವೇಗದ ರೈಲುಗಳು ಕಾರ್ಯಾಚರಿಸುತ್ತಿದ್ದು, ವಂದೇ ಭಾರತ್ ರೈಲುಗಳು ಕೂಡ ಸೇರ್ಪಡೆಯಾಗಿದೆ. ಈಗ ಹೈ ಸ್ಪೀಡ್ ರೈಲುಗಳು ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಪರ್ಕದಲ್ಲಿ ಹೊಸ ಕ್ರಾಂತಿಯಾಗಲಿದೆ ಎಂದು ತಿಳಿಸಿದ್ದಾರೆ.

ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗುವತ್ತ ಭಾರತ

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, "ಭಾರತವನ್ನು ವಿಶ್ವದ 3 ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ವಿಕಸಿತ ಭಾರತ ಕಟ್ಟುವಂತ ಅಭಿವೃದ್ಧಿ ಶೀಲವಾಗಿರುವ ಮಾದರಿ ಬಜೆಟ್‌ನ್ನು ಕೇಂದ್ರ ಸರ್ಕಾರ ಮಂಡಿಸಿದೆ. ವಿಶ್ವದ ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಬಜೆಟ್‌ ಇದಾಗಿದೆ. ನಾಗರಿಕರ ಸಾಮರ್ಥ್ಯವನ್ನು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಅಳವಡಿಸಲು ಯೋಜನೆಗಳು ಹಾಗೂ ಹಲವಾರು ನೀತಿಗಳನ್ನು ಈ ಬಜೆಟ್ ನಲ್ಲಿ ಘೋಷಿಸಿದ್ದಾರೆ" ಎಂದರು.

7.4 ಆರ್ಥಿಕ ಬೆಳವಣಿಗೆ

ಭವಿಷ್ಯದ ಚಾಂಪಿಯನ್‌ಗಳಿಗಾಗಿ ಸುಮಾರು 10 ಸಾವಿರ ಕೋಟಿ ರೂ. ಆರ್ಥಿಕ ನೆರವು ಕೊಡುವಂತಹ ಯೋಜನೆ ಮಾಡಿದ್ದಾರೆ. ಆರ್ಥಿಕ ಅಭಿವೃದ್ಧಿ ಸ್ಥೀರಿಕರಣ ಮತ್ತು ಹಣದುಬ್ಬರ ನಿಯಂತ್ರಣ ಮಾಡುವುದು, ಜನರ ಆಶೋತ್ತರಗಳನ್ನು ಈಡೇರಿಸುವುದರ ಜೊತೆಗೆ 7.4 ಆರ್ಥಿಕ ಬೆಳವಣಿಗೆಯನ್ನು ಮುಂದುವರೆಸಿ ಎಲ್ಲ ಜನರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿ ಬಜೆಟ್ ಇದಾಗಿದೆ ಎಂದು ಹೇಳಿದರು.

ವಿತ್ತೀಯ ಕೊರತೆ ಶೇ.4.3 ಕ್ಕೆ ನಿಯಂತ್ರಣ

ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗೆ ವಿಶೇಷವಾದ ಒತ್ತು ಕೊಟ್ಟಿದ್ದಾರೆ. ಟೆಕ್ಸ್ ಟೈಲ್, ಚರ್ಮದ ಉತ್ಪನ್ನಗಳು, ಐಟಿ ಬಿಟಿ ಡಾಟಾ ಸೆಂಟರ್‌ಗಳಿಗೆ, ವಿಶೇಷವಾಗಿ ನಗರ ಮೂಲಸೌಕರ್ಯಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಬಹಳಷ್ಟು ಒತ್ತು ಕೊಡಲಾಗಿದೆ. ಸುಮಾರು 12.5 ಲಕ್ಷ ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ಹೂಡುತ್ತಿದೆ. ವಿತ್ತೀಯ ಕೊರತೆಯನ್ನು 4.3ಕ್ಕೆ ನಿಯಂತ್ರಣ ಮಾಡಿರುವುದು ದೊಡ್ಡ ಸಾಧನೆ ಎಂದು ತಿಳಿಸಿದರು.

ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ವೇಗ

"ಕೇಂದ್ರ ಬಜೆಟ್‌ ಭವಿಷ್ಯದ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಅಭೂತಪೂರ್ವ ಉತ್ತೇಜನ ನೀಡಲಾಗಿದೆ. 12.2 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿದು, 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳು, 20 ಹೊಸ ರಾಷ್ಟ್ರೀಯ ಜಲಮಾರ್ಗಗಳು ಘೋಷಿಸಿರುವುದರಿಂದ ದೇಶದ ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ವೇಗ ನೀಡಲಿದೆ" ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ.

Read More
Next Story