
ರಾಜ್ಯಪಾಲರು v/s ಸರ್ಕಾರ| ವಿಬಿ ಜಿ ರಾಮ್ ಜಿ ; ಕಾಂಗ್ರೆಸ್ನ ಆಂದೋಲನ, ಬಿಜೆಪಿಯ ಜನಜಾಗೃತಿ
ಕಾಂಗ್ರೆಸ್ ಆಡಳಿತವಿರುವ ಕಡೆ ವಿಬಿ ಜಿ ರಾಮ್ ಜಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಸೇರಿ ಹಿರಿಯ ಬಿಜೆಪಿ ನಾಯಕರು ಜನ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ 'ಮನರೇಗಾ' ಯೋಜನೆ ಬದಲಿಗೆ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ವಿಬಿ-ಜಿ ರಾಮ್ ಜಿ) ಕಾಯ್ದೆ ಜಾರಿಗೆ ತಂದಿರುವುದು ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಕೇರಳ ನಂತರ ಕರ್ನಾಟಕದಲ್ಲಿ ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ಲೋಕಭವನ ನಡುವೆ ತಿಕ್ಕಾಟವೂ ನಡೆದಿದೆ.
ವಿಬಿ ಜಿ ರಾಮ್ ಯೋಜನೆ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಆಂದೋಲನ ರೂಪಿಸುತ್ತಿರುವ ಕಾಂಗ್ರೆಸ್ ಪಕ್ಷದ ತಂತ್ರಕ್ಕೆ ಈಗ ಪ್ರತಿತಂತ್ರ ರೂಪಿಸಲು ಕೇಂದ್ರದ ಬಿಜೆಪಿ ನಾಯಕರೇ ಅಖಾಡಕ್ಕೆ ಧುಮುಕಿದ್ದಾರೆ. ಮನರೇಗಾ ಲೋಪಗಳು ಹಾಗೂ ವಿಬಿ ಜಿ ರಾಮ್ ಜಿ ಯೋಜನೆಯ ಅನುಕೂಲತೆಗಳ ಕುರಿತು ಜನಜಾಗೃತಿ ಮೂಡಿಸುವಂತೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ವಿಬಿ ಜಿ ರಾಮ್ ಜಿಗೆ ಕಾಂಗ್ರೆಸ್ ವಿರೋಧ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಹಾಗೂ ಸ್ವರೂಪ ಬದಲಿಸಿದ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಖಂಡಿಸಿದ್ದು, ದೇಶವ್ಯಾಪಿ ʼಮನರೇಗಾ ಬಚಾವೋ ಆಂದೋಲನʼಕ್ಕೆ ಕರೆ ನೀಡಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಈಗಾಗಲೇ ಹೊಸ ಕಾಯ್ದೆಯ ವಿರುದ್ಧ ದನಿಯೆತ್ತಿವೆ. ಯೋಜನೆಯಲ್ಲಿ ರಾಜ್ಯಗಳ ಪಾಲು ಹೆಚ್ಚಿಸುವ ಮೂಲಕ ಆರ್ಥಿಕ ಹೊಡೆತ ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯಗಳ ಅಭಿಪ್ರಾಯ ಆಲಿಸದೇ ಏಕಪಕ್ಷಿಯವಾಗಿ ಕಾಯ್ದೆ ಜಾರಿ ಮಾಡಿರುವುದು ದೇಶದ ಒಕ್ಕೂಟ ವ್ಯವಸ್ಥೆ ಮೇಲಿನ ಹಲ್ಲೆ ಎಂದು ಟೀಕಿಸಿವೆ. ವಿಬಿ ಜಿ ರಾಮ್ ಯೋಜನೆ ಬಗ್ಗೆ ರಾಜ್ಯ ಸರ್ಕಾರವು ತಳಮಟ್ಟದಿಂದ ಹೋರಾಟ ರೂಪಿಸುತ್ತಿರುವುದು ಬಿಜೆಪಿಗರಲ್ಲಿ ಭೀತಿ ಮೂಡಿಸಿದೆ.
ಕೇಂದ್ರ ಸಚಿವರಿಂದ ವಿಶೇಷ ಸಭೆ
ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಎದ್ದಿರುವ ವಿರೋಧಿ ಅಲೆಗೆ ಕಡಿವಾಣ ಹಾಕಲು ಕೇಂದ್ರದ ಬಿಜೆಪಿ ನಾಯಕರು ರಾಜ್ಯಕ್ಕೆ ಧಾವಿಸಿ, ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ. ಮನರೇಗಾ ಯೋಜನೆಯ ಪರಿಷ್ಕೃತ ಕಾಯ್ದೆಯೇ ವಿಬಿ ಜಿ ರಾಮ್ ಜಿ ಕಾಯ್ದೆ. ವಾರ್ಷಿಕ 100 ದಿನಗಳ ಉದ್ಯೋಗವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೇವಲ ಗುಂಡಿ ತೆಗೆಯುವ ಕೆಲಸದ ಬದಲು, ಜಲ ಸಂರಕ್ಷಣೆ ಮತ್ತು ಗ್ರಾಮೀಣ ಮೂಲಸೌಕರ್ಯದಂತಹ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂಬ ಅರಿವು ಮೂಡಿಸಲಾಗುತ್ತಿದೆ.
ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಬಯೋ ಮೆಟ್ರಿಕ್ ಹಾಜರಾತಿ, ಭ್ರಷ್ಟಾಚಾರ ತಡೆಗೆ ಕೃತಕ ಬುದ್ದಿಮತ್ತೆ ಬಳಸಲಾಗುತ್ತದೆ. ಇದರಿಂದ ಪಾರದರ್ಶಕತೆ ಕಾಣಬಹುದು. ಈ ಹಿಂದೆ ಕೇಂದ್ರ ಸರ್ಕಾರವೇ ಯೋಜನೆಗೆ ಬಹುಪಾಲು ಹಣ ನೀಡುತ್ತಿತ್ತು. ಈಗ ಶೇ 60:40 ಅನುಪಾತದಲ್ಲಿ ರಾಜ್ಯಗಳೂ ಹಣ ಭರಿಸಬೇಕಿದೆ. ಇದರಿಂದ ಕಾಯ್ದೆ ಜಾರಿಯಲ್ಲಿ ರಾಜ್ಯ ಸರ್ಕಾರಗಳಿಗೆ ಬದ್ಧತೆ ಬರಲಿದೆ ಎಂಬುದನ್ನು ಒತ್ತಿ ಹೇಳಲಾಗುತ್ತಿದೆ.
ನರೇಗಾ ಬಚಾವೋ ಆಂದೋಲನ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಡವರ ಉದ್ಯೋಗ ಹಕ್ಕನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯವರಿಗೆ ಗಾಂಧೀಜಿ ಹೆಸರೆಂದರೆ ದ್ವೇಷ. ಹಾಗಾಗಿ ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿದೆ. ರಾಜ್ಯಗಳು ಶೇ 40 ರಷ್ಟು ಹಣವನ್ನು ಭರಿಸಬೇಕು ಎಂಬ ನಿಯಮವು ರಾಜ್ಯಗಳ ಆರ್ಥಿಕತೆಗೆ ಪೆಟ್ಟು ನೀಡಲಿವೆ ಎಂದು ಕಾಂಗ್ರೆಸ್ ವಾದಿಸುತ್ತಿದೆ. ಕರ್ನಾಟಕದಲ್ಲಿ 'ಮನರೇಗಾ ಬಚಾವೋ' ಹೆಸರಿನಲ್ಲಿ ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಆರಂಭಿಸಲು ಸಿದ್ಧತೆ ನಡೆಯುತ್ತಿದೆ.
ಬಿಜೆಪಿಯ ʼವಿಕಸಿತ ಭಾರತ'ದ ಮಂತ್ರ
ಮನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರು ಕೈ ಬಿಟ್ಟಿದ್ದರಿಂದ ದೇಶದ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಆಡಳಿತವಿರುವ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳ ಅಧಿಕಾರವಿರುವ ಕಡೆ ಎನ್ಡಿಎ ಸರ್ಕಾರ ಮುಜುಗರ ಅನುಭವಿಸುತ್ತಿದೆ. ಹಾಗಾಗಿ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಕರ್ನಾಟಕದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಯೋಜನೆ ಲಾಭಗಳ ಬಗ್ಗೆ ತಿಳಿಸಲು ತೀರ್ಮಾನಿಸಿದೆ. ಕಾಂಗ್ರೆಸ್ ಸುಳ್ಳು ಮಾಹಿತಿ ಹರಡುತ್ತಿದೆ, ನಾವು ಕೆಲಸದ ದಿನಗಳನ್ನು ಹೆಚ್ಚಿಸಿದ್ದೇವೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪ್ರತಿಪಾದಿಸುತ್ತಿವೆ.

