GST Rate Revision Impact Karnataka Faces ₹18,500 Crore Revenue Loss; CM Siddaramaiah Writes to PM Modi
x

ಪಿಎಂ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ

ಜಿಎಸ್‌ಟಿ ದರ ಪರಿಷ್ಕರಣೆ ಎಫೆಕ್ಟ್: ರಾಜ್ಯದ ಬೊಕ್ಕಸಕ್ಕೆ 18,500 ಕೋಟಿ ರೂ. ನಷ್ಟ; ಪ್ರಧಾನಿಗೆ ಸಿಎಂ ಪತ್ರ

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದರ ಸರಳೀಕರಣದ ಪ್ರಸ್ತಾಪ ಬಂದಾಗ, ಇದರಿಂದ ರಾಜ್ಯಗಳು ಶೇ.15-20ರಷ್ಟು ಆದಾಯ ಕೊರತೆ ಎದುರಿಸಲಿವೆ ಎಂಬ ಆತಂಕ ವ್ಯಕ್ತಪಡಿಸಲಾಗಿತ್ತು.


Click the Play button to hear this message in audio format

ಇತ್ತೀಚೆಗೆ ನಡೆದ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ಜಿಎಸ್‌ಟಿ ದರ ಪರಿಷ್ಕರಣೆ ನಿರ್ಧಾರಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ ಬಿದ್ದಿದೆ. ಆದಾಯದಲ್ಲಿ ಉಂಟಾಗಿರುವ ತೀವ್ರ ಕುಸಿತ ಮತ್ತು ಆರ್ಥಿಕ ನಷ್ಟವನ್ನು ಭರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ತೆರಿಗೆ ದರ ಇಳಿಕೆಯಿಂದ ಉಂಟಾಗಿರುವ ಆರ್ಥಿಕ ಪರಿಣಾಮಗಳು ಮತ್ತು ರಾಜ್ಯದ ಮೇಲಾಗುತ್ತಿರುವ ಹೊರೆಯ ಬಗ್ಗೆ ಅಂಕಿ-ಅಂಶಗಳ ಸಹಿತ ಸಿಎಂ ಪತ್ರದಲ್ಲಿ ವಿವರಿಸಿದ್ದು, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆದಾಯದಲ್ಲಿ ತೀವ್ರ ಕುಸಿತ: ಆತಂಕ ನಿಜವಾಯ್ತು

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದರ ಸರಳೀಕರಣದ ಪ್ರಸ್ತಾಪ ಬಂದಾಗ, ಇದರಿಂದ ರಾಜ್ಯಗಳು ಶೇ.15-20ರಷ್ಟು ಆದಾಯ ಕೊರತೆ ಎದುರಿಸಲಿವೆ ಎಂಬ ಆತಂಕ ವ್ಯಕ್ತಪಡಿಸಲಾಗಿತ್ತು. ಇದೀಗ ಅಂಕಿ-ಅಂಶಗಳನ್ನು ಗಮನಿಸಿದರೆ ಆ ಆತಂಕ ಸತ್ಯವಾಗಿದೆ. 2024ರ ನವೆಂಬರ್‌ಗೆ ಹೋಲಿಸಿದರೆ, 2025ರ ನವೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಶೇ.2 ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.9.3 ರಷ್ಟು ಬೆಳವಣಿಗೆ ದಾಖಲಾಗಿತ್ತು ಎಂಬುದನ್ನು ಸಿಎಂ ಉಲ್ಲೇಖಿಸಿದ್ದಾರೆ.

ರಾಜ್ಯಕ್ಕೆ 18,500 ಕೋಟಿ ರೂ. ನಷ್ಟದ ಭೀತಿ

ಕರ್ನಾಟಕದ ಜಿಎಸ್‌ಟಿ ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿದ್ದು, ಪ್ರಸ್ತುತ ಪ್ರವೃತ್ತಿಯ ಪ್ರಕಾರ ಈ ವರ್ಷ ರಾಜ್ಯಕ್ಕೆ ಸುಮಾರು 5,000 ಕೋಟಿ ರೂ. ಆದಾಯ ನಷ್ಟವಾಗಲಿದೆ. ಇಡೀ ಆರ್ಥಿಕ ವರ್ಷಕ್ಕೆ ಇದು 9,000 ಕೋಟಿ ರೂ. ತಲುಪುವ ಸಾಧ್ಯತೆಯಿದೆ. ಇದಲ್ಲದೆ, ಪರಿಹಾರ ಸೆಸ್ ವಿಲೀನಗೊಳ್ಳದ ಕಾರಣ ರಾಜ್ಯಕ್ಕೆ ಹೆಚ್ಚುವರಿಯಾಗಿ ಅಂದಾಜು 9,500 ಕೋಟಿ ರೂ. ನಷ್ಟವಾಗಲಿದ್ದು, ಒಟ್ಟಾರೆಯಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 18,500 ಕೋಟಿ ರೂ. ನಷ್ಟವಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

ಹಬ್ಬವಿದ್ದರೂ ಏರದ ವಹಿವಾಟು

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಕಾರಣ ವ್ಯಾಪಾರ ವಹಿವಾಟು ಜೋರಾಗಿರುತ್ತದೆ. ಆದರೆ, 2025ರ ಅಕ್ಟೋಬರ್‌ನಲ್ಲಿ ಹಬ್ಬದ ಸೀಸನ್ ಇದ್ದರೂ ತೆರಿಗೆ ಸಂಗ್ರಹದಲ್ಲಿ ಋಣಾತ್ಮಕ ಬೆಳವಣಿಗೆ ಕಂಡುಬಂದಿರುವುದು ಆರ್ಥಿಕ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ರಾಷ್ಟ್ರಮಟ್ಟದಲ್ಲೂ ಇದೇ ಪ್ರವೃತ್ತಿ ಮುಂದುವರಿದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಂದಾಜು 1.2 ಲಕ್ಷ ಕೋಟಿ ರೂ.ಗಳಷ್ಟು ಆದಾಯ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪಾನ್ ಮಸಾಲಾ ಸೆಸ್ ಹಂಚಿಕೆಗೆ ಆಗ್ರಹ

ಕೇಂದ್ರ ಸರ್ಕಾರವು ಪಾನ್ ಮಸಾಲಾ ಮೇಲೆ ಸೆಸ್ ವಿಧಿಸುತ್ತಿದ್ದು, ಇದನ್ನು ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ರಾಜ್ಯಗಳಿಗೆ ನೀಡಲು ಮುಂದಾಗಿರುವುದು ರಾಜ್ಯಗಳ ಸ್ವಾಯತ್ತತೆಯನ್ನು ಕುಂಠಿತಗೊಳಿಸುತ್ತದೆ. ಪಾನ್ ಮಸಾಲಾ ಜಿಎಸ್‌ಟಿ ವ್ಯಾಪ್ತಿಯ ವಸ್ತುವಾಗಿರುವುದರಿಂದ, ಅದರಿಂದ ಬರುವ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ 50:50 ಅನುಪಾತದಲ್ಲಿ ನೇರವಾಗಿ ಹಂಚಿಕೆ ಮಾಡಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಸಹಕಾರ ತತ್ವದಡಿ ರಾಜ್ಯಗಳು ಕೇಂದ್ರದ ನಿರ್ಧಾರಗಳನ್ನು ಬೆಂಬಲಿಸಿವೆ. ಈಗ ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಬೇಕು. ದರ ಪರಿಷ್ಕರಣೆಯಿಂದ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಮತ್ತು 2024-25 ನೇ ಸಾಲನ್ನು ಮೂಲ ವರ್ಷವನ್ನಾಗಿ ಪರಿಗಣಿಸಿ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

Read More
Next Story