
MGNREGA v/s VB-G RAM G Part-4| ಕಮಲ ಪಾಳಯಕ್ಕೆ ಮುಳುವಾಗಲಿದೆಯೇ ಉದ್ಯೋಗ ಖಾತ್ರಿ ಯೋಜನೆ ಬದಲಾವಣೆ?
ಸಾಮಾನ್ಯವಾಗಿ ಕೇಂದ್ರದ ಯೋಜನೆಗಳು ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ವರವಾಗಲಿವೆ. ಆದರೆ, 'ವಿಬಿ ಜಿ ರಾಮ್ ಜಿ' ಯೋಜನೆಯು ಸ್ಥಳೀಯ ಬಿಜೆಪಿ ನಾಯಕರಿಗೆ ಸಮಸ್ಯೆ ತಂದೊಡ್ಡುವ ಆತಂಕ ಮೂಡಿಸಿದೆ.
ಮನರೇಗಾ ಯೋಜನೆಗೆ ಇತಿಶ್ರೀ ಹಾಡಿರುವ ಕೇಂದ್ರ ಸರ್ಕಾರ, ವಿಬಿ ಜಿ ರಾಮ್ ಜಿ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ನೀಡಲು ಮುಂದಾಗಿದೆ. ಮನರೇಗಾ ಹೆಸರು ಹಾಗೂ ಯೋಜನೆಯ ಸ್ವರೂಪ ಬದಲಿಸಿರುವ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸಿದರೆ, ಎನ್ ಡಿಎ ಮಿತ್ರ ಪಕ್ಷಗಳು ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿವೆ. ಆದರೆ, ಹೊಸ ಯೋಜನೆಯು ಹಲವು ರಾಜ್ಯಗಳಲ್ಲಿ ಬಿಜೆಪಿಗೆ ಪೆಟ್ಟು ನೀಡುವ ಆತಂಕ ಕಾಡುತ್ತಿದೆ.
ಪ್ರಸ್ತುತ, ಕರ್ನಾಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ವಿಧಾನಪರಿಷತ್ ಚುನಾವಣೆ, ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಕಾಂಗ್ರೆಸ್ ಪಕ್ಷ ಮನರೇಗಾ ಯೋಜನೆ ರದ್ದುಪಡಿಸಿದ ಕೇಂದ್ರದ ವಿರುದ್ಧ ನರೇಗಾ ಬಚಾವೋ ಆಂದೋಲನಕ್ಕೆ ಕರೆ ನೀಡಿದೆ. ಹೊಸ ಯೋಜನೆಯಿಂದ ಆಗುವ ಅನಾನುಕೂಲತೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದೆ. ಹಾಗಾಗಿ, 'ವಿಬಿ ಜಿ ರಾಮ್ ಜಿ' ಯೋಜನೆಯು ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಕೇಂದ್ರದ ಯೋಜನೆಗಳನ್ನೇ ಬಿಜೆಪಿಯು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ 'ವಿಬಿ ಜಿ ರಾಮ್ ಜಿ' ಯೋಜನೆಯಿಂದ ಬಿಜೆಪಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಗ್ರಾಮೀಣ ಮಟ್ಟದಲ್ಲಿ ಹೊಸ ಯೋಜನೆ ಬಗ್ಗೆ ಅಸಮಾಧಾನ ಮಡುಗಟ್ಟುತ್ತಿದೆ. ಯೋಜನೆಯ ತಾಂತ್ರಿಕ ಅಂಶಗಳು ಮತದಾರರ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿವೆ ಎಂಬ ಮಾತುಗಳು ಸ್ಥಳೀಯ ನಾಯಕರಲ್ಲಿ ಕೇಳಿ ಬರುತ್ತಿವೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಥಳೀಯ ಸಮಸ್ಯೆಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ 'ವಿಬಿ ಜಿ ರಾಮ್ ಜಿ' ಯೋಜನೆಯಿಂದಾಗಿ ಉಂಟಾಗಬಹುದಾದ ಸಾಮಾಜಿಕ ಅಥವಾ ಆರ್ಥಿಕ ಪರಿಣಾಮಗಳು ನೇರವಾಗಿ ಬಿಜೆಪಿ ಮತಬ್ಯಾಂಕ್‌ಗೆ ಪೆಟ್ಟು ನೀಡಬಹುದು ಎನ್ನಲಾಗಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರರು ಮತ್ತು ಶಿಕ್ಷಕರ ಮನವೊಲಿಸುವುದು ಕಷ್ಟವಾಗಬಹುದು. ಗ್ರಾಮ, ಜಿಲ್ಲಾ, ತಾಲೂಕು ಪಂಚಾಯಿತಿಯಲ್ಲಿ ನೇರವಾಗಿ ರೈತರು ಮತ್ತು ಸಾಮಾನ್ಯ ಜನರ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. 'ವಿಬಿ ಜಿ ರಾಮ್ ಜಿ' ಯೋಜನೆ ಗ್ರಾಮೀಣ ಮತದಾರರಲ್ಲಿ ಗೊಂದಲ ಮೂಡಿಸಿದರೆ ಬಿಜೆಪಿಯ ಗ್ರಾಮ ಸ್ವರಾಜ್ಯ ಕನಸಿಗೆ ಹಿನ್ನಡೆಯಾಗಬಹುದು. ಈಗಾಗಲೇ ರಾಜ್ಯ ಕಾಂಗ್ರೆಸ್ ಈ ಯೋಜನೆಯಲ್ಲಿನ ಲೋಪದೋಷಗಳನ್ನು ಜನರ ಮುಂದಿಡಲು ಸನ್ನದ್ಧವಾಗಿದೆ. ಕೇಂದ್ರದ ಯೋಜನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಚುನಾವಣಾ ಕಣಕ್ಕೆ ಇಳಿಯಲು ತಂತ್ರ ರೂಪಿಸಿವೆ ಎಂದು ಬಿಜೆಪಿ ನಾಯಕರೇ ಬೇಸರ ವ್ಯಕ್ತಪಡಿಸಿದ್ದಾರೆ.
ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ತರುವ ಮೂಲಕ ಬಿಜೆಪಿಯು ಕಳೆದ ಹತ್ತು ವರ್ಷಗಳಲ್ಲಿ ತನ್ನ ಮತಬ್ಯಾಂಕನ್ನು ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ. ನರೇಗಾ ಯೋಜನೆಯು ಹಳ್ಳಿಗಳಲ್ಲಿನ ಸಣ್ಣ ರೈತರು ಮತ್ತು ಭೂಹೀನ ಕಾರ್ಮಿಕರಿಗೆ ನೇರ ನಗದು ವರ್ಗಾವಣೆಯ ಪ್ರಮುಖ ಮೂಲವಾಗಿದೆ. ಈ ಯೋಜನೆಯ ಹೆಸರನ್ನು ಬದಲಿಸಿರುವುದು ಅಥವಾ ನಿಯಮಗಳನ್ನು ಕಠಿಣಗೊಳಿಸಿರುವುದು ಗ್ರಾಮೀಣ ಮತದಾರರಲ್ಲಿ ಸರ್ಕಾರವು ಬಡವರ ವಿರೋಧಿ ಎಂಬ ತಪ್ಪು ಸಂದೇಶ ರವಾನಿಸಬಹುದು ಎಂಬುದು ಬಿಜೆಪಿಯ ಒಂದು ವರ್ಗದ ನಾಯಕರ ದುಗುಡವಾಗಿದೆ.
ಕೋವಿಡ್ ನಂತರದ ದಿನಗಳಲ್ಲಿ ಗ್ರಾಮೀಣ ಭಾರತದ ಆರ್ಥಿಕತೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬರಗಾಲ, ಅಕಾಲಿಕ ಮಳೆಯಂತಹ ಸಂದರ್ಭಗಳಲ್ಲಿ ನರೇಗಾ ಏಕೈಕ ಆಸರೆಯಾಗಿದೆ. ಈ ಯೋಜನೆಯನ್ನು ಬದಲಿಸಿ ವಿಕಸಿತ ಭಾರತದಂತಹ ಕೇವಲ ಆಸ್ತಿ ಸೃಜನೆಗೆ ಸೀಮಿತಗೊಳಿಸಿದರೆ, ತಕ್ಷಣದ ಕೂಲಿ ಹಣವನ್ನು ನಂಬಿಕೊಂಡಿರುವ ಕೋಟ್ಯಂತರ ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ಹೇಳಲಾಗಿದೆ
ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹೊರೆ
ಮನರೇಗಾದಲ್ಲಿ ಕೂಲಿ ಹಣವನ್ನು ಶೇ. 90ರಷ್ಟು ಅನುದಾನವನ್ನು ಒಕ್ಕೂಟ ಸರ್ಕಾರವೇ ನೀಡುತ್ತಿತ್ತು. ಈಗ ಹೊಸ ಕಾಯ್ದೆಯಂತೆ ಕೇಂದ್ರ ಸರ್ಕಾರ ಶೇ.60ರಷ್ಟು ಮಾತ್ರ ಒದಗಿಸಲಿದೆ. ಉಳಿದ 40ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ನೀಡಬೇಕಾಗಿದೆ. ಜಿಎಸ್‌ಟಿ ಪಾಲು ಸರಿಯಾಗಿ ದೊರೆಯುತ್ತಿಲ್ಲವೆಂದು ಹಲವು ರಾಜ್ಯಗಳು ಈಗಾಗಲೇ ಟೀಕಿಸುತ್ತಿವೆ. ಸಾಲದ ಹೊರೆಯಲ್ಲಿರುವಾಗ ರಾಜ್ಯ ಸರ್ಕಾರಗಳು ಶೇ.40ರಷ್ಟು ಹೊರೆ ಹೊರುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಬಡಜನರ ಉದ್ಯೋಗದ ಹಕ್ಕನ್ನು ನಿರಾಕರಿಸುವ ಉದ್ದೇಶದಿಂದಲೇ ಈ ಹೊಸ ಕಾನೂನು ರೂಪಿಸಲಾಗಿದೆ. ಮನರೇಗಾದಲ್ಲಿ ಒಕ್ಕೂಟ ಸರ್ಕಾರದ ಬಜೆಟ್‌ಗೆ ಯಾವುದೇ ಮಿತಿ ಇರಲಿಲ್ಲ. ದೇಶದ ಗ್ರಾಮೀಣ ಭಾಗದ ಯಾರೇ ಆಗಲಿ ಉದ್ಯೋಗ ಕೇಳಿದಲ್ಲಿ, 100 ದಿನಗಳವರೆಗೆ ಉದ್ಯೋಗ ಒದಗಿಸುವ ಹೊಣೆಗಾರಿಕೆ ಸರ್ಕಾರದ ಮೇಲಿತ್ತು. ಆದರೆ ‘ರಾಮ್ ಜಿ’ ಯೋಜನೆಯಲ್ಲಿ ಅದು ಇಲ್ಲ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆ ಗುರುತಿಸಿದ ಪ್ರದೇಶಗಳಲ್ಲಿ, ನಿರ್ದಿಷ್ಟ ಕಾಮಗಾರಿಗಳಿಗೆ ಮಾತ್ರ ಸೀಮಿತ ಹಣಕಾಸು ವ್ಯವಸ್ಥೆ ಇದೆ. ಅಲ್ಲದೇ, ಕೇವಲ ಅದರ ಹೆಸರನ್ನು ಬದಲಿಸಿ ವಿಬಿಜಿ ರಾಮ್ ಜಿ ಎಂಬ ಹೆಸರಿನ ಉದ್ಯೋಗ ಯೋಜನೆಯನ್ನು ತಂದಿರುವುದಾಗಿ ಹೇಳಲಾಗುತ್ತಿದೆ. ಇದಲ್ಲದೆ, 100 ದಿನಗಳ ಬದಲಾಗಿ ವರ್ಷಕ್ಕೆ 125 ದಿನ ಉದ್ಯೋಗ ನೀಡಲಾಗುತ್ತದೆ ಎಂದು ಪ್ರಚಾರ ನಡೆಸುತ್ತಿದ್ದರೂ, ಉದ್ಯೋಗದ ಖಾತ್ರಿ ಇಲ್ಲ. ಇದು ಗ್ರಾಮೀಣ ಭಾಗದಲ್ಲಿ ಜನತೆ ಪ್ರಶ್ನಿಸಿದರೆ ಅದಕ್ಕೆ ಸಮರ್ಥನೀಯ ಉತ್ತರ ನೀಡುವುದು ಕಷ್ಟಕರ ಎಂದು ದ ಫೆಡರಲ್ ಕರ್ನಾಟಕಕ್ಕೆ ಹೆಸರಳೇಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು 'ದ ಫೆಡರಲ್ ಕರ್ನಾಟಕ'ಕ್ಕೆ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಪಾವತಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಇದರಿಂದ ತಾಂತ್ರಿಕ ಕಾರಣಗಳಿಗಾಗಿ ಸಾವಿರಾರು ಕಾರ್ಮಿಕರಿಗೆ ಕೂಲಿ ಪಾವತಿಯಾಗುತ್ತಿಲ್ಲ ಎಂದು ಹೇಳಲಾಗಿದೆ. ವ್ಯವಸ್ಥೆಯಲ್ಲಿನ ದೋಷದಿಂದಾಗಿ ಕೆಲಸ ಮಾಡಿದರೂ ಹಣ ಸಿಗದಿದ್ದರೆ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬುದು ಬಿಜೆಪಿಗರ ಆತಂಕ.
ಹೊಸ ಯೋಜನೆಯಲ್ಲಿ ವೈಯಕ್ತಿಕ ಕೆಲಸಗಳಿಗಿಂತ ಸಮುದಾಯದ ದೊಡ್ಡ ಆಸ್ತಿಗಳ ಸೃಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಸಣ್ಣ ಹಿಡುವಳಿದಾರರಿಗೆ ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಅಥವಾ ಹಟ್ಟಿ ನಿರ್ಮಾಣದಂತಹ ಕೆಲಸಗಳನ್ನು ಮಾಡಿಕೊಳ್ಳಲು ಅಡ್ಡಿಯಾಗುತ್ತದೆ. ರೈತ ಸಂಘಟನೆಗಳ ಒಲವು ಹೊಂದಿರುವ ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲಸದ ಸ್ಥಳದಲ್ಲಿ ದಿನಕ್ಕೆ ಎರಡು ಬಾರಿ ಆ್ಯಪ್ ಮೂಲಕ ಫೋಟೋ ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಮತ್ತು ಸ್ಮಾರ್ಟ್‌ಫೋನ್ ಇಲ್ಲದಿರುವಿಕೆಯಿಂದಾಗಿ ಮಹಿಳಾ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ತಂತ್ರಜ್ಞಾನವು ಪಾರದರ್ಶಕತೆ ತರಬೇಕು, ಉದ್ಯೋಗವನ್ನು ಕಸಿಯಬಾರದು ಎಂಬುದು ಬಿಜೆಪಿಗರ ವಾದವಾಗಿದೆ.
ನರೇಗಾ ಯೋಜನೆಯನ್ನು ಹೊಸ ಯೋಜನೆಯಾಗಿ ಪರಿವರ್ತಿಸಿದರೆ ಅಥವಾ ಬಜೆಟ್‌ನಲ್ಲಿ ಅನುದಾನವನ್ನು ತಗ್ಗಿಸಿದರೆ, ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಈ ಯೋಜನೆಯ ಫಲಾನುಭವಿಗಳು ಹೆಚ್ಚಿದ್ದಾರೆ. ಅನುದಾನದ ಕೊರತೆಯು ಸ್ಥಳೀಯ ಪಂಚಾಯತ್ ಮಟ್ಟದಲ್ಲಿ ಪಕ್ಷದ ಹಿಡಿತವನ್ನು ಸಡಿಲಗೊಳಿಸಬಹುದು ಎಂಬ ಆತಂಕವಿದೆ ಎನ್ನಲಾಗಿದೆ.
ಕಾಂಗ್ರೆಸ್ ಆರೋಪಗಳ ಆತಂಕ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧೀಜಿ ಹೆಸರನ್ನು ಕೈಬಿಟ್ಟು, ಅದಕ್ಕೆ 'ವಿಕಸಿತ ಭಾರತ ವಿಬಿಜಿ ರಾಮ್-ಜಿ ಯೋಜನೆ' ಎಂದು ಮರುನಾಮಕರಣ ಮಾಡಿರುವ ಬಗ್ಗೆ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಇದು ಸಂವಿಧಾನ ವಿರೋಧಿ ಮತ್ತು ಗಾಂಧೀಜಿ ಕೊಡುಗೆ ಮರೆಮಾಚುವ ಪ್ರಯತ್ನ ಎಂದು ಟೀಕಿಸಿದೆ. ಹಲವು ಸಂಘಟನೆಗಳು ಕೂಡ ಕೇಂದ್ರದ ಕ್ರಮವನ್ನು ವಿರೋಧಿಸಿವೆ. ಈ ಯೋಜನೆಯು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಬೆಳೆ ನಾಟಿ ಮತ್ತು ಕಟಾವು ಸಂದರ್ಭದಲ್ಲಿ ಕೂಲಿ ನೀಡುವಿಕೆ, 150 ದಿನಗಳ ಕೆಲಸದ ಭರವಸೆಯಂತಹ ಅಂಶಗಳು ವಾಸ್ತವಕ್ಕೆ ದೂರವಿವೆ. ಇದು ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರಲಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಬಿಜೆಪಿಗೆ ಈ ಆರೋಪಗಳೇ ಆತಂಕವನ್ನು ಮೂಡಿಸಿವೆ.
ಇದು ಮುಂಬರುವ ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಮೇಲೆ ಮತಗಳನ್ನು ಗಳಿಸಿದರೂ ಯೋಜನೆ ಬಗ್ಗೆ ಕಾಂಗ್ರೆಸ್ ಬಲವಾಗಿ ಪ್ರಚಾರ ಕೈಗೊಂಡರೆ ಮತಗಳು ಕೈಬಿಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರ ಚಿಂತೆಯಾಗಿದೆ.

