ಯುಕೆಪಿ 3ನೇಹಂತಕ್ಕೆ ಪರಿಹಾರ ದರ ನಿಗದಿಗೊಳಿಸಿ ನಿರ್ಣಯ ಕೈಗೊಂಡ ಸಚಿವ ಸಂಪುಟ ಸಭೆ
x

ಯುಕೆಪಿ 3ನೇಹಂತಕ್ಕೆ ಪರಿಹಾರ ದರ ನಿಗದಿಗೊಳಿಸಿ ನಿರ್ಣಯ ಕೈಗೊಂಡ ಸಚಿವ ಸಂಪುಟ ಸಭೆ

ಯುಕೆಪಿ 3ನೇಹಂತಕ್ಕೆ ಒಣ ಭೂಮಿಯ ಪ್ರತಿ ಎಕರೆಗೆ 30 ಲಕ್ಷ ರೂ. ಕೃಷಿ ಭೂಮಿಯ ಪ್ರತಿ ಎಕರೆಗೆ 40 ಲಕ್ಷ ರೂ. ಪರಿಹಾರ ದರ ನಿಗದಿ ಮಾಡಿ ಸಚಿವ ಸಂಪುಟ ಸಭೆಯು ಮಹತ್ವದ ನಿರ್ಣಯ ಕೈಗೊಂಡಿದೆ.


ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಅವಶ್ಯವಿರುವ ಜಮೀನು ಸ್ವಾಧೀನ ಸಂಬಂಧ ಪರಿಹಾರ ನಿಗದಿ ಮಾಡಿ ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಣ ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಮತ್ತು ಕೃಷಿ ಭೂಮಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿ ಮಾಡಿ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ. ಭೂ ಸ್ವಾಧೀನ ಪರಿಹಾರ ದರವನ್ನು ಪ್ರತಿ ಎಕರೆಗೆ ರೈತರು ಒಣಭೂಮಿಗೆ 35 ಲಕ್ಷ ರೂ. ಮತ್ತು ಕೃಷಿ ಭೂಮಿಗೆ 42 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು. ಇದೀಗ ರಾಜ್ಯ ಸರ್ಕಾರವು ಒಣ ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಮತ್ತು ಕೃಷಿ ಭೂಮಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿಗೊಳಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌ ಈ ವಿಷಯವನ್ನು ತಿಳಿಸಿದರು.

ಅಣೆಕಟ್ಟಿನ ಎತ್ತರ ಏರಿಕೆಗೆ ಚಿಂತನೆ

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಎತ್ತರಿಸಲು ಸರ್ಕಾರ ಮುಂದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತ ಅನುಷ್ಠಾನಕ್ಕೆ ಆರಂಭದಲ್ಲಿ 51,184 ಕೋಟಿ ರೂ. ಯೋಜನಾ ಮೊತ್ತ ಅಂದಾಜು ಮಾಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆಗೆ 17,627 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು. ಆದರೆ, ಈ ಯೋಜನೆ ಅನುಷ್ಠಾನಕ್ಕೆ ಒಟ್ಟು 1.33.867 ಎಕರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಈ ಪೈಕಿ 75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಇದವರೆಗೆ 29.566 ಎಕರೆ ಭೂಸ್ವಾಧೀನ ತೀರ್ಪು ಹೊರಡಿಸಲಾಗಿದ್ದು, ಉಳಿದ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ.

ರಾಜ್ಯದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ, ಅಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳನ್ನು ಆಧರಿಸಿ, ಮಳೆ-ಆಶ್ರಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಮೂರನೇ ಹಂತದಲ್ಲಿ, ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 130 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಾಗಲಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಜತೆಗೆ ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಸೇರ್ಪಡೆಯಾಗಿದೆ. ಮೊದಲ ಹಂತದಲ್ಲಿ ನಾರಾಯಣಪುರ, ಆಲಮಟ್ಟಿ ಡ್ಯಾಂಗಳ ಮೂಲಕ 4.25 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸಿದರೆ, 2ನೇ ಹಂತದಲ್ಲಿ 1.97 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿತ್ತು. 1ನೇ ಹಂತ 1990ರಲ್ಲಿ ಪೂರ್ಣವಾದರೆ, 2ನೇ ಹಂತ 2000 ನೇ ಸಾಲಿನಲ್ಲಿ ಪೂರ್ಣಗೊಂಡಿತ್ತು. ಇದೀಗ ಮೂರನೇ ಹಂತದ ಪ್ರಕ್ರಿಯೆ ಆರಂಭಗೊಂಡಿದೆ.

Read More
Next Story