Wayanad Landslide | ʼದ ಫೆಡರಲ್‌ʼ ಪ್ರತ್ಯಕ್ಷ ವರದಿ: ಹೆತ್ತವರು ಕಣ್ಣೆದುರೇ ಕೊಚ್ಚಿ ಹೋದರು... ರುಕ್ಕಿಯಾ ದುರಂತ ಕಥೆ

ವಯನಾಡಿನ ಚೋರಲ್ಮಲಾದ ಮನೋಹರ ಹಸಿರ ಕಣಿವೆ ದಿನ ಬೆಳಗಾಗುವುದರಲ್ಲಿ ಕೆಸರಿನಡಿಯ ಸ್ಮಶಾನವಾಗಿ ಬದಲಾದಂತೆಯೇ, ಭೂಕುಸಿತದ ದವಡೆಗೆ ಸಿಕ್ಕ ನೂರಾರು ಕುಟುಂಬಗಳ ಬದುಕೂ ಕಣ್ಣು ಮಿಟುಕಿಸುವಷ್ಟರಲ್ಲೇ ತಪ್ಪಿಸಿಕೊಳ್ಳಲಾಗದ ದುರಂತಕ್ಕೆ ಸಿಕ್ಕಿ ನಾಶವಾಗಿದೆ. 21 ರ ಹರೆಯದ ರುಕ್ಕಿಯಾ ಬಾನೂ ಅವರ ಸರಳ ಹಾಗೂ ಸುಂದರ ಬದುಕು ಕೂಡ ಹಾಗೇ ಒಂದೇ ಕ್ಷಣದಲ್ಲಿ ಭಯಾನಕ ದುರಂತಮಯ ತಿರುವು ಪಡೆದುಕೊಂಡಿದೆ.

Update: 2024-08-01 12:21 GMT
ವಯನಾಡ್ ಭೂಕುಸಿತ ದುರಂತದ ನಂತರ ವೃದ್ಧೆಯ ರಕ್ಷಣೆಗೆ ಸಹಾಯ ಮಾಡುತ್ತಿರುವ ಸೇನಾ ಸಿಬ್ಬಂದಿ. ಫೋಟೋ: ಪಿಟಿಐ

ವಯನಾಡಿನ ಚೋರಲ್ಮಲಾದ ಮನೋಹರ ಹಸಿರ ಕಣಿವೆ ದಿನ ಬೆಳಗಾಗುವುದರಲ್ಲಿ ಕೆಸರಿನಡಿಯ ಸ್ಮಶಾನವಾಗಿ ಬದಲಾದಂತೆಯೇ, ಭೂಕುಸಿತದ ದವಡೆಗೆ ಸಿಕ್ಕ ನೂರಾರು ಕುಟುಂಬಗಳ ಬದುಕೂ ಕಣ್ಣು ಮಿಟುಕಿಸುವಷ್ಟರಲ್ಲೇ ತಪ್ಪಿಸಿಕೊಳ್ಳಲಾಗದ ದುರಂತದ ದವಡೆಗೆ ಸಿಕ್ಕಿ ನಾಶವಾಗಿದೆ. 21 ರ ಹರೆಯದ ರುಕ್ಕಿಯಾ ಬಾನೂ ಅವರ ಸರಳ ಹಾಗೂ ಸುಂದರ ಬದುಕು ಕೂಡ ಹಾಗೇ ಒಂದೇ ಕ್ಷಣದಲ್ಲಿ ಭಯಾನಕ ದುರಂತಮಯ ತಿರುವು ಪಡೆದುಕೊಂಡಿದೆ.

ವಯನಾಡ್ ಜಿಲ್ಲೆಯ ಚೋರಲ್ಮಲಾ ಬಳಿಯ ಪಟ್ಟಮಲಾ ಗ್ರಾಮದ ನಿವಾಸಿ ರುಕ್ಕಿಯಾ, 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಆಕೆಯ ಪೋಷಕರು ಮತ್ತು ಶಾಲೆಗೆ ಹೋಗುವ ಸಹೋದರನೊಂದಿಗೆ ಆಕೆ ಪಟ್ಟಮಲಾದಲ್ಲಿದ್ದರು. ಭೂಕುಸಿತದ ದಿನ, ಸಮೀಪದ ಮೆಪ್ಪಾಡಿಯಿಂದ ಬಂದಿದ್ದ ಆಕೆಯ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಸಹ ಅವರ ಮನೆಯಲ್ಲಿ ಇದ್ದರು.

ಇದ್ದಕ್ಕಿದ್ದಂತೆ, ಮಂಗಳವಾರ (ಜು.30) ನಸುಕಿನ ವೇಳೆ ರುಕ್ಕಿಯಾಳ ಬದುಕಿನ ಸುಂದರ ಪ್ರಪಂಚ ಕುಸಿದುಹೋಯಿತು. ಮಲೆಯೇ ಕುಸಿದು ಮನೆಯನ್ನು ಕೊಚ್ಚಿ ಒಯ್ಯಿತು. ಆ ವೇಳೆ ರುಕ್ಕಿಯಾ‌ ಅದೃಷ್ಟವಶಾತ್ ಬದುಕುಳಿದಳು. ಆದರೆ ಆದರೆ ಅವಳ ಹೆತ್ತವರು, ಸಹೋದರ ಮತ್ತು ಅವಳ ಸಂಬಂಧಿಕರಿಗೆ ಆ ಅದೃಷ್ಟವಿರಲಿಲ್ಲ.

ಕಾಡುವ ನೆನಪುಗಳು

ಪ್ರಸ್ತುತ ಮೆಪ್ಪಾಡಿ ಪ್ರದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರುಕ್ಕಿಯಾ (ಕೇರಳ ಸರ್ಕಾರದ ಕೌನ್ಸೆಲಿಂಗ್ ಸೇವೆಗಳ ಕೋರಿಕೆಯ ಮೇರೆಗೆ ಹೆಸರನ್ನು ಬದಲಾಯಿಸಲಾಗಿದೆ) ಅವರು ತಮ್ಮ ದುಃಸ್ವಪ್ನದ ಅನುಭವವನ್ನು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಹಂಚಿಕೊಂಡಿದ್ದಾರೆ.

ʻʻನಡುರಾತ್ರಿ ನಾವೆಲ್ಲರೂ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದೆವು, ಆಗ ಭಯಂಕರ ಶಬ್ದ ಕೇಳಿಸಿತು. ಆಗ ನಾನು ಎಚ್ಚರಗೊಂಡಾಗ ಮಣ್ಣು ಮತ್ತು ನೀರು ರಭಸದಿಂದ ನಮ್ಮ ಮನೆಯೊಳಗೆ ನುಗ್ಗುತ್ತಿರುವುದನ್ನು ನೋಡಿದೆ. ನನ್ನ ಅಬ್ಬಾ (ತಂದೆ) ಮತ್ತು ಅಮ್ಮ (ತಾಯಿ) ಮತ್ತು ಇತರರು ಇನ್ನೂ ಎಚ್ಚರವಾಗಿರಲಿಲ್ಲ, ಅದರೆ ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ನಾನು ಅಳುತ್ತಿದ್ದೆ ಮತ್ತು ಕೂಗಿದೆ, ಆದರೆ ತಪ್ಪಿಸಿಕೊಳ್ಳಲು ಸಮಯ ಅಥವಾ ಸ್ಥಳವಿರಲಿಲ್ಲʼʼ ಎಂದು ಅವರು ಕಣ್ಣೀರಿಟ್ಟರು.

ಅಗಾಧ ಪ್ರಮಾಣದ ಕೆಸರು, ಕಲ್ಲು, ಮರದ ಬೊಡ್ಡೆಗಳನ್ನು ಹೊತ್ತು ತಂದಿದ್ದ ನೀರು ಮೇಲ್ಛಾವಣಿಯವರೆಗೂ ನುಗ್ಗಿತು. ಮನೆ ಕೆಸರು ಮತ್ತು ನೀರಿನಿಂದ ಬೇಗನೆ ಮುಳುಗಿತು.

"ನನ್ನ ಹೆತ್ತವರು ಮತ್ತು ಇತರರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಅಸಹಾಯಕತೆಯಿಂದ ನೋಡುವುದನ್ನು ಬಿಟ್ಟು ನನಗೆ ಏನೂ ಮಾಡಲಾಗಲಿಲ್ಲ. ನೀರಿನ ವೇಗ ಮತ್ತು ಬೀಳುವ ಬಂಡೆಗಳಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಮರುದಿನ ಮಿಲಿಟರಿ ಕಾರ್ಯಾಚರಣೆಯಲ್ಲಿ ನನ್ನನ್ನು ರಕ್ಷಿಸಲಾಯಿತು, ಆದರೆ ನಾನು ಎಲ್ಲರನ್ನು ಕಳೆದುಕೊಂಡೆ" ಎಂದು ಅವರು ಕಣ್ಣೀರಾದರು. 

ಭಾರೀ ರಭಸದಲ್ಲಿ ನೀರಿನೊಂದಿಗೆ ಮಣ್ಣು ಮತ್ತು ಕಲ್ಲುಬಂಡೆಗಳು ಮನೆಗೆ ನುಗ್ಗಿದ್ದರಿಂದ ರುಕ್ಕಿಯಾ ಅವರ ಕಾಲುಗಳು ಮತ್ತು ಭುಜಗಳಿಗೆ ಗಾಯಗಳಾಗಿವೆ. ಕೇರಳ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯ ತಂಡದಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲಾಖೆಯ ಸಿಬ್ಬಂದಿ ಎಲ್ಲಾ ಸಂತ್ರಸ್ತರಿಗೆ ಮತ್ತು ಸಂತ್ರಸ್ತರ ಸಂಬಂಧಿಕರಿಗೆ ಮಾನಸಿಕವಾಗಿ ಧೈರ್ಯ ತುಂಬಲು ಸಹಾಯ ಮಾಡುತ್ತಿದ್ದಾರೆ.

"ನೆನಪುಗಳು ಪ್ರತಿದಿನ ನನ್ನನ್ನು ಕಾಡುತ್ತವೆ," ಎಂದು ರುಕ್ಮಿಯಾ ಬತ್ತಿಹೋದ ಕಣ್ಣೀರು ಸುರಿಸುತ್ತಲೇ ನೋವು ತೋಡಿಕೊಂಡರು.

ಮಾನಸಿಕ ಆಘಾತದ ವಿರುದ್ಧ ಹೋರಾಡುವುದು

ಚೋರಲ್ಮಲಾದಲ್ಲಿ ಸಂಭವಿಸಿದ ಭೂಕುಸಿತವು ವಯನಾಡ್‌ನಲ್ಲಿ ಸಂಭವಿಸಿದ ಅನೇಕ ವಿನಾಶಕಾರಿ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ.

ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಮಿಲಿಟರಿ, ಎನ್‌ಡಿಆರ್‌ಎಫ್ ಮತ್ತು ವಿವಿಧ ಸ್ವಯಂಸೇವಕ ಸಂಸ್ಥೆಗಳ ತಂಡಗಳು ಜೀವಗಳನ್ನು ಉಳಿಸಲು ಮತ್ತು ದೇಹಗಳನ್ನು ಪತ್ತೆಮಾಡಲು ದಣಿವರಿಯದೆ ಶ್ರಮಿಸುತ್ತಿವೆ.

ರುಕ್ಕಿಯಾರ ಕಥೆಯು ಆಘಾತಕಾರಿ ದುರಂತದಿಂದ ತುಂಬಿದೆ. ಆದರೆ ಅವರು ಆ ನೋವಿನಿಂದ ಹೊರಬರಲು ಹೋರಾಟ ನಡೆಸಿದ್ದಾರೆ. ತಮ್ಮ ದೇಹದ ಗಾಯಗಳ ಹೊರತಾಗಿಯೂ ಮತ್ತು ತಮ್ಮ ಕುಟುಂಬ ಸದಸ್ಯರ ಸಾವು ಅವರಿಗೆ ಆಘಾತ ತಂದಿದೆ. ಕೇರಳ ಆರೋಗ್ಯ ಇಲಾಖೆಯ ಸಲಹೆ ಸೇವೆಗಳ ಬೆಂಬಲದೊಂದಿಗೆ ಅವರು ತಮ್ಮ ಆ ಆಘಾತವನ್ನು ನಿಭಾಯಿಸುತ್ತಿರುವಂತೆ ತೋರುತ್ತಿದೆ.

ಅವರ ಸಲಹೆಗಾರರೊಬ್ಬರು ಮಾತನಾಡಿ, "ರುಕ್ಕಿಯಾ ತೀವ್ರ ಆಘಾತವನ್ನು ಅನುಭವಿಸಿದ್ದಾಳೆ. ಕಣ್ಣು ಮಿಟುಕಿಸುವಷ್ಟರಲ್ಲಿ ಅವಳು ತನ್ನ ಇಡೀ ಕುಟುಂಬವನ್ನು ಕಳೆದುಕೊಂಡಳು, ಇದು ಆಕೆಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆಳವಾದ ನೋವು ಉಂಟುಮಾಡಿದೆ. ಆ ನೋವಿನಿಂದ ಅವಳು ಹೊರಬರಲು ಮತ್ತು ಮುಂದಿನ ದಾರಿಯನ್ನು ಕಂಡುಕೊಳ್ಳಲು ನಾವು ಅವಳಿಗೆ ಸಹಾಯ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು.

ಕೋಝಿಕ್ಕೋಡ್‌ನ ಆಕೆಯ ಸಂಬಂಧಿ ಹಾಗೂ ಆಸ್ಪತ್ರೆಯಲ್ಲಿರುವ ಆಕೆಯ ಸೋದರಸಂಬಂಧಿ ಅಬ್ದುಲ್ ಲತೀಫ್ ಮಾತನಾಡಿ, ʻʻನಾವು ಈ ಸುದ್ದಿ ತಿಳಿದಾಗಿನಿಂದ ಆಘಾತಕ್ಕೊಳಗಾಗಿದ್ದೇವೆ, ರುಕ್ಕಿಯಾ ನನಗೆ ಸಹೋದರಿ ಇದ್ದಂತೆ, ಅವಳನ್ನು ಇಂತಹ ಸಂದರ್ಭದಲ್ಲಿ ಬಿಟ್ಟುಹೋಗಲು ಮನಸ್ಸು ಒಪ್ಪುವುದಿಲ್ಲ. ಅವಳೊಂದಿಗೆ ನಾವೆಲ್ಲರೂ ಇದ್ದೇವೆ. ಆಕೆ ಚೇತರಿಸಿಕೊಳ್ಳಬೇಕು. ಆನಂತರ ಅವಳ ಜೀವನವನ್ನು ಕಟ್ಟಿಕೊಳ್ಳಬೇಕಿದೆ. ಹಾಗಾಗಿ ನಾವು ಅವಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಸಿದ್ದರಿದ್ದೇವೆʼʼ ಎಂದು ಹೇಳಿದರು.

ರುಕ್ಕಿಯಾ ಅವರು ದುಃಖದಲ್ಲಿ ಮುಳುಗಿದ್ದರೂ, ಭೂಕುಸಿತದ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ʻʻನಮ್ಮ ಸಹಾಯಕ್ಕೆ ಬಂದ ಮಿಲಿಟರಿ ಮತ್ತು ಎಲ್ಲಾ ಸ್ವಯಂಸೇವಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಪ್ರಯತ್ನಗಳಿಂದಾಗಿಯೇ ನಾನೂ ಸೇರಿದಂತೆ ನೂರಾರು ಜೀವಗಳು ಉಳಿದಿವೆ. ಅವರ ಶೌರ್ಯ ಮತ್ತು ದಯೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆʼʼ ಎಂದು ಅವರು ಹೇಳಿದರು.

ರುಕ್ಕಿಯಾ ಅವರ ಮುಂದಿನ ಬದುಕಿನ ಪಯಣ ಸವಾಲಿನದ್ದಾಗಿದೆ. ಆದರೆ, ದಿಕ್ಕುಗೆಟ್ಟ ಮತ್ತು ಆಘಾತದ ಈ ಸಮಯದಲ್ಲಿ, ಆಕೆ ಗುಣವಾಗಲು ಒಂದು ಮಾರ್ಗವನ್ನು ಕಂಡುಕೊಳ್ಳಲು ಬಯಸುತ್ತಾಳೆ. ʻʻನಾನು ಈಗ ಸುರಕ್ಷಿತವಾಗಿದ್ದೇನೆ, ಆದರೆ ನನ್ನ ಕುಟುಂಬವನ್ನು ಕಳೆದುಕೊಂಡ ನೋವನ್ನು ನಾನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಂಡೇ ಜೀವನ ಸಾಗಿಸುತ್ತೇನೆ" ಎಂದು ಆಕೆ ಅವುಡುಗಚ್ಚಿ ಆಡಿದ ಮಾತಿನಲ್ಲಿ ಪ್ರಕೃತಿಯ ಮುನಿಸಿನ ಎದುರು ನುಚ್ಚುನೂರಾದ ಬದುಕನ್ನು ಮತ್ತೆ ಏಕಾಂಗಿಯಾಗಿ ಕಟ್ಟಿಕೊಳ್ಳುವ ಅಪರೂಪದ ಆತ್ಮಸ್ಥೈರ್ಯ ಮತ್ತು ದಿಟ್ಟ ನಿಲುವು ಕಾಣದೇ ಇರಲಿಲ್ಲ.

Tags:    

Similar News