ಆಟವಾಡಲು ಕಾರಿನಲ್ಲಿ ಕುಳಿತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವು

ಮಹಿಳಾ ಮಂಡಲ ಕಚೇರಿಯ ಬಳಿ ನಿಲ್ಲಿಸಿದ್ದ ಕಾರಿನ ಬಾಗಿಲು ತೆರೆದು ನಾಲ್ಕು ಮಕ್ಕಳು ಒಳಗಡೆ ಪ್ರವೇಶಿದ್ದಾರೆ. ನಂತರ ಕಾರಿನ ಬಾಗಿಲು ಲಾಕ್‌ ಆಗಿದ್ದು ಮಕ್ಕಳು ಹೊರಬರಲು ಸಾಧ್ಯವಾಗದೆ ಮಕ್ಕಳು ಕಾರಿನಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.;

Update: 2025-05-19 10:31 GMT

ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಕಾರು(ಎಕ್ಸ್‌ ಖಾತೆಯಿಂದ)

ಶಾಲೆಗಳಿಗೆ ಬೇಸಿಗೆ ರಜೆ  ಹಿನ್ನೆಲೆಯಲ್ಲಿ  ಆಟವಾಡುತ್ತಿದ್ದ ನಾಲ್ವರು ಮಕ್ಕಳು ಕಾರಿನೊಳಗೆ ಆಕಸ್ಮಿಕವಾಗಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರುವ ದುರಂತ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದ್ವಾರಪುಡಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಭಾನುವಾರ ಸಂಜೆ ಉದಯ್‌ (8), ಚಾರುಮತಿ (8), ಚರಿಷ್ಮ (6) ಮತ್ತು ಮನಸ್ವಿ (6) ಎಂಬ ನಾಲ್ವರು ಮಕ್ಕಳು ಗ್ರಾಮದ ಮಹಿಳಾ ಮಂಡಲ ಕಚೇರಿಯ ಬಳಿ ಆಟವಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದರ ಬಾಗಿಲನ್ನು ತೆರೆದು ಮಕ್ಕಳು ಕುತೂಹಲದಿಂದ ಒಳಗೆ ಹೋಗಿದ್ದಾರೆ. ಅವರು ಒಳಹೋದ ನಂತರ ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್‌ ಆಗಿದೆ ಎನ್ನಲಾಗಿದ್ದು, ಇದರಿಂದಾಗಿ ಹೊರಬರಲು ಸಾಧ್ಯವಾಗದೆ ಮಕ್ಕಳು ಕಾರಿನೊಳಗೆ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. 

ಆಟವಾಡಲು ಹೋದ ಮಕ್ಕಳು ಎಷ್ಟು ಸಮಯವಾದರೂ ಮನೆಗೆ ಮರಳದಿದ್ದಾಗ ಪೋಷಕರು ಮತ್ತು ಗ್ರಾಮಸ್ಥರು ತೀವ್ರ ಆತಂಕಗೊಂಡು ಹುಡುಕಾಟ ಆರಂಭಿಸಿದ್ದಾರೆ. ಬಳಿಕ ಮಹಿಳಾ ಮಂಡಲ ಕಚೇರಿ ಬಳಿ ನಿಲ್ಲಿಸಿದ್ದ ಕಾರನ್ನು ಗಮನಿಸಿದಾಗ ಮಕ್ಕಳು ಅದರೊಳಗೆ ನಿಶ್ಚಿಲವಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಕಾರಿನ ಕಿಟಕಿಯ ಗಾಜನ್ನು ಒಡೆದು ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ಮೊದಲೇ ಮಕ್ಕಳು ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ.

ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳಾ ಮಂಡಲ ಕಚೇರಿ ಮುಂಭಾಗದಲ್ಲಿ ಕಾರನ್ನು ನಿಲ್ಲಿಸಿದ್ದ ಅದರ ಮಾಲೀಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

Tags:    

Similar News