ಸಿಖ್​ ವಿರೋಧಿ ದಂಗೆ ಪ್ರಕರಣ; ಕಾಂಗ್ರೆಸ್​ ಮಾಜಿ ಸಂಸದ ಸಜ್ಜನ್​ಕುಮಾರ್​ಗೆ ಜೀವಾವಧಿ ಶಿಕ್ಷೆ

ಜೀವಾವಧಿ ಶಿಕ್ಷೆಯ ಜತೆಗೆ ಕುಮಾರ್‌ಗೆ ಗಲಭೆ ಸೃಷ್ಟಿಸಿದಕ್ಕಾಗಿ ಎರಡು ವರ್ಷ, ಮಾರಣಾಂತಿಕ ಶಸ್ತ್ರಾಸ್ತ್ರಗಳೊಂದಿಗೆ ಗಲಭೆ ನಡೆಸಿದ ಆರೋಪಕ್ಕೆ ಮೂರು ವರ್ಷ ಶಿಕ್ಷೆ ಹಾಗೂ ದಂಡ, ಗಂಭೀರ ಗಾಯ ಅಥವಾ ಸಾವಿಗೆ ಕಾರಣವಾಗುವ ಉದ್ದೇಶದೊಂದಿಗೆ ಅಪರಾಧ ನಡೆಸಿದ ಆರೋಪಕ್ಕೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ.;

Update: 2025-02-25 10:51 GMT

ಜೀವಾವಧಿ ಶಿಕ್ಷೆಗೆ ಒಳಗಾದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್​ ಕುಮಾರ್ ಸಿಂಗ್​.

1984ರ ದೆಹಲಿಯ ಸಿಖ್ ವಿರೋಧಿ ಗಲಭೆಗಳ ವೇಳೆ ಇಬ್ಬರು ಸಿಖ್ ವ್ಯಕ್ತಿಗಳನ್ನು ಹತ್ಯೆ ಮಾಡಿಸಿದ ಆರೋಪದ ಮೇಲೆ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದು ಕುಮಾರ್‌ಗೆ ವಿಧಿಸಲಾದ ಎರಡನೇ ಜೀವಾವಧಿ ಶಿಕ್ಷೆಯಾಗಿದ್ದು, ಅವರು ಈಗಾಗಲೇ ದೆಹಲಿ ಕಂಟೋನ್ಮೆಂಟ್​​ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಜೀವಾವಧಿ ಶಿಕ್ಷೆಯ ಜತೆಗೆ ಕುಮಾರ್‌ಗೆ ಗಲಭೆ ಸೃಷ್ಟಿಸಿದಕ್ಕಾಗಿ ಎರಡು ವರ್ಷ, ಮಾರಕ ಶಸ್ತ್ರಾಸ್ತ್ರಗಳೊಂದಿಗೆ ಗಲಭೆ ನಡೆಸಿದ ಆರೋಪಕ್ಕೆ ಮೂರು ವರ್ಷ ಶಿಕ್ಷೆ ಹಾಗೂ ದಂಡ, ಗಂಭೀರ ಗಾಯ ಅಥವಾ ಸಾವಿಗೆ ಕಾರಣವಾಗುವ ಉದ್ದೇಶದೊಂದಿಗೆ ಅಪರಾಧ ನಡೆಸಿದ ಆರೋಪಕ್ಕೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ.

ರೋಸ್ ಅವೆನ್ಯೂ ನ್ಯಾಯಾಲಯ ತನ್ನ ತೀರ್ಪು ನೀಡುವ ವೇಳೆ ಹಲವು ಅಂಶಗಳನ್ನು ಗಮನಿಸಿದೆ. 1984ರ ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್​​ದೀಪ್​ ಸಿಂಗ್ ಅವರನ್ನು ಕೊಲ್ಲಲು ಗುಂಪೊಂದನ್ನು ಪ್ರಚೋದಿಸಿದ್ದು ಸಾಬೀತಾಗಿದೆ., ಈ ಪ್ರಕರಣದ ವಿಚಾರಣೆಯ ವೇಳೆ, ಪ್ರಾಸಿಕ್ಯೂಷನ್,  ಸಜ್ಜನ್ ಕುಮಾರ್ ನೇತೃತ್ವದ ಗುಂಪು ಶಸ್ತ್ರಾಸ್ತ್ರಗಳ ಹಿಡಿದುಕೊಂಡು ಸಿಖ್ ಸಮುದಾಯದ ಆಸ್ತಿಗಳನ್ನು ನಾಶ ಮಾಡಿತ್ತು ಎಂಬುದಕ್ಕೆ ಸಾಕ್ಷಿಗಳಿವೆ ಎಂದು ಕೋರ್ಟ್​​ ಹೇಳಿದೆ. 

ಇಂದಿರಾ ಹತ್ಯೆಗೆ ಸೇಡು

ಈ ಪ್ರಕರಣವು 1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಅವರ ಇಬ್ಬರು ಸಿಖ್ ಬಾಡಿಗಾರ್ಡ್‌ಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಶುರುವಾಗಿದ್ದ ಹಿಂಸಾಚಾರದ ಭಾಗವಾಗಿದೆ.

"ಸಜ್ಜನ್ ಕುಮಾರ್‌ಗೆ ಮರಣದಂಡನೆ ನೀಡುವುದನ್ನು ಹೊರತುಪಡಿಸಿ ಬೇರೆ ಶಿಕ್ಷೆಯನ್ನು ಸ್ವೀಕರಿಸುವುದಿಲ್ಲ. ನ್ಯಾಯಾಲಯದ ತೀರ್ಪಿನಿಂದ ನಾವು ಸಂತೋಷಗೊಂಡಿಲ್ಲ. ಸರ್ಕಾರ ಮೇಲಿನ ಹಂತದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಸಜ್ಜನ್ ಕುಮಾರ್‌ಗೆ ಮರಣದಂಡನೆ ವಿಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ," ಎಂದು ಸಿಖ್ ಮುಖಂಡ ಗುರುಲಾಡ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಚಾರಣೆ ವೇಳೆ ತನಿಖಾಧಿಕಾರಿಗಳ ಪರ ವಕೀಲರು, ಸಜ್ಜನ್ ಕುಮಾರ್‌ಗೆ ಮರಣದಂಡನೆ ನೀಡಬೇಕೆಂದು ವಾದಿಸಿದ್ದರು. ತಮ್ಮ ಲಿಖಿತ ಹೇಳಿಕೆಗಳಲ್ಲಿ, ಈ ಪ್ರಕರಣ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕಿಂತಲೂ  ಗಂಭೀರ ಎಂದು ಹೇಳಿದ್ದರು. ಸಮುದಾಯವೊಂದನ್ನು ಉದ್ದೇಶಿತ ರೀತಿಯಲ್ಲಿ ಗುರಿಯಾಗಿಸಿಕೊಂಡ ಅಪರಾಧ ಎಂದು ವಾದಿಸಿದ್ದರು. 

Tags:    

Similar News