Mahakumbh Mela : ಮಹಾಶಿವರಾತ್ರಿ ಪುಣ್ಯ ಸ್ನಾನ, ಪ್ರಯಾಗರಾಜ್ನಲ್ಲಿ ವಾಹನಗಳಿಗೆ ನಿಷೇಧ
ಫೆಬ್ರವರಿ 26ರಂದು ಮಹಾ ಕುಂಭ ಮೇಳದ ಕೊನೆಯ ದಿನವಾಗಿದ್ದು, ಶಾಹಿ ಸ್ನಾನದ ಹಿನ್ನೆಲೆಯಲ್ಲಿ 1 ಕೋಟಿಗಿಂತಲೂ ಹೆಚ್ಚು ಭಕ್ತರು ಬರುವ ಸಾಧ್ಯತೆಗಳಿವೆ. ಹೀಗಾಗಿ ದಟ್ಟಣೆ ಉಂಟಾಗದಂತೆ ವಾಹನಗಳಿಗೆ ನಿಷೇಧ ಹೇರಲಾಗಿದೆ;
ಪ್ರಯಾಗ್ರಾಜ್ನ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವುದು.
ಶಿವರಾತ್ರಿ ಹಬ್ಬ ಹಾಗೂ ಪುಣ್ಯಸ್ನಾನದ ಹಿನ್ನೆಲೆಯಲ್ಲಿ ಮಹಾ ಕುಂಭ ಮೇಳ ನಡೆಯುವ ಪ್ರಯಾಗ್ರಾಜ್ನಲ್ಲಿ ಫೆಬ್ರವರಿ 25ರಂದು ಸಂಜೆ 4 ಗಂಟೆಯಿಂದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅದೇ ರೀತಿ ಮಹಾಶಿವರಾತ್ರಿ ದಿನದಂದು ಪ್ರಯಾಗ್ರಾಜ್ನಲ್ಲಿ ಹತ್ತಿರದ ಶಿವ ಮಂದಿರಗಳಲ್ಲಿ ಪೂಜೆ ಸಲ್ಲಿಸಲು ಹಾಗೂ ಹತ್ತಿರದ ಘಾಟ್‌ಗಳಲ್ಲಿಯೇ ಸ್ನಾನ ಮಾಡಲು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಫೆಬ್ರವರಿ 26ರಂದು ಮಹಾ ಕುಂಭ ಮೇಳದ ಕೊನೆಯ ದಿನವಾಗಿದ್ದು, ಶಾಹಿ ಸ್ನಾನದ ಹಿನ್ನೆಲೆಯಲ್ಲಿ 1 ಕೋಟಿಗಿಂತಲೂ ಹೆಚ್ಚು ಭಕ್ತರು ಬರುವ ಸಾಧ್ಯತೆಗಳಿವೆ. ಹೀಗಾಗಿ ದಟ್ಟಣೆ ಉಂಟಾಗದಂತೆ ವಾಹನಗಳಿಗೆ ನಿಷೇಧ ಹೇರಲಾಗಿದೆ. ಅಗತ್ಯ ಸೇವೆಗಳಿಗಾಗಿ ಕೆಲವು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. "ಹಾಲು, ತರಕಾರಿ, ಔಷಧ, ಇಂಧನ ಹಾಗೂ ತುರ್ತು ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ. ವೈದ್ಯರು, ಪೊಲೀಸ್ ಅಧಿಕಾರಿಗಳು, ಹಾಗೂ ಆಡಳಿತ ಸಿಬ್ಬಂದಿಗೆ ಮುಕ್ತ ಸಂಚಾರ ಅವಕಾಶ ಕಲ್ಪಿಸಲಾಗಿದೆ,'' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಕ್ತರ ದಟ್ಟಣೆ ನಿಯಂತ್ರಿಸಲು ಘಾಟ್ಗಳ ಹಂಚಿಕೆ
ಮಹಾ ಕುಂಭ ಮೇಳಕ್ಕೆ ಪ್ರವೇಶ ಮಾಡುವ ಮಾರ್ಗಗಳ ಆಧಾರದ ಮೇಲೆ ವಿಶೇಷ ಘಾಟ್ಗಳನ್ನು ಹಂಚಿಕೆ ಮಾಡಲಾಗಿದೆ.
ಅರೈಲ್ ಘಾಟ್ - ದಕ್ಷಿಣಿ ಝುಂಸಿ ಮಾರ್ಗ ಹಾಗೂ ಅರೈಲ್ ಸೆಕ್ಟರ್ ಮೂಲಕ ಬರುವ ಭಕ್ತರು ಇಲ್ಲಿ ಸ್ನಾನ ಮಾಡಬೇಕಾಗುತ್ತದೆ.
ಹರಿಶ್ಚಂದ್ರ ಘಾಟ್, ಓಲ್ಡ್ ಜಿಟಿ ಘಾಟ್ - ಉತ್ತರ ಝುಂಸಿ ಮಾರ್ಗದಿಂದ ಬರುವ ಭಕ್ತರು ಇಲ್ಲಿ ಸ್ನಾನ ಮಾಡಬೇಕು.
ಭಾರದ್ವಾಜ್ ಘಾಟ್, ನಾಗವಾಸುಕಿ ಘಾಟ್, ಮೊರಿ ಘಾಟ್, ಕಾಳಿ ಘಾಟ್, ರಾಮ ಘಾಟ್, ಹನುಮಾನ ಘಾಟ್ - ಪಾಂಡೆ ಕ್ಷೇತ್ರದ ಮೂಲಕ ಬರುವ ಭಕ್ತರಿಗೆ ನಿಗದಿ ಮಾಡಲಾಗಿದೆ.
ಶಿಸ್ತು ಪಾಲಿಸಲು ಮನವಿ
ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಶಿಸ್ತು ಪಾಲಿಸಲು ಮನವಿ ಮಾಡಿದೆ. ಭಕ್ತರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಸೇತುವೆಗಳ (ಪಾಂಟೂನ್ ಬ್ರಿಡ್ಜ್) ನಿರ್ವಹಣೆ ಮಾಡಲಾಗುತ್ತಿದೆ.
40 ಪೊಲೀಸ್ ತಂಡಗಳ ನಿಯೋಜನೆ
ಉತ್ತರ ಪ್ರದೇಶ ಸರ್ಕಾರ ಕುಂಭ ಮೇಳದ ಭದ್ರತೆಗಾಗಿ ಹೆಚ್ಚುವರಿ ಕ್ರಮಗಳನ್ನು** ಕೈಗೊಂಡಿದೆ. ಅನುಮತಿ ಹೊಂದಿದ ವಾಹನಗಳಿಗೆ ಮಾತ್ರ ಮೀಸಲು ಪಾರ್ಕಿಂಗ್ ಬಳಸಲು ಸೂಚಿಸಲಾಗಿದೆ.
40 ಪೊಲೀಸ್ ತಂಡಗಳನ್ನು ಬೈಕ್ ಮೇಲೆ ಗಸ್ತು ತಿರುಗಲು ನಿಯೋಜಿಸಲಾಗಿದೆ. ಪ್ರಯಾಗರಾಜ್‌ಗೆ ಸಂಪರ್ಕಿಸುವ 7 ಪ್ರಮುಖ ಮಾರ್ಗಗಳಲ್ಲಿ ಡೈರೆಕ್ಟರ್ ಜನರಲ್ (DG) ಮತ್ತು ಇನ್ಸ್‌ಪೆಕ್ಟರ್ ಜನರಲ್ (IG) ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.