ಕಾಸರಗೋಡು ಜಿಲ್ಲೆಯ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕಗಳ ಮರುಸ್ಥಾಪನೆಗೆ ಆದೇಶ
ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಕಿತ್ತುಹಾಕಿ ಕೇವಲ ಮಲೆಯಾಳಂ ಹಾಗೂ ಇಂಗ್ಲೀಷ್ ನಾಮಫಲಕಗಳನ್ನು ಹಾಕಲಾಗಿತ್ತು.;
ಕರ್ನಾಟಕ ಮತ್ತು ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕಗಳನ್ನು ಮರುಸ್ಥಾಪಿಸುವಂತೆ ಭಾಷಾ ಅಲ್ಪಸಂಖ್ಯಾತ ಇಲಾಖೆ ದಕ್ಷಿಣ ರೈಲ್ವೆಗೆ ಸೂಚನೆ ನೀಡಿದೆ. ಈ ಹಿಂದೆ ಕನ್ನಡದ ನಾಮಫಲಕಗಳನ್ನು ತೆಗೆದುಹಾಕಿ ಮಲಯಾಳಂ ಮತ್ತು ಇಂಗ್ಲಿಷ್ ನಾಮಫಲಕಗಳನ್ನು ಮಾತ್ರ ಅಳವಡಿಸಲಾಗಿತ್ತು.
ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ರೈಲ್ವೆ ನಿಲ್ದಾಣಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ತೆಗೆದುಹಾಕಿದಾಗ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಜೂನ್ 13ರಂದು ಕಾಸರಗೋಡಿನ ಜಿಲ್ಲಾಧಿಕಾರಿ, ರೈಲ್ವೆ ಮುಖ್ಯಸ್ಥರು ಮತ್ತು ಕೇಂದ್ರ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಕಾರ್ಯಾಲಯಕ್ಕೆ ಪತ್ರ ಬರೆದು ಕನ್ನಡ ನಾಮಫಲಕಗಳನ್ನು ಮರು ಅಳವಡಿಸುವಂತೆ ಮನವಿ ಮಾಡಿತ್ತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮನವಿಗೆ ಕೇಂದ್ರ ಭಾಷಾ ಅಲ್ಪಸಂಖ್ಯಾತ ಇಲಾಖೆ ಸ್ಪಂದಿಸಿದ್ದು, ಪಾಲಕ್ಕಾಡ್‌ನಲ್ಲಿರುವ ದಕ್ಷಿಣ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕನ್ನಡ ನಾಮಫಲಕಗಳನ್ನು ಮರುಸ್ಥಾಪಿಸಲು ಕ್ರಮ ತೆಗೆದುಕೊಂಡ ಕೇಂದ್ರ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಸಚಿವಾಲಯವನ್ನು ಪ್ರಾಧಿಕಾರವು ಅಭಿನಂದಿಸಿದೆ ಎಂದು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಾಸರಗೋಡಿನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದುವರೆಗೂ ಸ್ಪಂದಿಸಿಲ್ಲ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದ್ದಾರೆ.