ಎಲ್ಲಾ ಮತಗಳ ವಿವಿಪ್ಯಾಟ್ ಪರಿಶೀಲನೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್
ಆದರೆ, ಕಾಗದದ ಚೀಟಿಗಳನ್ನು ಎಣಿಸಲು ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಬಹುದೇ ಮತ್ತು ಚುನಾವಣೆ ಚಿಹ್ನೆಗಳ ಜೊತೆಗೆ ಬಾರ್ ಕೋಡ್ ಅಳವಡಿಸಬಹುದೇ ಎಂಬುದನ್ನು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್, ದೇಶದ ಚುನಾವಣೆ ಆಯೋಗವನ್ನು ಒತ್ತಾಯಿಸಿದೆ.;
ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳಲ್ಲಿ ಚಲಾಯಿಸಿದ ನೂರಕ್ಕೆ ನೂರರಷ್ಟು ಮತಗಳನ್ನು ವಿವಿ ಪ್ಯಾಟ್(ವೋಟರ್ ವೆರಿಫಿಯಬಲ್ ಪೇಪರ್ ಆಡಿಟ್ ಟ್ರೇಲ್ಸ್ ) ಮೂಲಕ ಪರಿಶೀಲಿಸುವ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಮತ್ತು ಹಿಂದಿನ ಬ್ಯಾಲೆಟ್ ಚೀಟಿ ವ್ಯವಸ್ಥೆಗೆ ಮರಳಲು ಸಾಧ್ಯವಿಲ್ಲ ಎಂದು ಹೇಳಿದೆ.
ತಮ್ಮ ಹಾಗೂ ನ್ಯಾಯಮೂರ್ತಿ ದೀಪಂಕರ್ ದತ್ತಾ ಪರವಾಗಿ ಮಾತನ್ನಾಡಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಾಲಯ ಸಮಸ್ಯೆಯ ಆಯಾಮಗಳು ಮತ್ತು ತಾಂತ್ರಿಕ ಅಂಶಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದ್ದು, ವಿವಿಪಿಎಟಿ ಚೀಟಿಗಳೊಂದಿಗೆ ಇವಿಎಂ ಮತಗಳ ಸಂಪೂರ್ಣ ಪರಿಶೀಲನೆಗೆ ಸಲ್ಲಿಕೆಯಾದ ಮನವಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು.
ಆದರೆ, ಕಾಗದದ ಚೀಟಿಗಳನ್ನು ಎಣಿಸಲು ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಬಹುದೇ ಮತ್ತು ಚುನಾವಣೆ ಚಿಹ್ನೆಗಳ ಜೊತೆಗೆ ಬಾರ್ ಕೋಡ್ ಅಳವಡಿಸಬಹುದೇ ಎಂಬುದನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಚುನಾವಣೆ ಆಯೋಗವನ್ನು ಒತ್ತಾಯಿಸಿದೆ.
ಸುಪ್ರೀಂ ನಿರ್ದೇಶನಗಳು
ಈ ವರ್ಷ ಮೇ 1 ರಂದು ಅಥವಾ ಆನಂತರ ಬಳಕೆಯಾದ ವಿವಿ ಪ್ಯಾಟ್‌ಗಳಲ್ಲಿ ಚಿಹ್ನೆ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಿಂಬಲ್ ಲೋಡಿಂಗ್ ಯೂನಿಟ್ (ಎಸ್‌ಎಲ್‌ಯು)ಗಳನ್ನು ಸಂಗ್ರಾಹಕಗಳಲ್ಲಿ ಮುಚ್ಚಿಟ್ಟು, ಭದ್ರಪಡಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಚುನಾವಣೆ ಫಲಿತಾಂಶ ಪ್ರಕಟವಾಗುವ ಕನಿಷ್ಠ 45 ದಿನಗಳವರೆಗೆ ಇವಿಎಂಗಳ ಜೊತೆಗೆ ಸೀಲ್ ಮಾಡಿದ ಸಂಗ್ರಾಹಕಗಳನ್ನು ಭದ್ರಪಡಿಸಿದ ಕೊಠಡಿಯಲ್ಲಿ ಇರಿಸಬೇಕು. ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಶೇ.5ರಷ್ಟು ಇವಿಎಂಗಳಲ್ಲಿ ಮೆಮೊರಿ ಸೆಮಿ ಕಂಟ್ರೋಲರ್ ನ್ನು ಇವಿಎಂ ತಯಾರಕ ಸಂಸ್ಥೆಯ ಇಂಜಿನಿಯರ್‌ಗಳು ಪರೀಕ್ಷಿಸಬೇಕು ಮತ್ತು ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರತಿಪಕ್ಷಗಳ ಆಗ್ರಹ
ವ್ಯವಸ್ಥೆಯ ಯಾವುದೇ ಅಂಗವನ್ನು ಕುರುಡಾಗಿ ಸಂಶಯಿಸುವುದು ಅನಗತ್ಯ ಶಂಕೆ ಕಾರಣವಾಬಹುದು ಮತ್ತು ಪ್ರಗತಿಗೆ ಅಡ್ಡಿಯಾಗಬಹುದು ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು. ವಿವಿ ಪ್ಯಾಟ್ ಯಂತ್ರವನ್ನು ಇವಿಎಂನ ಬ್ಯಾಲೆಟ್ ಘಟಕಕ್ಕೆ ಜೋಡಿಸಲಾಗುತ್ತದೆ ಮತ್ತು ಮತದಾರರ ಆಯ್ಕೆಯನ್ನುಳ್ಳ ಕಾಗದದ ಚೀಟಿ ಯನ್ನು ಮುದ್ರಿಸುವ ಮೂಲಕ ಪರಿಶೀಲಿಸಲು ಅವಕಾಶ ನೀಡುತ್ತದೆ.
ಸದ್ಯ ಪ್ರತಿ ವಿಧಾನಸಭೆ ವಿಭಾಗದಲ್ಲಿ ಆಯ್ದ ಐದು ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳನ್ನು ಪರಿಶೀಲಿಸಲು ಇದನ್ನು ಬಳಸಲಾಗುತ್ತದೆ. ಎಲ್ಲಾ ವಿವಿಪ್ಯಾಟ್ ಚೀಟಿಗಳನ್ನು ಇವಿಎಂ ಮತಗಳೊಂದಿಗೆ ಪರಿಶೀಲನೆ ಮಾಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.