ಇಸ್ರೇಲ್ ವಿರೋಧಿ ಪ್ರತಿಭಟನೆ: ಅಮೆರಿಕದಲ್ಲಿ ಕೊಯಮತ್ತೂರು ವಿದ್ಯಾರ್ಥಿನಿ ಬಂಧನ

Update: 2024-04-26 06:51 GMT

ನ್ಯೂಯಾರ್ಕ್, ಏ. 26- ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆ ನಡೆಸಿದ ಕೊಯಮತ್ತೂರು ಮೂಲದ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ. 

ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ, ಕೊಯಮತ್ತೂರಿನಲ್ಲಿ ಹುಟ್ಟಿ ಕೊಲಂಬಸ್‌ನಲ್ಲಿ ಬೆಳೆದ ಅಚಿಂತ್ಯ ಶಿವಲಿಂಗಂ ಅವರನ್ನು ಕ್ಯಾಂಪಸ್‌ನಿಂದ ನಿರ್ಬಂಧಿಸಲಾಗಿದ್ದು, ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ. 

ಸುಮಾರು 100 ಸ್ನಾತಕಪೂರ್ವ ಮತ್ತು ಪದವೀಧರ ವಿದ್ಯಾರ್ಥಿಗಳು ಗುರುವಾರ ಮುಂಜಾನೆ ಮೆಕ್‌ಕೋಶ್ ಅಂಗಳದಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗೆ ಟೆಂಟ್‌ಗಳನ್ನು ಸ್ಥಾಪಿಸಿದರು. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಆನಂತರ ಇಬ್ಬರು ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ಉಳಿದವರು ಧರಣಿ ಮುಂದುವರಿಸಿದರು ಎಂದು ಪ್ರಿನ್ಸ್‌ಟನ್ ಅಲುಮ್ನಿ ವೀಕ್ಲಿ ವರದಿಯಲ್ಲಿ ತಿಳಿಸಿದೆ. 

ಪ್ಯಾಲೆಸ್ಟೀನಿಯನ್ನರ ಪರ ದೇಶವ್ಯಾಪಿ ಧರಣಿ ನಡೆಯುತ್ತಿದೆ. ಕಾಲೇಜುಗಳು ಇಸ್ರೇಲ್‌ನೊಂದಿಗೆ ತಮ್ಮ ಹಣಕಾಸು ಸಂಬಂಧ ಕಡಿತಗೊಳಿಸ ಬೇಕು ಮತ್ತು ಗಾಜಾ ಸಂಘರ್ಷವನ್ನು ಸಕ್ರಿಯಗೊಳಿಸುತ್ತಿರುವ ಕಂಪನಿಗಳಿಂದ ದೂರವಿರಬೇಕೆಂದು ಒತ್ತಾಯಿಸುತ್ತಿವೆ. ಪ್ರತಿಭಟನೆಗಳು ಈಗ ಯೆಹೂದಿ ವಿರೋಧಿಯಾಗಿ ಮಾರ್ಪಟ್ಟಿವೆ ಮತ್ತು ಸಮುದಾಯದ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ರವೇಶಿಸಲು ಹೆದರುತ್ತಿದ್ದಾರೆ ಎಂದು ಆ ಸಮುದಾಯದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. 

ವಿದ್ಯಾರ್ಥಿಗಳು ಟೆಂಟ್‌ ನಿರ್ಮಿಸಲು ಪ್ರಾರಂಭಿಸಿದ ನಂತರ, ಪ್ರಿನ್ಸ್‌ಟನ್ ಸಾರ್ವಜನಿಕ ಸುರಕ್ಷತೆ (ಪಿಸೇಫ್) ಪ್ರತಿಭಟನಾಕಾರರಿಗೆ ಮೊದಲ ಎಚ್ಚರಿಕೆ‌ ನೀಡಿತು. ಅಚಿಂತ್ಯ ಶಿವಲಿಂಗಂ ಮತ್ತು ಹಸ‌ನ್‌ ಸೈಯದ್ ಅವರನ್ನು ಬಂಧಿಸಲಾಯಿತು. ಬಂಧನದ ಬಳಿಕ ವಿದ್ಯಾರ್ಥಿಗಳು ಶಿಬಿರಗಳನ್ನು ಕಳಚಿ ಧರಣಿ ಮುಂದುವರಿಸಿದರು ಎಂದು ಡೈಲಿ ಪ್ರಿನ್ಸ್‌ಸ್ಟೋನಿಯನ್ ವರದಿ ಮಾಡಿದೆ. 

ʻಇಬ್ಬರನ್ನೂ ಕ್ಯಾಂಪಸ್‌ನಿಂದ ನಿರ್ಬಂಧಿಸಲಾಗಿದೆ. ಶಿಸ್ತು ಪ್ರಕ್ರಿಯೆ ಬಾಕಿಯಿದೆ. ಬಂಧಿಸುವಾಗ ಬಲಪ್ರಯೋಗ ಮಾಡಲಿಲ್ಲʼ ಎಂದು ವಿಶ್ವವಿದ್ಯಾನಿಲಯದ ವಕ್ತಾರ ಜೆನ್ನಿಫರ್ ಮೊರಿಲ್ 'ಪ್ರಿ‌ನ್ಸ್‌ʼ ನಲ್ಲಿ ಬರೆದಿದ್ದಾರೆ. 

ಮೊದಲ ವರ್ಷದ ಪಿಎಚ್‌.ಡಿ., ವಿದ್ಯಾರ್ಥಿ ಉರ್ವಿ, ಬಂಧನ ʻಹಿಂಸಾತ್ಮಕವಾಗಿತ್ತು. ಬಂಧಿತರ ಮಣಿಕಟ್ಟಿನ ಸುತ್ತ ಜಿಪ್ ಟೈ ಹಾಕಲಾಗಿದೆʼ ಎಂದು ಹೇಳಿದರು. ʻಅವರನ್ನು ಮನೆಯಿಂದ ತೆರವುಗೊಳಿಸಲಾಗಿದೆ ಮತ್ತು ವೈಯಕ್ತಿಕ ವಸ್ತುಗಳನ್ನು ತೆಗೆದುಕೊಳ್ಳಲು ಕೇವಲ 5 ನಿಮಿಷ ಕಾಲಾವಕಾಶ ನೀಡಲಾಗಿದೆʼ ಎಂದು ಉರ್ವಿ ಹೇಳಿದರು. 

Tags:    

Similar News