ಶುಭ್​ಮನ್ ಗಿಲ್ ಕುತ್ತಿಗೆಗೆ ಗಾಯ: ಕೋಲ್ಕತ್ತಾ ಟೆಸ್ಟ್‌ನಿಂದ ಸಂಪೂರ್ಣ ಔಟ್, ಆಸ್ಪತ್ರೆಗೆ ದಾಖಲು

ಗಿಲ್ ಅವರ ಅನುಪಸ್ಥಿತಿಯಲ್ಲಿ, ಶನಿವಾರ ತಂಡವನ್ನು ಮುನ್ನಡೆಸಿದ್ದ ಉಪನಾಯಕ ರಿಷಭ್ ಪಂತ್, ಪಂದ್ಯದ ಉಳಿದ ಭಾಗಕ್ಕೂ ನಾಯಕರಾಗಿ ಮುಂದುವರಿಯಲಿದ್ದಾರೆ.

Update: 2025-11-16 04:37 GMT
Click the Play button to listen to article

ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅವರು ಕುತ್ತಿಗೆಯ ಗಾಯದ ಕಾರಣದಿಂದಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಈ ಕುರಿತು ಬಿಸಿಸಿಐ ಭಾನುವಾರ (ನ.16) ಅಧಿಕೃತ ಮಾಹಿತಿ ನೀಡಿದೆ

ಪಂದ್ಯದ ಎರಡನೇ ದಿನ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದ ಗಿಲ್, ಕೇವಲ 4 ರನ್ ಗಳಿಸಿ 'ರಿಟೈರ್ಡ್ ಹರ್ಟ್' ಆಗಿದ್ದರು. ಅನಿರೀಕ್ಷಿತ ಬೌನ್ಸ್​ಗೆ ಸಾಕ್ಷಿಯಾಗಿರುವ ಕೋಲ್ಕತ್ತಾ ಪಿಚ್​ನಲ್ಲಿ, ಅವರು ಭಾರತದ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಲು ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

"ನಾಯಕ ಶುಭ್​ಮನ್ ಗಿಲ್ ಅವರಿಗೆ ಪಂದ್ಯದ ಎರಡನೇ ದಿನದಂದು ಕುತ್ತಿಗೆಗೆ ಗಾಯವಾಗಿತ್ತು. ದಿನದಾಟದ ನಂತರ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಅವರು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಅವರು ಇನ್ನು ಮುಂದೆ ಭಾಗವಹಿಸುವುದಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಲಿದೆ" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಶನಿವಾರ ಸಂಜೆ, ಗಿಲ್ ಅವರನ್ನು ಕುತ್ತಿಗೆಗೆ ಬೆಂಬಲ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ ಅವರ ಬೌಲಿಂಗ್​ನಲ್ಲಿ ಸ್ವೀಪ್ ಶಾಟ್ ಮೂಲಕ ಬೌಂಡರಿ ಬಾರಿಸಿದ ತಕ್ಷಣವೇ ಗಿಲ್ ಅವರ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಮೈದಾನದಲ್ಲಿ ವೈದ್ಯಕೀಯ ಸಿಬ್ಬಂದಿಯಿಂದ ಆರಂಭಿಕ ಚಿಕಿತ್ಸೆ ಪಡೆದ ನಂತರ ಅವರು ಪೆವಿಲಿಯನ್‌ಗೆ ಮರಳಿದ್ದರು.

ಗಿಲ್ ಅವರ ಅನುಪಸ್ಥಿತಿಯಲ್ಲಿ, ಶನಿವಾರ ತಂಡವನ್ನು ಮುನ್ನಡೆಸಿದ್ದ ಉಪನಾಯಕ ರಿಷಭ್ ಪಂತ್, ಪಂದ್ಯದ ಉಳಿದ ಭಾಗಕ್ಕೂ ನಾಯಕರಾಗಿ ಮುಂದುವರಿಯಲಿದ್ದಾರೆ.

ಭಾರತದ ಸಹಾಯಕ ಕೋಚ್ ಮೋರ್ನೆ ಮಾರ್ಕೆಲ್ ಅವರು ಗಿಲ್ ಅವರ ಗಾಯಕ್ಕೆ ನಿದ್ದೆಯ ಸಮಯದ ಭಂಗಿ ಕಾರಣವಿರಬಹುದು, ಆದರೆ ಅವರ ಮೇಲಿರುವ "ಕೆಲಸದ ಹೊರೆ ಕಾರಣವಲ್ಲ" ಎಂದು ಹೇಳಿದ್ದಾರೆ. "ಮೊದಲು ನಾವು ಅವರಿಗೆ ಕುತ್ತಿಗೆ ನೋವು ಹೇಗೆ ಬಂತು ಎಂದು ನಿರ್ಧರಿಸಬೇಕು, ಬಹುಶಃ ಸರಿಯಾಗಿ ನಿದ್ದೆ ಮಾಡಿಲ್ಲದಿರಬಹುದು. ಇದು ಅವರ ಮೇಲಿರುವ ಕೆಲಸದ ಹೊರೆಯಿಂದ ಆಗಿದೆ ಎಂದು ನಾವು ಹೇಳಲಾಗದು" ಎಂದು ಮಾರ್ಕೆಲ್ ಎರಡನೇ ದಿನದಾಟದ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು.

ಗಿಲ್ ಅವರು ಭಾರತ ತಂಡದಲ್ಲಿ ಮೂರೂ ಮಾದರಿಗಳನ್ನು ಆಡುವ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಏಷ್ಯಾ ಕಪ್ ಮೂಲಕ ಟಿ20 ತಂಡಕ್ಕೆ ಮರಳಿದ್ದ ಅವರು, ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿಗೂ ನಾಯಕರಾಗಿ ನೇಮಕಗೊಂಡಿದ್ದರು. 

Tags:    

Similar News