ಭಾರತದ ವಿರುದ್ಧ ಪ್ರಚೋದನಕಾರಿ ವರ್ತನೆ: ಹ್ಯಾರಿಸ್ ರೌಫ್‌ಗೆ ದಂಡ, ಫರ್ಹಾನ್‌ಗೆ ಎಚ್ಚರಿಕೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ್ದ ದೂರಿನ ಅನ್ವಯ, ಶುಕ್ರವಾರ ದುಬೈನಲ್ಲಿರುವ ಪಾಕಿಸ್ತಾನ ತಂಡದ ಹೋಟೆಲ್‌ನಲ್ಲಿ ಮ್ಯಾಚ್ ರೆಫರಿ ರಿಚೀ ರಿಚರ್ಡ್‌ಸನ್ ಅವರು ಇಬ್ಬರೂ ಆಟಗಾರರ ವಿಚಾರಣೆ ನಡೆಸಿದರು.

Update: 2025-09-26 12:44 GMT

ಏಷ್ಯಾ ಕಪ್ ಸೂಪರ್-4 ಹಂತದಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಮತ್ತು ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ಐಸಿಸಿ ಪಂದ್ಯದ ಶುಲ್ಕದ ಶೇ. 30ರಷ್ಟು ದಂಡ ವಿಧಿಸಿದೆ. ಆದರೆ, ಇದೇ ಪಂದ್ಯದಲ್ಲಿ ಅರ್ಧಶತಕದ ನಂತರ 'ಗನ್-ಶಾಟ್' ರೀತಿಯಲ್ಲಿ ಸಂಭ್ರಮಿಸಿದ್ದ ಅವರ ಸಹ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಯಾವುದೇ ದಂಡವಿಲ್ಲದೆ, ಕೇವಲ ಎಚ್ಚರಿಕೆಯೊಂದಿಗೆ ಪಾರಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ್ದ ದೂರಿನ ಅನ್ವಯ, ಶುಕ್ರವಾರ ದುಬೈನಲ್ಲಿರುವ ಪಾಕಿಸ್ತಾನ ತಂಡದ ಹೋಟೆಲ್‌ನಲ್ಲಿ ಮ್ಯಾಚ್ ರೆಫರಿ ರಿಚೀ ರಿಚರ್ಡ್‌ಸನ್ ಅವರು ಇಬ್ಬರೂ ಆಟಗಾರರ ವಿಚಾರಣೆ ನಡೆಸಿದರು.

ಆರಂಭದಲ್ಲಿ, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಇಬ್ಬರೂ ಆಟಗಾರರು ವಾದಿಸಿದ್ದರು. ಆದರೆ, ವಿಚಾರಣೆಯ ನಂತರ, ಮ್ಯಾಚ್ ರೆಫರಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ವಿವಾದ?

ಕಳೆದ ಭಾನುವಾರ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ, ಹ್ಯಾರಿಸ್ ರೌಫ್ ಅವರು ಭಾರತೀಯ ಅಭಿಮಾನಿಗಳನ್ನು ಅಣಕಿಸುವಂತೆ ವಿಮಾನ ಪತನದ ರೀತಿಯಲ್ಲಿ ಸನ್ನೆ ಮಾಡಿದ್ದರು. ಮತ್ತೊಂದೆಡೆ, ಸಾಹಿಬ್‌ಜಾದಾ ಫರ್ಹಾನ್ ತಮ್ಮ ಅರ್ಧಶತಕದ ನಂತರ ಬ್ಯಾಟ್ ಅನ್ನು ಗನ್‌ನಂತೆ ಹಿಡಿದು ಸಂಭ್ರಮಾಚರಣೆ ಮಾಡಿದ್ದರು. ಈ ಎರಡೂ ಘಟನೆಗಳನ್ನು ಪ್ರಚೋದನಕಾರಿ ಎಂದು ಪರಿಗಣಿಸಿ ಬಿಸಿಸಿಐ, ಐಸಿಸಿಗೆ ಅಧಿಕೃತವಾಗಿ ದೂರು ನೀಡಿತ್ತು.

ಈ ಘಟನೆಗಳಿಂದಾಗಿ ಉಭಯ ತಂಡಗಳ ನಡುವಿನ ವಾತಾವರಣ ಮತ್ತಷ್ಟು ಬಿಗಡಾಯಿಸಿತ್ತು. ಇದೀಗ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. 

Tags:    

Similar News