ಸರ್ಕಾರದ ಕುರುಡುಗಣ್ಣಿಗೆ ಕಾಣದ ವಿಶ್ವಕಪ್ ಗೆದ್ದ ಅಂಧ ಮಹಿಳೆಯರ ಆನಂದಭಾಷ್ಪ...

ಕೆಲವು ತಿಂಗಳ ಹಿಂದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ ಟ್ರೋಫಿ ಗೆದ್ದಾಗ ಸರ್ಕಾರದ ಸಂಭ್ರಮ ಮುಗಿಲು ಮುಟ್ಟಿತ್ತು. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ತಂಡವನ್ನು ಸ್ವಾಗತಿಸಿದ್ದರು.

Update: 2025-11-24 15:14 GMT

ಸರ್ಕಾರದ ನಿರ್ಲಕ್ಷ್ಯಕ್ಕೆ ಈ ಚಿತ್ರವೇ ಸಾಕ್ಷಿ. ಆರ್​ಸಿಬಿಗೆ ಗೆದ್ದಾಗ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ಮಂತ್ರಿಗಳ ದಂಡು. ಇನ್ನೊಂದು ಕಡೆ ಸ್ವಂತ ಖರ್ಚಿನಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದ ಕ್ರಿಕೆಟ್ ಸಂಸ್ಥೆ. (ಚಿತ್ರ- ರಘು ಆರ್​ಡಿ)

Click the Play button to listen to article

ಒಂದು ಕಡೆ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ಆಟಗಾರರ ಕಣ್ಣಲ್ಲಿ ಆನಂದಭಾಷ್ಪ. ಮತ್ತೊಂದೆಡೆ, ಆ ಸಾಧನೆಯನ್ನು ಕಣ್ಣಾರೆ ಕಂಡು, ಬೆನ್ನುತಟ್ಟಿ ಪ್ರೋತ್ಸಾಹಿಸಲು ವಿಮಾನ ನಿಲ್ದಾಣಕ್ಕೆ ಬಾರದೆ, ತಮ್ಮ ಜವಾಬ್ದಾರಿಯನ್ನು ಮರೆತ ಸರ್ಕಾರದ ದಿವ್ಯ ನಿರ್ಲಕ್ಷ್ಯ.

ಈ ಎರಡೂ ದೃಶ್ಯಗಳು ಸೋಮವಾರ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. "ಎಲ್ಲರನ್ನೂ ಒಳಗೊಳ್ಳುವ" ಸರ್ಕಾರದ ಮಾತುಗಳು ಎಷ್ಟು ಟೊಳ್ಳು ಎಂಬುದು ಮತ್ತೊಮ್ಮೆ ಸಾಬೀತಾಯಿತು. ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನೆದುರು ಹಾರಿಸಿದ ದೃಷ್ಟಿ ವಿಶೇಷಚೇತನ ಮಹಿಳೆಯರಿಗೆ ನೀಡಿದ ಗೌರವವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿತು. 

ಕೆಲವು ತಿಂಗಳ ಹಿಂದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ ಟ್ರೋಫಿ ಗೆದ್ದಾಗ ಕರ್ನಾಟಕ ಸರ್ಕಾರದ ಸಂಭ್ರಮ ಮುಗಿಲು ಮುಟ್ಟಿತ್ತು. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ತಂಡವನ್ನು ಸ್ವಾಗತಿಸಿದ್ದರು. ಬಳಿಕ ವಿಧಾನಸೌಧದ ಮುಂದೆ ಬೃಹತ್ ಕಾರ್ಯಕ್ರಮ ಆಯೋಜಿಸಿ, ರಾಜಮರ್ಯಾದೆ ನೀಡಲಾಗಿತ್ತು.

ಆರ್‌ಸಿಬಿ ಕೇವಲ ಒಂದು ಖಾಸಗಿ, ವಾಣಿಜ್ಯ ಫ್ರಾಂಚೈಸಿ. ಆದರೂ, ಅಲ್ಲಿ ರಾಜಕೀಯ ಲಾಭದ ಲೆಕ್ಕಾಚಾರವಿತ್ತೋ ಏನೋ, ಸರ್ಕಾರವು ಮೈಮರೆತು ಸಂಭ್ರಮಿಸಿತ್ತು. ಆದರೆ, ಅದೇ ಸಂಭ್ರಮಾಚರಣೆಯಲ್ಲಿ ಸರ್ಕಾರದದ್ದೇ ವೈಫಲ್ಯದಿಂದ ಕಾಲ್ತುಳಿತ ಸಂಭವಿಸಿ 11 ಮಂದಿ ಅಮಾಯಕರು ಪ್ರಾಣ ಬಿಟ್ಟು, ಹಲವರು ಗಾಯಗೊಂಡಿದ್ದು ಮಾತ್ರ ದುರಂತದ ಕಪ್ಪುಚುಕ್ಕೆ.

ಒಬ್ಬರಿಗೂ ಸಮಯ ಇಲ್ಲ

ಇದು ಫ್ರಾಂಚೈಸಿ ಕ್ರಿಕೆಟ್ ಅಲ್ಲ. ಭಾರತ ದೇಶವನ್ನು ಪ್ರತಿನಿಧಿಸಿ, ಚೊಚ್ಚಲ ವಿಶ್ವಕಪ್ ಗೆದ್ದು ಬಂದ ಹೆಣ್ಣುಮಕ್ಕಳ ಸಾಧನೆ. ಈ ತಂಡ ಬೆಂಗಳೂರಿಗೆ ಬಂದಾಗ ಸ್ವಾಗತಿಸಲು ಒಬ್ಬ ಸಚಿವರೂ ಇರಲಿಲ್ಲ. ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಬರುವುದು ದೂರದ ಮಾತು, ಕನಿಷ್ಠ  ಅವರ ಪರವಾಗಿ ಯಾರೂ ಇತ್ತ ಸುಳಿಯಲಿಲ್ಲ. ಬದಲಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಕೆ. ಶಶಿಕಲಾ ಎಂಬ ಅಧಿಕಾರಿಯನ್ನು ಕಳುಹಿಸಿ ಸರ್ಕಾರ ಕೈತೊಳೆದುಕೊಂಡಿದೆ.

ರಾಷ್ಟ್ರವನ್ನು ಪ್ರತಿನಿಧಿಸಿದ ತಂಡಕ್ಕೆ ಸರ್ಕಾರ ನೀಡಿದ ಗೌರವ ಇಷ್ಟೇಯೇ? ಇದು ಸಾಧಕಿಯರಿಗೆ ಮಾಡಿದ ಅವಮಾನವಲ್ಲದೆ ಮತ್ತೇನು ಎಂದು ಕ್ರೀಡಾ ಪೋಷಕರೊಬ್ಬರು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

ಭಾಷಣಕ್ಕಷ್ಟೇ ಸೀಮಿತವಾದ 'ಎಲ್ಲರನ್ನೂ ಒಳಗೊಳ್ಳುವ' ನೀತಿ

"ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ದಿಂದ ಹಿಡಿದು "ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ'' ಸರ್ಕಾರಗಳ ಕಡೆಯಿಂದ ನಿತ್ಯ ಕೇಳುವ ಮಾತು. ಕೆಲವೇ ದಿನಗಳ ಹಿಂದೆ (ನವೆಂಬರ್​ 2) ಹರ್ಮನ್​ಪ್ರೀತ್​ ಕೌರ್​ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಕಪ್​ ಗೆದ್ದಾಗ ಎಲ್ಲರೂ ಅಭಿನಂದಿಸಿದ್ದರು. ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಪ್ರತಿಭೆಗಳಿಗೆ ಕೋಟಿ ಕೋಟಿ ನಗದು ಬಹುಮಾನ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಉಪಾಹಾರಕ್ಕೆ ಕರೆದು ಸತ್ಕರಿಸಿದ್ದರು.

ಆದರೆ, ವಿಶೇಷ ಚೇತನ ಮಹಿಳೆಯರು ಗೆದ್ದಾಗ ಇಂಥ ಬಹುಮಾನಗಳು ಮತ್ತು ಸತ್ಕಾರಗಳ ಸುಳಿವೇ ಇಲ್ಲ. ಭಾರತ ಅಂಧರ ಕ್ರಿಕೆಟ್ ಸಂಸ್ಥೆ (CABI) ಹಾಗೂ ಸಮರ್ಥನಂ ತಾನೇ ಮುಂದೆ ನಿಂತು ಬೆಂಗಳೂರಿನಲ್ಲಿ ಈ ಸಂಭ್ರಮಾಚರಣೆಯನ್ನು ಆಯೋಜಿಸಬೇಕಾಯಿತು ಎಂದು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಯೊಬ್ಬರು ಹೇಳಿದ್ದು ಸರ್ಕಾರದ ನಡೆಗೆ ಕೈಗನ್ನಡಿಯಂತಿದೆ.

ಭಾರತ ತಂಡ ಗೆದ್ದಾಗ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಟ್ವೀಟ್ ಮಾಡಿ ಶುಭಾಶಯ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸಿದ್ದಾರೆ. ಆದರೆ, ನಿಜವಾದ ಮಹಿಳಾ ಸಬಲೀಕರಣ ಎಂದರೆ ಇಂತಹ ಸಾಧಕಿಯರನ್ನು ಖುದ್ದು ಸ್ವಾಗತಿಸಿ, ಅವರಿಗೆ ಸರ್ಕಾರದಿಂದ ಗೌರವ ಮತ್ತು ಆರ್ಥಿಕ ಬೆಂಬಲ ಘೋಷಿಸುವುದು. ಅದು ಬಿಟ್ಟು, ಕೇವಲ ಸಾಮಾಜಿಕ ಜಾಲತಾಣದ ಸಂದೇಶಗಳು ಅವರ ಹೊಟ್ಟೆ ತುಂಬಿಸುವುದಿಲ್ಲ ಎಂದು ಸಂಭ್ರಮಾಚರಣೆ ವೇಳೆ ಬಂದಿದ್ದ ಸಮಾಜ ಸೇವಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಾಧಕಿಯರಿಗೆ ಸಿಗದ ಗೌರವ

ಈ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರ್ತಿಯದ್ದು ಒಂದು ಹೋರಾಟದ ಕಥೆ. ಕಡುಬಡತನ, ಸಾಮಾಜಿಕ ಹೀಯಾಳಿಕೆ, ಕೌಟುಂಬಿಕ ನಿರ್ಲಕ್ಷ್ಯದಂತಹ ನೂರಾರು ಮುಳ್ಳಿನ ಹಾದಿಗಳನ್ನು ದಾಟಿ, ಕತ್ತಲನ್ನು ಮೆಟ್ಟಿ ನಿಂತು ಅವರು ಬೆಳಕಾಗಿದ್ದಾರೆ. ಇವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಂದ ಬಂದವರು. ಅದರಲ್ಲೂ, ತಂಡದ ನಾಯಕಿ ದೀಪಿಕಾ ನಮ್ಮದೇ ತುಮಕೂರು ಜಿಲ್ಲೆಯವರು. ಕರ್ನಾಟಕದ ಮಣ್ಣಿನ ಪ್ರತಿಭೆಯೊಬ್ಬಳು ವಿಶ್ವಮಟ್ಟದಲ್ಲಿ ದೇಶವನ್ನು ಮುನ್ನಡೆಸಿದಾಗ, ಆಕೆಯನ್ನು ಗೌರವಿಸಲು ನಮ್ಮ ಜನಪ್ರತಿನಿಧಿಗಳಿಗೆ ಪುರುಸೊತ್ತು ಸಿಗಲಿಲ್ಲ ಎಂಬುದು ದುರದೃಷ್ಟವೇ ಸರಿ.

ರಾಜಕೀಯ ಲಾಭ, ಪ್ರಚಾರದ ಗಿಮಿಕ್ ಇರುವಲ್ಲಿ ಮಾತ್ರ ನಮ್ಮ ನಾಯಕರು ಓಡೋಡಿ ಹೋಗುತ್ತಾರೆ. ಜಾತ್ರೆ, ಸಭೆ-ಸಮಾರಂಭಗಳಿಗೆ ಸಮಯ ನೀಡುವವರಿಗೆ, ದೇಶಕ್ಕೆ ಕೀರ್ತಿ ತಂದ ಈ ಹೆಣ್ಣುಮಕ್ಕಳನ್ನು ಅಭಿನಂದಿಸಲು ಸಮಯವಿಲ್ಲವೇ? ಈ ನಿರ್ಲಕ್ಷ್ಯ ಆ ಆಟಗಾರ್ತಿಯರಿಗೆ ಮಾಡಿದ ಅವಮಾನವಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ವಿಶೇಷಚೇತನರ ಆತ್ಮಗೌರವಕ್ಕೆ ಮಾಡಿದ ಘಾಸಿ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ಸಾಧಕಿಯರನ್ನು ಅಧಿಕೃತವಾಗಿ ಸನ್ಮಾನಿಸಿ, ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವ ಮೂಲಕ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕಿದೆ ಬೆಂಗಳೂರಿನ ರಾಜರಾಜೇಶ್ವರಿನಗರ ಸಂಜಯ್​​.

ಕೊಲಂಬೋದಲ್ಲಿ ಭಾರತದ ಪರಾಕ್ರಮ

ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಮಹಿಳೆಯರ ತಂಡದ ಏಳಕ್ಕೆ ಏಳೂ ಪಂದ್ಯಗಳನ್ನು ಗೆದ್ದು ಕಪ್​ ತನ್ನದಾಗಿಸಿಕೊಂಡಿದೆ. ಭಾನುವಾರ ನಡೆದ ಫೈನಲ್‌ನಲ್ಲಿ, ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ನೇಪಾಳ, 5 ವಿಕೆಟ್‌ಗೆ 114 ರನ್ ಗಳಿಸಲಷ್ಟೇ ಶಕ್ತವಾಯಿತು. 115 ರನ್‌ಗಳ ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಘಾತದ ನಡುವೆಯೂ ಚೇತರಿಸಿಕೊಂಡು 12 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿ, ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿದಿದೆ. ನಾಯಕಿ ದೀಪಿಕಾ ಅವರು ಆಸ್ಟ್ರೇಲಿಯಾ ವಿರುದ್ಧ 91 ರನ್ ಸಿಡಿಸಿದ್ದು ಸೇರಿದಂತೆ ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 

Tags:    

Similar News