ವಿಶ್ವಕಪ್ ಹೀರೋಯಿನ್ ಪ್ರತಿಕಾ ರಾವಲ್‌ಗೆ ದೆಹಲಿ ಸರ್ಕಾರದಿಂದ 1.5 ಕೋಟಿ ರೂಪಾಯಿ ಬಹುಮಾನ
ವಿಶ್ವಕಪ್ ಟೂರ್ನಿಯಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಇನಿಂಗ್ಸ್ ಆರಂಭಿಸುತ್ತಿದ್ದ ಪ್ರತಿಕಾ, ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು.
2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಐತಿಹಾಸಿಕ ಗೆಲುವಿಗೆ ನಿರ್ಣಾಯಕ ಕೊಡುಗೆ ನೀಡಿದ ಯುವ ಕ್ರಿಕೆಟ್ ತಾರೆ ಪ್ರತಿಕಾ ರಾವಲ್ ಅವರಿಗೆ ದೆಹಲಿ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಅವರ ಅಮೋಘ ಸಾಧನೆಯನ್ನು ಗುರುತಿಸಿ ಬರೋಬ್ಬರಿ 1.5 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಪ್ರತಿಕಾ ಅವರನ್ನು ಭೇಟಿಯಾಗಿ ಅಭಿನಂದಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. "ಪ್ರತಿಕಾ ಅವರು ನವ ಭಾರತದ ಶಕ್ತಿ, ಧೈರ್ಯ ಮತ್ತು ಮಹಿಳಾ ಸಬಲೀಕರಣದ ಜೀವಂತ ಸಾಕ್ಷಿ. ದೆಹಲಿ ಕೇವಲ ಕನಸುಗಳನ್ನು ಹುಟ್ಟುಹಾಕುವುದಿಲ್ಲ, ಬದಲಿಗೆ ಅವುಗಳಿಗೆ ರೆಕ್ಕೆಗಳನ್ನೂ ನೀಡುತ್ತದೆ ಎಂಬುದನ್ನು ಇವರ ಪಯಣ ತೋರಿಸಿಕೊಟ್ಟಿದೆ," ಎಂದು ಸಿಎಂ ಬಣ್ಣಿಸಿದ್ದಾರೆ. ಈ ಭೇಟಿಯ ವೇಳೆ ಶಿಕ್ಷಣ ಸಚಿವ ಆಶಿಶ್ ಸೂದ್ ಮತ್ತು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಉಪಸ್ಥಿತರಿದ್ದರು.
ಟೂರ್ನಿಯಲ್ಲಿ 305 ರನ್ ಸಿಡಿಸಿದ್ದ ಆಟಗಾರ್ತಿ
ವಿಶ್ವಕಪ್ ಟೂರ್ನಿಯಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಇನಿಂಗ್ಸ್ ಆರಂಭಿಸುತ್ತಿದ್ದ ಪ್ರತಿಕಾ, ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. ಆಡಿದ ಕೇವಲ 7 ಪಂದ್ಯಗಳಲ್ಲಿ 305 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ದುರದೃಷ್ಟವಶಾತ್ ಬಾಂಗ್ಲಾದೇಶ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಕಾಲಿನ ಸ್ನಾಯು ಸೆಳೆತಕ್ಕೆ (Twisted foot) ಒಳಗಾದ ಅವರು ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ನಂತರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಅವರ ಬದಲಿಗೆ ಶಫಾಲಿ ವರ್ಮಾ ತಂಡ ಸೇರಿಕೊಂಡಿದ್ದರು.
ವೀಲ್‌ಚೇರ್ ಸಂಭ್ರಮ ಮತ್ತು ಪದಕದ ಗೊಂದಲ
ನವೆಂಬರ್ 2ರಂದು ಭಾರತ ವಿಶ್ವಕಪ್ ಎತ್ತಿ ಹಿಡಿದಾಗ, ಗಾಯಾಳುವಾಗಿದ್ದ ಪ್ರತಿಕಾ ವೀಲ್‌ಚೇರ್‌ನಲ್ಲಿ ಮೈದಾನಕ್ಕೆ ಬಂದು ತಂಡದೊಂದಿಗೆ ಸಂಭ್ರಮಿಸಿದ್ದು ಅಭಿಮಾನಿಗಳ ಮನ ಗೆದ್ದಿತ್ತು. ಟೂರ್ನಿಯ ಮಧ್ಯೆ ತಂಡದಿಂದ ಬದಲಾದ ಕಾರಣ ಅವರಿಗೆ 'ವಿನ್ನರ್ಸ್ ಮೆಡಲ್' (ಪದಕ) ಸಿಗುವುದೋ ಇಲ್ಲವೋ ಎಂಬ ಚರ್ಚೆ ನಡೆದಿತ್ತು. ಆದರೆ, ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಮಧ್ಯಪ್ರವೇಶಿಸಿ, ಟೂರ್ನಿಯಲ್ಲಿನ ಪ್ರತಿಕಾ ಅವರ ಕೊಡುಗೆ ಪರಿಗಣಿಸಿ ಪದಕ ಸಿಗುವಂತೆ ನೋಡಿಕೊಂಡಿದ್ದರು.
ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪ್ರತಿಕಾ, ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜಿನಲ್ಲಿ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ.