'ಅಂಧ'ಕಾರದಲ್ಲಿ ಅರಳಿದ 'ದೀಪಿಕಾ': ಕ್ರಿಕೆಟ್ ವಿಶ್ವಕಪ್ ಗೆದ್ದ ಕರುನಾಡ ಕುವರಿ...
ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡ ಅಜೇಯವಾಗಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ, ಈ ಸಾಧನೆಯ ಹಿಂದಿನ ಶಕ್ತಿ ನಮ್ಮ ಕರ್ನಾಟಕದ 'ಹುಲಿ' ದೀಪಿಕಾ! ಅವರ ಜೊತೆಗಿನ ''ದ ವಿಶೇಷ ಸಂದರ್ಶನ ಇಲ್ಲಿದೆ."
ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಚಾಂಪಿಯನ್ ಆಗಿದೆ. ಈ ಐತಿಹಾಸಿಕ ಸಾಧನೆಯ ಹಿಂದೆ ಇರುವುದು ತಂಡದ ನಾಯಕಿ, ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೀಪಿಕಾ. ಕಳೆದ 24 ಗಂಟೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ಈ ಯುವ ನಾಯಕಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ದಿಗ್ಗಜ ಕ್ರಿಕೆಟಿಗರಾದ ಮಿಥಾಲಿ ರಾಜ್ ಅವರವರೆಗೂ ಅಭಿನಂದನೆಗಳು ಸುರಿದುಬಿದ್ದಿವೆ.
ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ದೀಪಿಕಾ ಅವರು ಕೇವಲ ಕ್ರಿಕೆಟಿಗರಷ್ಟೇ ಅಲ್ಲ, 17 ಆಟಗಾರ್ತಿಯರ ಅಕ್ಕ, ತಂಗಿ ಮತ್ತು ಸ್ನೇಹಿತರೂ ಆಗಿದ್ದಾರೆ. ಸಾವಿರಾರು ಸವಾಲುಗಳ ನಡುವೆ, ಕುಟುಂಬದ ಬಡತನ, ಅವಕಾಶಗಳ ಕೊರತೆಯ ಮಧ್ಯೆಯೂ ದಣಿದು ಬೀಳದೆ ದೇಶಕ್ಕಾಗಿ ಕಪ್ ಗೆದ್ದಿದ್ದಾರೆ. ವಿಶ್ವಕಪ್ ಗೆಲುವಿನ ಆನಂದ, ಪಯಣದ ಸವಾಲುಗಳು ಮತ್ತು ಮುಂದಿನ ಗುರಿಗಳ ಬಗ್ಗೆ ದೀಪಿಕಾ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
ದ ಫೆಡರಲ್ ಕರ್ನಾಟಕ : ವಿಶ್ವಕಪ್ ಗೆದ್ದ ಈ ಕ್ಷಣದಲ್ಲಿ ಅವರ ಅನುಭವಗಳನ್ನು ಹೇಳಿ; ಈ ಕ್ಷಣದಲ್ಲಿ ಹೇಗನಿಸುತ್ತಿದೆ?
ದೀಪಿಕಾ: ತುಂಬಾನೇ ಖುಷಿಯಾಗುತ್ತಿದೆ ಸರ್. ನಾವು ಪಟ್ಟ ಕಷ್ಟದ ದಿನಗಳಿಗೆ ಇಂದು ಪ್ರತಿಫಲ ಸಿಕ್ಕಿದೆ ಎಂಬ ಹೆಮ್ಮೆ ಇದೆ.
ದ ಫೆಡರಲ್ ಕರ್ನಾಟಕ: ನಾನು ನಿಮ್ಮನ್ನು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಹೋಲಿಸಿಸುತ್ತೇನೆ. ಆ ಹೋಲಿಕೆ ಕೇಳಿದಾಗ ನಿಮಗೆ ಏನನ್ನಿಸಿತು?
ದೀಪಿಕಾ: ಅದು ನಿಜ ಸರ್. ಕಾಮೆಂಟರಿ ಹೇಳುವ ನವೀನ್ ಸರ್ ಯಾವಾಗಲೂ ಹೇಳುತ್ತಾರೆ, "ನೀನು ಹರ್ಮನ್‌ಪ್ರೀತ್ ಕೌರ್ ತರಾನೇ ಹೊಡೆಯುತ್ತೀಯಾ" ಅಂತ. ಸಾಮಾನ್ಯ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ, ಜೆಮಿಮಾ ಮತ್ತು ಹರ್ಮನ್ ದೀದಿ ನಮಗೆಲ್ಲಾ ದೊಡ್ಡ ಸ್ಫೂರ್ತಿ. ವಿಶೇಷವಾಗಿ ಜೆಮಿಮಾ ದೀದಿಯನ್ನು ಫಾಲೋ ಮಾಡುತ್ತೇನೆ. ಅವರಿಂದ ಸಿಕ್ಕಾಪಟ್ಟೆ ಪ್ರೇರಣೆ ಸಿಕ್ಕಿದೆ
ದ ಫೆಡರಲ್ ಕರ್ನಾಟಕ: ನಿನ್ನೆಯಿಂದ ನಿಮ್ಮ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಮಿಥಾಲಿ ರಾಜ್ ಅವರಂತಹ ದಿಗ್ಗಜರೆಲ್ಲಾ ನಿಮ್ಮನ್ನು ಶ್ಲಾಘಿಸಿದ್ದಾರೆ.
ದೀಪಿಕಾ: ನಾವು ಇಷ್ಟೊಂದು ದೊಡ್ಡ ಪ್ರತಿಕ್ರಿಯೆ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಂಡದಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಸಾಕಷ್ಟು ನೋವು, ಕಷ್ಟಗಳನ್ನು ಅನುಭವಿಸಿದ್ದಾರೆ. ಒಬ್ಬ ನಾಯಕಿಯಾಗಿ ಮಾತ್ರವಲ್ಲ, ಒಬ್ಬ ಅಕ್ಕನಾಗಿ, ತಂಗಿಯಾಗಿ ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು, "ನೋಡಿ, ಲಕ್ಷಾಂತರ ಜನರಲ್ಲಿ ನಮಗೆ 17 ಜನರಿಗೆ ಈ ಅವಕಾಶ ಸಿಕ್ಕಿದೆ. ನಮ್ಮ ತಂದೆ-ತಾಯಿ, ಗಡಿಯಲ್ಲಿ ಮಳೆ-ಬಿಸಿಲು-ಚಳಿ ಎನ್ನದೆ ನಮ್ಮನ್ನು ಕಾಯುವ ಯೋಧರಿಗಾಗಿ ಮತ್ತು ನಮಗಾಗಿ ಶ್ರಮಿಸುತ್ತಿರುವ ಕ್ರಿಕೆಟ್ ಸಂಸ್ಥೆ , ಸಮರ್ಥನಂ, ಮಹಂತೇಶ್ ಸರ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಕರ್ನಾಟಕ ಸರ್ಕಾರಕ್ಕಾಗಿ ನಾವು ಗೆಲ್ಲಬೇಕು" ಎಂದು ಹುರಿದುಂಬಿಸುತ್ತಿದ್ದೆ.
ದ ಫೆಡರಲ್ ಕರ್ನಾಟಕ: ಸಾಮಾನ್ಯರಿಗೆ ಕನಸುಗಳನ್ನು ತಲುಪುವುದು ಒಂದು ರೀತಿ, ಆದರೆ ದೃಷ್ಟಿ ದೋಷದಂತಹ ಸವಾಲುಗಳಿರುವಾಗ ಅವಕಾಶಗಳ ಕೊರತೆಯ ನಡುವೆ ನೀವು ನಿಮ್ಮ ಕನಸನ್ನು ನನಸು ಮಾಡಿಕೊಂಡಿದ್ದೀರಿ. ಈ ಪಯಣ ಮತ್ತು ಈಗಿನ ಅನುಭವ ಹೇಗಿದೆ?
ದೀಪಿಕಾ: ನಮ್ಮ ತಂಡದ 17 ಜನರಲ್ಲಿ ಪ್ರತಿಯೊಬ್ಬರದೂ ಒಂದೊಂದು ಕಥೆ. ನಮ್ಮಲ್ಲಿ ಹಲವರ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ. ಸಾಮಾನ್ಯ ಕ್ರಿಕೆಟಿಗರಿಗೆ ಸಿಗುವಂತಹ ಉತ್ತಮ ಆಹಾರ, ಪೌಷ್ಟಿಕಾಂಶ ನಮಗೆ ಸಿಗುವುದಿಲ್ಲ. ಸಿಕ್ಕಿದ್ದನ್ನು ತಿಂದು, ಫಿಟ್ನೆಸ್ ಕಾಪಾಡಿಕೊಂಡು, ಯಾವುದೇ ಗಾಯಗಳಾಗದಂತೆ ಆಡಿ ದೇಶಕ್ಕೆ ಕಪ್ ತಂದಿದ್ದೇವೆ ಎನ್ನುವಾಗ ತುಂಬಾ ಹೆಮ್ಮೆಯಾಗುತ್ತದೆ. ಅಷ್ಟೆಲ್ಲಾ ನೋವಿನ ನಡುವೆಯೂ ನನ್ನ ತಂಡದವರು ದೇಶಕ್ಕಾಗಿ ಕಪ್ ತಂದಿದ್ದಾರೆ ಎನ್ನುವುದು ನನಗೆ ಅತ್ಯಂತ ಖುಷಿಯ ವಿಚಾರ.
ದ ಫೆಡರಲ್ ಕರ್ನಾಟಕ: ಆ ಗೆಲುವಿನ ಕ್ಷಣ, ಆ ಕಣ್ಣೀರು... ಆ ಭಾವನಾತ್ಮಕ ಕ್ಷಣವನ್ನು ನಿಮ್ಮ ತಂಡದ ಜೊತೆ, ಕೋಚ್ ಜೊತೆ ಹೇಗೆ ಹಂಚಿಕೊಂಡಿರಿ?
ದೀಪಿಕಾ: ಆ ಗೆಲುವಿನ ಕ್ಷಣದಲ್ಲಿ ನನಗೆ ಬೇರೇನೂ ನೆನಪಿರಲಿಲ್ಲ. ನನ್ನ ಕಣ್ಣಮುಂದೆ ಬಂದಿದ್ದು ತಂಡದ ಆಟಗಾರ್ತಿಯರ ಕುಟುಂಬಗಳು, ಅವರು ಪಡುತ್ತಿರುವ ಕಷ್ಟ, ನನ್ನ ದೇಶ ಗೆದ್ದಿತು ಎಂಬ ಹೆಮ್ಮೆ, ಮತ್ತು ಈ ಟೂರ್ನಮೆಂಟ್ ನಡೆಸಲು ಮಹಾಂತೇಶ್ ಸರ್ ಅವರು ಪಟ್ಟ ಶ್ರಮ. ಎಷ್ಟೋ ಕಡೆ ಫಂಡ್ಸ್ ಸಮಸ್ಯೆಯಿದ್ದರೂ, ಅಲ್ಲಲ್ಲಿ ಹೊಂದಾಣಿಕೆ ಮಾಡಿ ಈ ವಿಶ್ವಕಪ್ ಆಯೋಜಿಸಿದ್ದರು. ನಮ್ಮ ಈ ಗೆಲುವು ಅವರೆಲ್ಲರ ಶ್ರಮಕ್ಕೆ ಸಾರ್ಥಕವಾಯಿತು ಅನ್ನೋ ತೃಪ್ತಿ ನನಗಿತ್ತು.
ದ ಫೆಡರಲ್ ಕರ್ನಾಟಕ: ನಿಮ್ಮ ಕುಟುಂಬದ ಬಗ್ಗೆ ಹೇಳಿ. ಅವರೊಂದಿಗೆ ಈ ಗೆಲುವಿನ ಕ್ಷಣವನ್ನು ಹೇಗೆ ಹಂಚಿಕೊಂಡಿರಿ?
ದೀಪಿಕಾ: ಗೆದ್ದ ತಕ್ಷಣವೇ ಅಪ್ಪನಿಗೆ ವಿಡಿಯೋ ಕಾಲ್ ಮಾಡಿ "ಅಪ್ಪ, ನಾವು ಗೆದ್ದೆವು" ಎಂದ ತಕ್ಷಣ ಅವರು ಅತ್ತೇಬಿಟ್ಟರು. ಅವರಿಗೆ ಕ್ರಿಕೆಟ್ ಅಂದರೆ ಪ್ರಾಣ. ಅದಕ್ಕಾಗಿಯೇ ನಾನು ರೋಹಿತ್ ಶರ್ಮಾ ಅವರ ಜರ್ಸಿ ನಂಬರ್ 45 ಅನ್ನು ಕೇಳಿ ಪಡೆದುಕೊಂಡೆ. "ರೋಹಿತ್ ಶರ್ಮಾ ಹೇಗೆ ತಂಡವನ್ನು ಸ್ನೇಹದಿಂದ ಮುನ್ನಡೆಸುತ್ತಾರೋ, ನೀನೂ ಹಾಗೆಯೇ ತಂಡವನ್ನು ಮುನ್ನಡೆಸು" ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ನಮ್ಮ ತಂಡ ಕೂಡ ಒಂದು ಕುಟುಂಬದಂತೆಯೇ ಇದೆ. ನಮ್ಮ ಸುಖ-ಕಷ್ಟಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ.
ದ ಫೆಡರಲ್ ಕರ್ನಾಟಕ: ಈ ಗೆಲುವಿನ ಸಂಭ್ರಮ ಎಷ್ಟು ದಿನ ಮುಂದುವರೆಯಲಿದೆ? ಮತ್ತು ಮುಂದೆ ನಿಮ್ಮ ಗುರಿ ಏನು?
ದೀಪಿಕಾ: (ನಗುತ್ತಾ) ಗೊತ್ತಿಲ್ಲ, ಈ ಸಂಭ್ರಮ ಎಷ್ಟು ದಿನ ಇರುತ್ತದೆಯೋ. ಆದರೆ ಈ ಕ್ಷಣ ನಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ನಾವು ಹುಲಿಗಳು, ಇನ್ನಷ್ಟು ತಂಡಗಳನ್ನು ಬೇಟೆಯಾಡುತ್ತೇವೆ.
ದೀಪಿಕಾ ಜತೆ ನಡೆಸಿದ ದ ಫೆಡರಲ್ ಕರ್ನಾಟಕ ನಡೆಸಿದ ಸಂದರ್ಶನ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ...