Asia Cup 2025 : ಪಾಕಿಸ್ತಾನವನ್ನು ಮೂರನೇ ಬಾರಿಗೆ ಬಗ್ಗುಬಡಿದು 9ನೇ ಬಾರಿ ಚಾಂಪಿಯನ್ ಆದ ಭಾರತ!
ಭಾರತ ತಂಡ 147 ರನ್‌ಗಳ ಗುರಿಯನ್ನು ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಮುಟ್ಟಿತು. 19.4 ಓವರ್‌ಗಳಲ್ಲಿ 150 ರನ್ ಬಾರಿಸಿ ಜಯಭೇರಿ ಬಾರಿಸಿತು.
ದುಬೈನಲ್ಲಿ ನಡೆದ ಏಷ್ಯಾ ಕಪ್ 2025ರ ರೋಚಕ ಫೈನಲ್ ಪಂದ್ಯದಲ್ಲಿ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ತಂಡವು 9ನೇ ಬಾರಿಗೆ ಏಷ್ಯಾ ಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ, ಒಂದೇ ಆವೃತ್ತಿಯಲ್ಲಿ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿದ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಕುಲದೀಪ್ ಯಾದವ್ ಅವರ ಮಾರಕ ಸ್ಪಿನ್ ದಾಳಿ ಮತ್ತು ತಿಲಕ್ ವರ್ಮಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಈ ಸ್ಮರಣೀಯ ಗೆಲುವು ಸಾಧಿಸಿತು.
ಭಾರತ ತಂಡ 147 ರನ್‌ಗಳ ಗುರಿಯನ್ನು ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಮುಟ್ಟಿತು. 19.4 ಓವರ್‌ಗಳಲ್ಲಿ 150 ರನ್ ಬಾರಿಸಿ ಜಯಭೇರಿ ಬಾರಿಸಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ಪಾಕಿಸ್ತಾನವನ್ನು 19.1 ಓವರ್‌ಗಳಲ್ಲಿ ಕೇವಲ 146 ರನ್‌ಗಳಿಗೆ ಕಟ್ಟಿಹಾಕಿತು. ಪಾಕಿಸ್ತಾನದ ಆರಂಭಿಕ ಆಟಗಾರರಾದ ಸಾಹಿಬ್‌ಜಾದಾ ಫರ್ಹಾನ್ (57) ಮತ್ತು ಫಖರ್ ಜಮಾನ್ (46) ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ, ಈ ಹಂತದಲ್ಲಿ ದಾಳಿಗಿಳಿದ ಭಾರತದ ಸ್ಪಿನ್ನರ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದರು. ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ 30 ರನ್‌ಗಳಿಗೆ 4 ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅವರಿಗೆ ಉತ್ತಮ ಸಾಥ್ ನೀಡಿದ ವರುಣ್ ಚಕ್ರವರ್ತಿ (2/30) ಮತ್ತು ಅಕ್ಷರ್ ಪಟೇಲ್ (2/26) ಕೂಡ ಪ್ರಮುಖ ವಿಕೆಟ್‌ಗಳನ್ನು ಪಡೆದರು. ಜಸ್ಪ್ರೀತ್ ಬುಮ್ರಾ (2/25) ಸಹ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ತಿಲಕ್ ವರ್ಮಾ ಹೋರಾಟ: ಭಾರತಕ್ಕೆ ರೋಚಕ ಜಯ
147 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಅಭಿಷೇಕ್ ಶರ್ಮಾ (5), ನಾಯಕ ಸೂರ್ಯಕುಮಾರ್ ಯಾದವ್ (1) ಮತ್ತು ಶುಭಮನ್ ಗಿಲ್ (12) ಬೇಗನೆ ಔಟಾದರು. ಒಂದು ಹಂತದಲ್ಲಿ 49 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಸಂಜು ಸ್ಯಾಮ್ಸನ್ (24) ಜೊತೆಗೂಡಿದ ತಿಲಕ್ ವರ್ಮಾ ಮಹತ್ವದ ಜೊತೆಯಾಟವಾಡಿದರು.
ಅಂತಿಮ ಹಂತದವರೆಗೂ ಜವಾಬ್ದಾರಿಯುತವಾಗಿ ಆಡಿದ ತಿಲಕ್ ವರ್ಮಾ, ಅಜೇಯ 69 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯ ಓವರ್‌ನಲ್ಲಿ 10 ರನ್‌ಗಳ ಅವಶ್ಯಕತೆಯಿದ್ದಾಗ, ಭಾರತವು ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿತು.
ಒಂದೇ ಟೂರ್ನಿಯಲ್ಲಿ ಮೂರು ಬಾರಿ ಪಾಕ್ ವಿರುದ್ಧ ಭಾರತಕ್ಕೆ ವಿಜಯ
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿದೆ.ಲೀಗ್ ಹಂತದಲ್ಲಿ ಕುಲದೀಪ್ ಯಾದವ್ ಅವರ (3/18) ಬೌಲಿಂಗ್ ದಾಳಿಯ ನೆರವಿನಿಂದ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತ್ತು ಸೂಪರ್ 4 ಹಂತದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ (74 ರನ್) ನಿಂದ ಭಾರತ ಮತ್ತೊಮ್ಮೆ ಸುಲಭ ಜಯ ಗಳಿಸಿತ್ತು. ಇದೀಗ ಫೈನಲ್‌ನಲ್ಲಿಯೂ ಗೆಲ್ಲುವ ಮೂಲಕ, ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ಜಯ ದಾಖಲಿಸಿದೆ.
ಏಷ್ಯಾ ಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, ಈ ಐತಿಹಾಸಿಕ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಕುಲದೀಪ್ ಯಾದವ್ ಟೂರ್ನಿಯಲ್ಲಿ 17 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಸರಿಗಟ್ಟಿದರೆ, ಅಭಿಷೇಕ್ ಶರ್ಮಾ 309 ರನ್‌ಗಳೊಂದಿಗೆ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು.