ಆಪರೇಷನ್ ಸಿಂದೂರ್ ಹೇಳಿಕೆ: ಸೂರ್ಯಕುಮಾರ್‌ಗೆ ಐಸಿಸಿ ಎಚ್ಚರಿಕೆ; ಪಾಕ್ ಆಟಗಾರರ ವಿಚಾರಣೆ ಇಂದು

ಭಾರತದ ವಿರುದ್ಧದ ಪಂದ್ಯದಲ್ಲಿ ಪ್ರಚೋದನಕಾರಿ ಸನ್ನೆಗಳನ್ನು ತೋರಿದ್ದ ಪಾಕಿಸ್ತಾನದ ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಬಿಸಿಸಿಐ ದೂರು ದಾಖಲಿಸಿತ್ತು.

Update: 2025-09-26 04:52 GMT

'ಆಪರೇಷನ್ ಸಿಂದೂರ್' ಕುರಿತು ನೀಡಿದ್ದ ಹೇಳಿಕೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಲ್ಲಿಸಿದ್ದ ದೂರಿನ ಅನ್ವಯ, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಪ್ರಚೋದನಕಾರಿ ಸನ್ನೆಗಳನ್ನು ತೋರಿದ ಪಾಕಿಸ್ತಾನದ ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ಅವರ ವಿಚಾರಣೆ ಶುಕ್ರವಾರ ನಡೆಯಲಿದೆ.

ಏಷ್ಯಾಕಪ್‌ನ ಭಾರತ-ಪಾಕಿಸ್ತಾನ ಪಂದ್ಯದ ನಂತರ, ಸೂರ್ಯಕುಮಾರ್ ಯಾದವ್ ಅವರು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭಾರತೀಯ ಸೇನಾ ಸಿಬ್ಬಂದಿಯನ್ನು ಬೆಂಬಲಿಸಿ ಹಾಗೂ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸಂತ್ರಸ್ತರಿಗೆ ಸಂತಾಪ ವ್ಯಕ್ತಪಡಿಸಿದ್ದರು. ಈ ಹೇಳಿಕೆ ರಾಜಕೀಯ ಸ್ವರೂಪದ್ದಾಗಿದೆ ಎಂದು ಪಿಸಿಬಿ ಐಸಿಸಿಗೆ ದೂರು ನೀಡಿತ್ತು.

ಗುರುವಾರ ನಡೆದ ವಿಚಾರಣೆಯಲ್ಲಿ ಸೂರ್ಯಕುಮಾರ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ಐಸಿಸಿ ಮ್ಯಾಚ್ ರೆಫರಿ ರಿಚೀ ರಿಚರ್ಡ್‌ಸನ್, ಭವಿಷ್ಯದಲ್ಲಿ ರಾಜಕೀಯ ಸ್ವರೂಪದ ಯಾವುದೇ ಹೇಳಿಕೆಗಳನ್ನು ನೀಡದಂತೆ ಸೂರ್ಯಕುಮಾರ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದು ಲೆವೆಲ್ 1 ಅಪರಾಧವಾದ್ದರಿಂದ, ಎಚ್ಚರಿಕೆ ಅಥವಾ ಪಂದ್ಯ ಶುಲ್ಕದಲ್ಲಿ ಶೇ. 15ರಷ್ಟು ದಂಡ ವಿಧಿಸುವ ಸಾಧ್ಯತೆ ಇತ್ತು.

ಪಾಕ್ ಆಟಗಾರರ ವಿಚಾರಣೆ

ಭಾರತದ ವಿರುದ್ಧದ ಪಂದ್ಯದಲ್ಲಿ ಪ್ರಚೋದನಕಾರಿ ಸನ್ನೆಗಳನ್ನು ತೋರಿದ್ದ ಪಾಕಿಸ್ತಾನದ ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಬಿಸಿಸಿಐ ದೂರು ದಾಖಲಿಸಿತ್ತು. ಈ ಇಬ್ಬರು ಆಟಗಾರರು ಗುರುವಾರ ಶ್ರೀಲಂಕಾ ವಿರುದ್ಧ ಪಂದ್ಯ ಆಡುತ್ತಿದ್ದರಿಂದ, ಅವರ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಲಾಗಿದೆ.

ಪ್ರಚೋದನೆಗೆ ಕಾರಣವಾದ ಸನ್ನೆಗಳು

ಸೆಪ್ಟೆಂಬರ್ 21ರ ಪಂದ್ಯದ ವೇಳೆ, ಹ್ಯಾರಿಸ್ ರೌಫ್ ಅವರು ವಿಮಾನ ಪತನಗೊಳ್ಳುವ ರೀತಿಯಲ್ಲಿ ಸನ್ನೆ ಮಾಡಿ ಭಾರತೀಯ ಸೇನಾ ಕ್ರಮವನ್ನು ಅಣಕಿಸಿದ್ದರು. ಸಾಹಿಬ್‌ಜಾದಾ ಫರ್ಹಾನ್ ಅವರು ತಮ್ಮ ಬ್ಯಾಟ್ ಬಳಸಿ ಗನ್ ಫೈರಿಂಗ್ ಮಾಡುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಈ ಕುರಿತು ವಿಚಾರಣೆಯಲ್ಲಿ ಇಬ್ಬರೂ ಆಟಗಾರರು ತಮ್ಮ ನಡವಳಿಕೆಗೆ ಸಮಜಾಯಿಷಿ ನೀಡಬೇಕಾಗುತ್ತದೆ. ಅವರ ಉತ್ತರಗಳು ಸಮಾಧಾನಕರವಾಗಿಲ್ಲದಿದ್ದರೆ, ನಿಯಮಗಳ ಪ್ರಕಾರ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

ವಿವಾದಕ್ಕೆ ತುಪ್ಪ ಸುರಿದ ಎಸಿಸಿ ಅಧ್ಯಕ್ಷ

ಈ ವಿವಾದದ ಬೆಂಕಿಗೆ ತುಪ್ಪ ಸುರಿಯುವಂತೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ, ಕ್ರಿಸ್ಟಿಯಾನೋ ರೊನಾಲ್ಡೊ ಅವರ ವಿಡಿಯೋವೊಂದನ್ನು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ರೊನಾಲ್ಡೊ, ಹ್ಯಾರಿಸ್ ರೌಫ್ ಮಾಡಿದಂತೆಯೇ ವಿಮಾನ ಪತನದ ರೀತಿಯ ಸನ್ನೆ ಮಾಡುವುದು ಕಂಡುಬಂದಿದೆ. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದ್ದು, ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡವು ಎಸಿಸಿ ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ಎಂಬ ಪ್ರಶ್ನೆ ಎದ್ದಿದೆ.

Tags:    

Similar News