ಅಮಿತ್ ಶಾ ನಾಮಪತ್ರ ಸಲ್ಲಿಕೆ

Update: 2024-04-19 12:55 GMT

ಗಾಂಧಿನಗರ, ಏಪ್ರಿಲ್‌ 19- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 

'ವಿಜಯ ಮುಹೂರ್ತ' ಎಂದು ಪರಿಗಣಿಸಲಾದ ಮಧ್ಯಾಹ್ನ 12.39 ಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಟ್ಟಿಗೆ ಗಾಂಧಿನಗರ ಕಲೆಕ್ಟರ್ ಮತ್ತು ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ. ದವೆ ಅವರಿಗೆ ನಾಮಪತ್ರ ಸಲ್ಲಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿ, ʻ2047 ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಪ್ರಧಾನಿ ಮೋದಿ ಅವರಿಗೆ ಮೂರನೇ ಅವಧಿಯನ್ನು ನೀಡುವ ಚುನಾವಣೆ ಇದಾಗಿದೆʼ ಎಂದರು. ʻಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತಪ್ಪುಗಳನ್ನು ಸರಿಪಡಿಸಲು ಎರಡು ಅವಧಿ ಬೇಕಾದ್ದರಿಂದ, ಮೂರನೇ ಅವಧಿ ನಿರ್ಣಾಯಕವಾಗಿದೆ. ಮುಂದಿನ ಐದು ವರ್ಷಗಳು ನಿರ್ಣಾಯಕ. ಏಕೆಂದರೆ ಯುಪಿಎ ಸರ್ಕಾರ ಮಾಡಿದ ಗುಂಡಿಗಳನ್ನು ತುಂಬಲು 10 ವರ್ಷ ಬೇಕಾಯಿತುʼ ಎಂದರು. 

ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ. ಆಡ್ವಾಣಿ ಪ್ರತಿನಿಧಿಸಿದ್ದ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿಗೆ ಧನ್ಯವಾದ ಹೇಳಿದರು. ʻಪ್ರಧಾನಿ ಮೋದಿ ಇಲ್ಲಿ ಮತದಾರರಾಗಿರುವುದರಿಂದ ಈ ಸ್ಥಾನಕ್ಕೆ ಮಹತ್ವವಿದೆʼ ಎಂದು ಹೇಳಿದರು. ʻಕಳೆದ 30 ವರ್ಷಗಳಿಂದ ಇಲ್ಲಿನ ಸಂಬಂಧ ಹೊಂದಿದ್ದೇನೆ. ಸಂಸದನಾಗುವ ಮೊದಲು ಶಾಸಕನಾಗಿದ್ದೆ.ಮತ ಕೇಳಿದಾಗಲೆಲ್ಲ ಗಾಂಧಿನಗರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಗಾಂಧಿನಗರ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ 22,000 ಕೋಟಿ ರೂ. ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆʼ ಎಂದರು. 

ಶಾ 2019 ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸೋನಾಲ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಗುಜರಾತ್‌ನ ಎಲ್ಲ 26 ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

Tags:    

Similar News