ಬಿಜೆಪಿಯಿಂದ ಇಸ್ಲಾಮೋಫೋಬಿಯಾ, ಸುಳ್ಳು ಸುದ್ದಿಗಳ ಪ್ರಸಾರ: ಪ್ರತಿಪಕ್ಷಗಳ ದೀರ್ಘ ಮೌನ
ಎಡರಂಗದ ಹೊರತಾಗಿ, ಇಂಡಿಯ ಒಕ್ಕೂಟ ಮುಸ್ಲಿಮರ ಪರ ಮಾತಾಡುತ್ತಿಲ್ಲ. ಹಾಗೆ ಮಾಡಿದರೆ ಕೇಸರಿ ಪಕ್ಷದ ಹಿಂದೆ ಹಿಂದೂಗಳ ಕ್ರೋಡೀಕರಣ ಆಗಿ, ಬಿಜೆಪಿಗೆ ಸಹಾಯವಾಗುತ್ತದೆ ಎಂದು ಅವರು ಭಾವಿಸುತ್ತಾರೆ.;
ಮೊದಲು ಪ್ರಧಾನಿ ನರೇಂದ್ರ ಮೋದಿ. ಮತ್ತು ಈಗ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಕಳೆದ ಮೂರು ದಿನಗಳಲ್ಲಿ ಉಗ್ರ ಹಿಂದುತ್ವ ಪ್ರತಿಪಾದಿಸುವ ಇಬ್ಬರು ಪ್ರಮುಖ ರೂಪಕಗಳು ಭಾರತೀಯ ಮುಸ್ಲಿಮರನ್ನು ನಿರ್ಲಜ್ಜವಾಗಿ ಅವಹೇಳನ ಮಾಡಿವೆ. ಇಸ್ಲಾಮೋಫೋಬಿಯಾ, ಸುಳ್ಳುಸುದ್ದಿಗಳ ಕಲಬೆರಕೆ ಮೂಲಕ ಈಗಾಗಲೇ ಧ್ರುವೀಕರಣಗೊಂಡ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.
ಏಪ್ರಿಲ್ 20 ರಂದು ರಾಜಸ್ಥಾನದ ಬುಡಕಟ್ಟು ಜನರು ಹೆಚ್ಚು ಸಂಖ್ಯೆಯಲ್ಲಿರುವ ಬನ್ಸ್ವಾರಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಮುಸ್ಲಿಮರನ್ನು ನುಸುಳುಕೋರರಿಗೆ ಹೋಲಿಸಿದರು. ಒಂದು ದಿನದ ನಂತರ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವ ಅಲಿಗಢದಲ್ಲಿ ʻಮುಸ್ಲಿಂ ತಾಯಂದಿರು ಮತ್ತು ಸಹೋದರಿʼಯರನ್ನು ಓಲೈಸುವ ಪ್ರಯತ್ನ ಮಾಡಿದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿವಾಹಿತ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಕಸಿದುಕೊಳ್ಳುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ ಎಂದು ಸುಳ್ಳು ಹೇಳಿದರು.
ಏಪ್ರಿಲ್ 23 ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಸಭೆಯಲ್ಲಿ ಮೋದಿ ಬನ್ಸ್ವಾರಾ ಅವತಾರಕ್ಕೆ ಮರಳಿ, ʻದಲಿತರ ಕೋಟಾವನ್ನು ಕಸಿದುಕೊಳ್ಳುವ ಮೂಲಕ ಮೀಸಲು ವ್ಯವಸ್ಥೆಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಲು ಕಾಂಗ್ರೆಸ್ ಬಯಸಿದೆ ಎಂದು ಆರೋಪಿಸಿದರು. ಸಿಎಂ ಆದಿತ್ಯನಾಥ್ ಯುಪಿಯ ಅಮ್ರೋಹಾದಲ್ಲಿ ನಡೆದ ಸಭೆಯಲ್ಲಿ ಇಸ್ಲಾಮೋಫೋಬಿಯಾ ಹರಡಲು ತಮ್ಮ ಪಾಲು ನೀಡಿದ ರು.ʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸುತ್ತದೆʼ ಎಂದು ಹೇಳಿದರು.
ಇಸ್ಲಾಮೋಫೋಬಿಯಾ ಎದುರಿಸಿದ್ದು ಎಡ ರಂಗ ಮಾತ್ರ: ಮೋದಿ ಮತ್ತು ಯೋಗಿಯವರ ವಿಷದ ಮಾತುಗಳಿಗೆ ಚುನಾವಣೆ ಆಯೋಗದ ಕುರುಡು ಮತ್ತು ಕಿವುಡು ನಿರೀಕ್ಷಿತ. ಆದರೆ, ಮೋದಿಯವರ ಅಸಹ್ಯಕರ ಹೇಳಿಕೆ ವಿರುದ್ಧ ಎಡ ಪಕ್ಷಗಳನ್ನು ಹೊರತುಪಡಿಸಿ, ಜಾತ್ಯತೀತ ವಿರೋಧ ಪಕ್ಷಗಳ ಪ್ರತಿರೋಧದಲ್ಲಿ ಅಸಮರ್ಥತೆ ಎದ್ದು ಕಾಣುತ್ತಿರುವುದು ಪ್ರಸ್ತುತದ ವಾಸ್ತವ. ಇಸ್ಲಾಮೋಫೋಬಿಯಾ ಮತ್ತು ಮುಸ್ಲಿಮರ ನಿಂದನೆಗೆ ಪ್ರತಿರೋಧ ವ್ಯಕ್ತಪಡಿಸುವಲ್ಲಿ ಹೆಚ್ಚಿನ ಪಕ್ಷಗಳು ವಿಫಲವಾಗಿವೆ.
ಕಾಂಗ್ರೆಸ್ ಮತ್ತು ಇಂಡಿಯ ಒಕ್ಕೂಟದಲ್ಲಿನ ಅದರ ಮಿತ್ರಪಕ್ಷಗಳು ಮತ್ತು ಮಾಧ್ಯಮಗಳು 2006 ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಹೇಳಿದ,ʻ ದೇಶದ ಸಂಪನ್ಮೂಲಗಳ ಮೊದಲ ಹಕ್ಕು ದಲಿತರು, ಬುಡಕಟ್ಟು ಸಮುದಾಯಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರದ್ದುʼ ಎಂಬ ಸತ್ಯವನ್ನು ುಲ್ಲೇಖಿಸುವ ಮೂಲಕ ಮೋದಿಯವರ ಸುಳ್ಳನ್ನು ಖಂಡಿಸಿದರು. ಪ್ರಧಾನಿ ಮಾದರಿ ನೀತಿ ಸಂಹಿತೆಯನ್ನು ಮತ್ತೊಮ್ಮೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ ಮತ್ತು ಸಿಪಿಐ(ಎಂ) ಮೋದಿ ವಿರುದ್ಧ ದ್ವೇಷಪೂರಿತ ಭಾಷಣ ಪ್ರಕರಣವನ್ನು ದಾಖಲಿಸಲು ಪ್ರಯತ್ನಿಸಿದೆ.
ಇಂಡಿಯ ಒಕ್ಕೂಟದ ಇತರ ಪಕ್ಷಗಳು - ಸಮಾಜವಾದಿ ಪಕ್ಷ, ಆರ್‌ಜೆಡಿ, ಜೆಎಂಎಂ, ತೃಣಮೂಲ ಕಾಂಗ್ರೆಸ್ , ರಾಜಕೀಯ ಸಂವಾದದಲ್ಲಿ ಅತ್ಯಂತ ಕೆಳ ಮಟ್ಟವನ್ನು ಮುಟ್ಟಿದ ಮೋದಿ ಅವರನ್ನು ದೂಷಿಸಿವೆ. ಪ್ರಧಾನಿಯವರ ಅಸಹ್ಯಕರ ಪ್ರತಿಕ್ರಿಯೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 400+ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂಬ ಆತ್ಮವಿಶ್ವಾಸಕ್ಕೆ ತದ್ವಿರುದ್ಧವಾಗಿವೆ ಎಂದು ಹೇಳಿವೆ.
ವಿರೋಧ ಪಕ್ಷದ ಈ ಆರೋಪ ಸಮರ್ಪಕ ಮತ್ತು ಸಮರ್ಥನೀಯ ಆಗಿರಬಹುದು.ಆದರೆ, ಒಂದು ವಿಷಯವನ್ನು ನಿರ್ಲಕ್ಷಿಸುವುದು ಕಷ್ಟ- ದೃಢವಾದ ಖಂಡನೆಗಳ ಅನುಪಸ್ಥಿತಿ. ಇಂಡಿಯ ಒಕ್ಕೂಟದ ಯಾವುದೇ ಘಟಕಗಳು, ಎಡ ರಂಗ ಹೊರತುಪಡಿಸಿ, ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿಯ ವಿಷಯುಕ್ತ ಹೇಳಿಕೆಗೆ ಪ್ರತಿಯಾಗಿ, ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸುವ ಮತ್ತು ಧೈರ್ಯ ತುಂಬುವ ಅರ್ಧದಷ್ಟು ಪ್ರಯತ್ನವನ್ನೂ ಮಾಡಿಲ್ಲ. ಮುಸ್ಲಿಮರೊಂದಿಗೆ ಒಗ್ಗಟ್ಟು ಅಥವಾ ಸಮುದಾಯದ ರಾಕ್ಷಸೀಕರಣ ಮತ್ತು ಅಮಾನವೀಕರಣ ದ ವಿರುದ್ಧ ವಿರೋಧ ಪಕ್ಷದಿಂದ ನಿಸ್ಸಂದಿಗ್ಧ ಪ್ರತಿಪಾದನೆ ಬರಬೇಕಿದೆ.
ಕಾಂಗ್ರೆಸ್, ಆರ್‌ಜೆಡಿ, ಎಸ್‌ಪಿ ಅಸಮರ್ಪಕ ಪ್ರತಿಕ್ರಿಯೆ: ಪ್ರಧಾನ ಮಂತ್ರಿಯವರ ಟೀಕೆಗೊಳಗಾದ ಕಾಂಗ್ರೆಸ್, ಡಾ. ಸಿಂಗ್ ಅವರ ಹೇಳಿಕೆಯ ತಪ್ಪು ನಿರೂಪಣೆ ಮತ್ತು ಮಂಗಳಸೂತ್ರವನ್ನು ಧ್ರುವೀಕರಣಕ್ಕೆ ಹೊಸ ಅಸ್ತ್ರವನ್ನಾಗಿ ಮಾಡಲು ಮೋದಿ ಅವರ ಪ್ರಯತ್ನಿಸುತ್ತಿರುವ ಬಗ್ಗೆ ಹೆಚ್ಚು ಕಾಳಜಿ ತೋರಿಸಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರ ಬನ್ಸ್ವಾರಾ ಭಾಷಣವನ್ನು ʻದ್ವೇಷ ಭಾಷಣʼ ಎಂದು ಕರೆದರು; ಆದರೆ, ಮೊಹಬ್ಬತ್ ಕಿ ದುಕಾ ನ್ ಮಾಲೀಕ ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ದೇಶದ ಜನಸಂಖ್ಯೆಯ ಶೇ. 15 ಮಂದಿ ನುಸುಳುಕೋರರು ಎಂದ ಮೋದಿಯವರನ್ನು ಸಾರ್ವಜನಿಕವಾಗಿ ಟೀಕಿಸಲಿಲ್ಲ.
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಚುನಾವಣೆ ಆಯೋಗಕ್ಕೆ ದೂರು ನೀಡಿದ ನಂತರ, ʻಏಕ್ ಸಮುದಾಯʼ (ಒಂದು ಸಮುದಾಯ) ವಿರುದ್ಧ ಅಸಹ್ಯಕರ ಟೀಕೆಗಳನ್ನು ಮಾಡಲಾಗಿದೆ ಎಂದು ಪದೇ ಪದೇ ಹೇಳಿದರು.ಆದರೆ, ಆ ಸಮುದಾಯವನ್ನು ಮುಸ್ಲಿಮರು ಎಂದು ಗುರುತಿಸಲು ನಿರಾಕರಿಸಿದರು. ಏಪ್ರಿಲ್ 23 ರಂದು ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಪ್ರಿಯಾಂಕಾ ಮೋದಿ, ಪ್ರಧಾನಿಯವರ ಮುಸ್ಲಿಂ ವಿರೋಧಿ ಮಾತು ʻದಿಕ್ಕು ತಪ್ಪಿಸುವ ತಂತ್ರʼ ಎಂದು ಕರೆದರು ಮತ್ತು ತಮ್ಮ ಕುಟುಂಬದ ತ್ಯಾಗವನ್ನು ಉಲ್ಲೇಖಿಸಿದರು.
ʻಹಿಂದೂ ಮಹಿಳೆಯರ ಮಂಗಳಸೂತ್ರವನ್ನು ತೆಗೆಯಲು ಕಾಂಗ್ರೆಸ್ ಬಯಸಿದೆʼ ಎಂದು ಮೋದಿ ಹೇಳಿಕೆಗೆ ಪ್ರತಿಯಾಗಿ ಪ್ರಿಯಾಂಕಾ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯನ್ನು ಉಲ್ಲೇಖಿಸಿದರು. ʻನನ್ನ ತಾಯಿ (ಸೋನಿಯಾ ಗಾಂಧಿ) ದೇಶಕ್ಕಾಗಿ ತನ್ನ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆʼ ಎಂದು ಹೇಳಿದರು. 1962 ರಲ್ಲಿ ದೇಶ ಚೀನಾದೊಂದಿಗೆ ಯುದ್ಧದಲ್ಲಿ ತೊಡಗಿದ್ದಾಗ ಹಣದ ಕೊರತೆ ನೀಗಿಸಲು ಅಜ್ಜಿ (ಮಾಜಿ ಪ್ರಧಾನಿ ಇಂದಿರಾಗಾಂಧಿ) ʻತಮ್ಮ ಆಭರಣಗಳನ್ನು ದಾನ ಮಾಡಿದರುʼ ಎಂದರು. ʻನೋಟು ಅಮಾನ್ಯೀಕರಣದ ಸಮಯದಲ್ಲಿ ರೈತರ ಹೆಂಡತಿಯರು ಸಾಲ ಪಾವತಿಸಲು ಮಂಗಳಸೂತ್ರವನ್ನು ಮಾರಬೇಕಾಯಿತು ಮತ್ತು ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಲಾಯಿತು. ಆಗ ಪ್ರಧಾನಿ ಎಲ್ಲಿದ್ದರು?ʼ ಎಂದು ಪ್ರಶ್ನಿಸಿದರು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಮೋದಿಯವರನ್ನು ನೇರವಾಗಿ ಖಂಡಿಸಿಲ್ಲ; ಬದಲಾಗಿ ʻಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ, ʻನೈಜ ಸಮಸ್ಯೆಗಳಿಂದ ಗಮನ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ" ಮತ್ತು ʻಲೋಕಸಭೆಯ ಮೊದಲ ಹಂತದ ಮತದಾನದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿರುವುದರಿಂದ ಹಾತಾಶೆಯಿಂದ ಮಾತನಾಡುತ್ತಿದ್ದಾರೆʼ, ಎಂದು ಟೀಕಿಸಿದ್ದಾರೆ.
'ಮುಸ್ಲಿಮರ ಅದೃಶ್ಯತೆ': ಇಂಡಿಯ ಒಕ್ಕೂಟದ ಅನೇಕ ಪಕ್ಷಗಳು ಚುನಾವಣೆಯಲ್ಲಿ ವಿಜಯಕ್ಕೆ ಮುಸ್ಲಿಂ ಮತಗಳ ಮೇಲೆ ಹೆಚ್ಚು ಅವಲಂಬಿಸಿದ್ದರೂ, ʻಮುಸ್ಲಿಮರ ಅದೃಶ್ಯತೆʼಯನ್ನು ಒಪ್ಪಿಕೊಳ್ಳುತ್ತಾರೆ. ಅದು ʻದುರದೃಷ್ಟಕರʼ ಮತ್ತು ʻತೊಂದರೆಯುಂಟು ಮಾಡುವಂಥದ್ದಾಗಿದ್ದರೂʼ ಹೊಸ ವಾಸ್ತವ ಗಳನ್ನು ಪರಿಗಣಿಸಿದರೆ ಮೋದಿಯವರ ಆಡಳಿತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕೋಮು ಧ್ರುವೀಕರಣಗೊಂಡಿದೆ ಎಂದು ಒಪ್ಪಿಕೊಳ್ಳುತ್ತಾರೆ.
ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕರೊಬ್ಬರು ಫೆಡರಲ್‌ಗೆ ಹೇಳಿದರು: ʻಮುಸ್ಲಿಮರ ಮೇಲಿನ ಇಂತಹ ದಾಳಿಗಳನ್ನು ಸಹಿಸುವುದಿಲ್ಲ ಎಂದು ಹೇಳಲು ಪ್ರತಿಪಕ್ಷಗಳ ಅಸಮರ್ಥತೆ ಅಸಮಾಧಾನಕರ. ಬಹುಶಃ ಬಿಜೆಪಿಯ ಸೋಲಿಗೆ ನೆರವು ನೀಡುವುದರಿಂದ ತೆರಬೇಕಾದ ಬೆಲೆ ಇದುʼ ಎಂದರು.
ಆದರೆ, ಕಾಂಗ್ರೆಸ್‌ನ ಮತ್ತೊಬ್ಬ ಮುಸ್ಲಿಂ ನಾಯಕ, ಮಾಜಿ ಕೇಂದ್ರ ಸಚಿವ, ವ್ಯತಿರಿಕ್ತ ನಿಲುವು ಹೊಂದಿದ್ದಾರೆ. ʻ ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರೇ ಎಂದ ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟಕ್ಕೆ ಶಿಕ್ಷೆ ವಿಧಿಸಲಾಯಿತು. ಆದರೆ, ಪ್ರಧಾನಿ ಮುಸ್ಲಿಮರು ನುಸುಳುಕೋರರು ಎಂದು ಹೇಳಿರುವಾಗ, ಮೋದಿ ಉಪನಾಮ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, ಮುಸ್ಲಿಂ ರಾಜಕಾರಣಿಗಳು ಏಕೆ ನ್ಯಾಯಾಲಯದ ಮೆಟ್ಟಿಲೇರಬಾರದು? ಮೋದಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಬಾರದೇಕೆ?ʼ
ʻಮುಸ್ಲಿಮರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಬಿಡುವುದು ಉತ್ತಮ ಎಂದು ವಿರೋಧ ಪಕ್ಷದಲ್ಲಿರುವ ಹೆಚ್ಚಿನವರು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸ್ ಅಥವಾ ಯಾವುದೇ ವಿರೋಧ ಪಕ್ಷ ಮುಸ್ಲಿಮರಿಗೆ ಪ್ರಮುಖ ಸ್ಥಾನ ನೀಡಿರುವುದನ್ನು ನೋಡಿದ್ದೀರಾ? ಬಿಜೆಪಿ ದಲಿತ, ಆದಿವಾಸಿ, ಜಾಟ್‌ಗಳು, ಈಶಾನ್ಯದ ಜನರು ಅಥವಾ ಮಹಿಳೆಯರ ವಿರುದ್ಧ ಕ್ರಮ ಕೈಗೊಂಡಾಗ, ಕಾಂಗ್ರೆಸ್ ತಕ್ಷಣ ಆ ಸಮುದಾಯದ ನಾಯಕ ರೊಟ್ಟಿಗೆ ಪತ್ರಿಕಾಗೋಷ್ಠಿಯನ್ನು ನಡೆಸುತ್ತದೆ; ಪ್ರತಿಭಟನೆಗೆ ಕುಳಿತುಕೊಳ್ಳುತ್ತದೆ. ಮುಸ್ಲಿಮರು ನುಸುಳುಕೋರರು ಎಂದು ಮೋದಿಯವರು ಕರೆದ ನಂತರ ಸಲ್ಮಾನ್ ಖುರ್ಷಿದ್ ಅಥವಾ ಇಮ್ರಾನ್ ಪ್ರತಾಪ್‌ಗಢಿ ಅವರು ಪ್ರತಿಭಟನೆ ನಡೆಸುವುದನ್ನು ಮರೆತುಬಿಡಿ; ಪತ್ರಿಕಾಗೋಷ್ಠಿ ನಡೆಸಿದ್ದನ್ನುನೀವು ನೋಡಿದ್ದೀರಾ?ʼ ಎಂದರು.
ಪ್ರಾಯೋಗಿಕವಲ್ಲ: ʻಮೋದಿಯವರ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ದಾಳಿಗಳನ್ನು ಪ್ರಬಲವಾಗಿ ಎದುರಿಸುವ ಪ್ರಯತ್ನದಿಂದ ಬಿಜೆಪಿಗೆ ನೆರವಾಗುತ್ತದೆ ಎಂದು ಹಿಂದಿನ ಅನುಭವಗಳು ತೋರಿಸುತ್ತವೆ; ಅದು ಬಿಜೆಪಿ ಹಿಂದೆ ಹಿಂದೂಗಳ ಕ್ರೋಡೀಕರಣ ಮಾಡುತ್ತದೆʼ ಎಂದು ಇಂಡಿಯಾ ಒಕ್ಕೂಟದ ಮೂಲಗಳು ಹೇಳುತ್ತವೆ.
ʻಟೀಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಮೋದಿ ಅವರು ರಾಜಕೀಯ ಸಂವಾದದ ಹೊಸ ಗುಂಡಿಗೆ ಇಳಿದಿದ್ದಾರೆ ಅಥವಾ ಸರ್ಕಾರದ ವೈಫಲ್ಯದಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಆರೋಪಿಸಬಹುದು ಅಥವಾ ಸೋಲಿನ ಬಗ್ಗೆ ಭಯಗೊಂಡಿದ್ದಾರೆ ಎಂದು ಹೇಳಬಹುದು ಆದರೆ, ಮುಸ್ಲಿಮರ ಮೇಲೆ ಅಂಥ ಭಾಷೆ ಅಥವಾ ಸಮುದಾಯದ ಮೇಲೆ ಯಾವುದೇ ದಾಳಿ ವಿರುದ್ಧ ಪ್ರತಿಪಕ್ಷಗಳು ಕಾವಲು ಕಾಯುತ್ತವೆ ಎನ್ನುವುದು ಪ್ರಾಯೋಗಿಕವಲ್ಲ. ಇದು ದುರದೃಷ್ಟಕರ. ಆದರೆ, ಇದು ಇಂದಿನ ರಾಜಕೀಯದ ಕಠೋರ ವಾಸ್ತವ. ಮುಸ್ಲಿಂ ಸಮುದಾಯ ಇದನ್ನು ಅರ್ಥಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ, ʼಎಂದು ಆರ್‌ಜೆಡಿ ನಾಯಕರೊಬ್ಬರು ಹೇಳಿದರು.
ಸಮಾಜವಾದಿ ಪಕ್ಷ ಮುಸ್ಲಿಮರ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಯುಪಿಯಲ್ಲಿ ಮುಸ್ಲಿಂ-ಯಾದವರಿಂದ ತನ್ನ ರಾಜಕೀಯ ಬಲ ಪಡೆದುಕೊಂಡಿದೆ. ʻಮುಲಾಯಂ ಸಿಂಗ್ ಅಥವಾ ಲಾಲು ಯಾದವ್ ಅವರು ಮುಸ್ಲಿಮರಿಗಾಗಿ ಹೆಮ್ಮೆಯಿಂದ ಹೋರಾಡುತ್ತಿದ್ದ ಕಾಲ ಈಗಿಲ್ಲ.ಮೋದಿ ಕೋಮು ಧ್ರುವೀಕರಣವನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು ಯೋಗಿ ಅದನ್ನೇ ಮಾಡುತ್ತಿದ್ದಾರೆ. ಇದು ಕಳೆದ 10 ವರ್ಷಗಳಿಂದ ಬಿಜೆಪಿಯ ಪರವಾಗಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ; ವಿರೋಧ ಪಕ್ಷದಲ್ಲಿರುವ ನಾವು ಈ ನೆಲದ ವಾಸ್ತವಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಮೋದಿ ಅವರು ಮುಸ್ಲಿಮರನ್ನು ʻನುಸುಳುಕೋರರುʼ ಎಂದು ಕರೆದಿದ್ದಕ್ಕೆ ಅವರನ್ನು ಟೀಕಿಸಿ, ಪ್ರತಿಭಟನೆ ನಡೆಸಿದರೆ, ಅಖಿಲೇಶ್ ಯಾದವ್ ಅವರನ್ನು ಹಿಂದೂ ವಿರೋಧಿ ಎಂದು ಕರೆಯುತ್ತಾರೆ. ಚುನಾವಣೆಯಲ್ಲಿ ಎಸ್‌ಪಿಗೆ ಏನಾಗುತ್ತದೆ ಎಂದು ನಾನು ವಿವರಿಸಬೇಕಿಲ್ಲ,ʼ ಎಂದು ಹೇಳಿದರು. ಎಸ್‌ಪಿಯ ಪಿಡಿಎ(ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾಕ್ ) ವಿರುದ್ಧ ಬಿಜೆಪಿಯ ಎನ್‌ಡಿಎ ಒಕ್ಕೂಟ ನಿಂತಿದೆ.
ಹಿರಿಯ ಪತ್ರಕರ್ತ ಫರಾಜ್ ಅಹ್ಮದ್ ಅವರು, ʻಚುನಾವಣೆ ಸಮಯದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟುವುದು ಉದ್ದೇಶಪೂರ್ವಕ ಪ್ರಚೋದನೆ. ಇದು ಮತದಾರರನ್ನು ಧ್ರುವೀಕರಣಗೊಳಿಸುತ್ತದೆʼ ಎನ್ನುತ್ತಾರೆ. ʻಇದು ಮೋದಿಯವರು ಪ್ರಯೋಗಿಸಿ, ಪರೀಕ್ಷಿಸಿ, ಪರಿಪೂರ್ಣಗೊಳಿಸಿಕೊಂಡಿರುವ ಅಭ್ಯಾಸ. ಪ್ರತಿಪಕ್ಷಗಳು ಅದಕ್ಕೆ ಬೀಳದಿರುವುದು ಸರಿ. ನೈತಿಕವಾಗಿ ಇದು ತಪ್ಪಾಗಿರಬಹುದು. ಆದರೆ, ರಾಜಕೀಯವಾಗಿ ಸರಿʼ ಎಂದರು.
ಮುಸ್ಲಿಮರ ಪರ ಮಾತನಾಡುವವರು ಯಾರು?: ಪ್ರತಿಪಕ್ಷಗಳ ಮೌನವನ್ನು ʻತಂತ್ರʼ ಎಂದು ಸಮರ್ಥಿಸಿಕೊಳ್ಳಬಹುದಾದರೂ, ಅದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ; ಆಗ ಮುಸ್ಲಿಮರ ಪರವಾಗಿ ಯಾರು ಮಾತನಾಡುತ್ತಾರೆ? ಬಿಜೆಪಿ ಆಕ್ರಮಣದಿಂದ ಬದಿಗೊತ್ತಲ್ಪಟ್ಟ ಸಮುದಾಯ ಅದೃಶ್ಯವಾಗುತ್ತಿದೆಯೇ? ಮತ್ತು ಸ್ವಯಂಘೋಷಿತ ಜಾತ್ಯತೀತ ಪಕ್ಷಗಳು ಇಂಥ ಮೌನದ ಮೂಲಕ ಬಹುಸಂಖ್ಯಾತ ರಾಜಕೀಯಕ್ಕೆ ನೆರವು ನೀಡುತ್ತಿವೆಯೇ?
ರಾಜಕೀಯ ವಿಮರ್ಶಕ ರಾಕೇಶ್ ಅಚಲ್ ಪ್ರಕಾರ, ʻಮುಸ್ಲಿಮರ ಪರವಾಗಿ ಮಾತನಾಡದೆ ಹಿಂದೂ ಮತದಾರರ ಒಲವು ಗಳಿಸುತ್ತೇವೆ ಅಥ ವಾ ಮೋದಿ ಅವರಿಗೆ ಧ್ರುವೀಕರಣದ ಅವಕಾಶ ನಿರಾಕರಿಸುತ್ತಿದ್ದೇವೆ ಎಂದು ಪ್ರತಿಪಕ್ಷಗಳು ಭಾವಿಸಿದರೆ, ಅವು ತಮ್ಮನ್ನು ಮೂರ್ಖರಾಗಿಸಿಕೊಳ್ಳುತ್ತಿವೆʼ ಎನ್ನುತ್ತಾರೆ.
ʻಬಿಜೆಪಿಯ ಸಿದ್ಧಾಂತ ಒಪ್ಪುವವರು ಬಿಜೆಪಿಯ ಪರ ಇರಬೇಕೆಂದಿಲ್ಲ. ಆದರೆ, ಮೋದಿಗೆ ಪರ್ಯಾಯವಿಲ್ಲ ಎಂದು ಭಾವಿಸುವ ಮತದಾ ರರು ಇದ್ದಕ್ಕಿದ್ದಂತೆ ಇಂಡಿಯ ಒಕ್ಕೂಟದ ಪಕ್ಷಗಳಿಗೆ ಮತ ಹಾಕುವುದಿಲ್ಲ.ಆದರೆ, ಮುಸ್ಲಿಮರು ಮತ್ತು ಜಾತ್ಯತೀತ ಹಿಂದೂಗಳು ತಾವು ಒಂಟಿಯಾಗುತ್ತಿದ್ದೇವೆ ಎಂದು ಭಾವಿಸಬಹುದು. ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಬದಲು ಮನೆಯಲ್ಲೇ ಇರುತ್ತಾರೆ.ಇದರಿಂದ ಯಾರಿಗೆ ಲಾಭವಾಗುತ್ತದೆ ಎಂದು ಪ್ರತಿಪಕ್ಷಗಳು ಎಂದಾದರೂ ಯೋಚಿಸಿವೆಯೇ?ʼ ಎಂದು ಅಚಲ್ ಆಶ್ಚರ್ಯಪಡುತ್ತಾರೆ.