ಪ್ರಯಾಣಿಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲ: ವಿಮಾನಗಳ ರದ್ದು ಗೊಂದಲಕ್ಕೆ ಇಂಡಿಗೋ ಸಿಇಒ ಕ್ಷಮೆ

ತಮ್ಮ ಸಿಬ್ಬಂದಿಗೆ ಬರೆದಿರುವ ಆಂತರಿಕ ಇಮೇಲ್‌ನಲ್ಲಿ ಅವರು ಸಂಸ್ಥೆಯು ಗ್ರಾಹಕರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

Update: 2025-12-05 01:50 GMT

ಸಾಂದರ್ಭಿಕ ಚಿತ್ರ 

ಕಳೆದ ಮೂರು ದಿನಗಳಿಂದ ದೇಶಾದ್ಯಂತ ನೂರಾರು ವಿಮಾನಗಳು ರದ್ದುಗೊಂಡು, ವಿಮಾನ ನಿಲ್ದಾಣಗಳಲ್ಲಿ ಉಂಟಾಗಿರುವ ತೀವ್ರ ಗೊಂದಲ ಮತ್ತು ಪ್ರಯಾಣಿಕರ ಆಕ್ರೋಶದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರು ಅಸಹಾಯಕತೆ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ.

ತಮ್ಮ ಸಿಬ್ಬಂದಿಗೆ ಬರೆದಿರುವ ಆಂತರಿಕ ಇಮೇಲ್‌ನಲ್ಲಿ ಅವರು ಸಂಸ್ಥೆಯು ಗ್ರಾಹಕರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ನಾವು ಪ್ರತಿದಿನ ಸುಮಾರು 3.80 ಲಕ್ಷ ಗ್ರಾಹಕರಿಗೆ ಸೇವೆ ಸಲ್ಲಿಸುತ್ತೇವೆ ಮತ್ತು ಪ್ರತಿಯೊಬ್ಬರಿಗೂ ಉತ್ತಮ ಪ್ರಯಾಣದ ಅನುಭವ ನೀಡಬೇಕೆಂಬುದು ನಮ್ಮ ಮೂಲ ಆಶಯ. ಆದರೆ, ಕಳೆದ ಕೆಲವು ದಿನಗಳಲ್ಲಿ ಆ ಭರವಸೆಯನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಇದಕ್ಕಾಗಿ ನಾವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇವೆ ಎಂದು ಎಲ್ಬರ್ಸ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ 48 ಗಂಟೆಗಳಲ್ಲಿ ವಿಮಾನಯಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಲು ಹಲವಾರು ಸವಾಲುಗಳು ಕಾರಣವಾಗಿವೆ ಎಂದು ಅವರು ವಿವರಿಸಿದ್ದಾರೆ. ಸಣ್ಣ ತಾಂತ್ರಿಕ ದೋಷಗಳು, ಹಠಾತ್ ವೇಳಾಪಟ್ಟಿ ಬದಲಾವಣೆ, ಪ್ರತಿಕೂಲ ಹವಾಮಾನ, ವಿಮಾನಯಾನ ಪರಿಸರ ವ್ಯವಸ್ಥೆಯಲ್ಲಿನ ಹೆಚ್ಚಿದ ದಟ್ಟಣೆ ಮತ್ತು ಹೊಸ ಎಫ್‌ಡಿಟಿಎಲ್ (FDTL- ಪೈಲಟ್‌ಗಳ ಕರ್ತವ್ಯದ ಸಮಯದ ಮಿತಿ) ನಿಯಮಗಳ ಜಾರಿ ಒಟ್ಟಾಗಿ ಕಾರ್ಯಾಚರಣೆಯ ಮೇಲೆ ಗಂಭೀರ ಋಣಾತ್ಮಕ ಪರಿಣಾಮ ಬೀರಿವೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಕಾರ್ಯಾಚರಣೆಯನ್ನು ನಿಭಾಯಿಸುತ್ತಿರುವ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಹಾಗೂ ಇಂಜಿನಿಯರ್‌ಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

1232 ವಿಮಾನಗಳು ರದ್ದು

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ, ಗುರುವಾರ ಒಂದೇ ದಿನ 300ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ನವೆಂಬರ್ ತಿಂಗಳೊಂದರಲ್ಲೇ ಬರೋಬ್ಬರಿ 1,232 ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ನವೆಂಬರ್‌ನಲ್ಲಿ ರದ್ದಾದ ವಿಮಾನಗಳ ಪೈಕಿ ಸಿಂಹಪಾಲು, ಅಂದರೆ 755 ವಿಮಾನಗಳು ಸಿಬ್ಬಂದಿ ಕೊರತೆಯಿಂದ ರದ್ದಾಗಿವೆ. ಉಳಿದಂತೆ 92 ಎಟಿಸಿ ವೈಫಲ್ಯದಿಂದ, 258 ವಿಮಾನ ನಿಲ್ದಾಣದ ನಿರ್ಬಂಧಗಳಿಂದ ಮತ್ತು 127 ಇತರ ಕಾರಣಗಳಿಂದ ರದ್ದುಗೊಂಡಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಸೇವೆಯಲ್ಲಿನ ಈ ಭಾರೀ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA), ತನಿಖೆಗೆ ಆದೇಶಿಸಿದ್ದು, ಕಾರ್ಯಾಚರಣೆಯಲ್ಲಿನ ದಿಢೀರ್ ಕುಸಿತಕ್ಕೆ ಕಾರಣ ನೀಡುವಂತೆ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಂಡಿಗೋ, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಮತ್ತು ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮುಂದಿನ 48 ಗಂಟೆಗಳ ಕಾಲಾವಕಾಶ ಕೋರಿದೆ. ತನ್ನ ತಂಡಗಳು ಗ್ರಾಹಕರ ಅನಾನುಕೂಲತೆಯನ್ನು ತಗ್ಗಿಸಲು ಹಗಲಿರುಳು ಶ್ರಮಿಸುತ್ತಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Tags:    

Similar News