ಪ್ರತಿಭೆಗಳಿಗೆ ತಡೆ ಒಡ್ಡುವ ದೇಶಗಳೇ ಅಂತಿಮವಾಗಿ ಸೋಲುತ್ತವೆ: ಜೈಶಂಕರ್ ಎಚ್ಚರಿಕೆ
ಅಮೆರಿಕದ ಎಚ್-1ಬಿ ವೀಸಾ ಕಾರ್ಯಕ್ರಮದಡಿ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನುಮೋದನೆಗೊಂಡ ಎಚ್-1ಬಿ ವೀಸಾಗಳಲ್ಲಿ ಅಂದಾಜು ಶೇ. 71ರಷ್ಟು ಭಾರತೀಯರದ್ದೇ ಪಾಲಿದೆ.
ಜೈಶಂಕರ್
ವಿದೇಶಿ ಪ್ರತಿಭೆಗಳಿಗೆ ಅಥವಾ ಉದ್ಯೋಗಿಗಳಿಗೆ ಅನಗತ್ಯ ಅಡೆತಡೆಗಳನ್ನು ಉಂಟುಮಾಡುವ ರಾಷ್ಟ್ರಗಳು ಅಂತಿಮವಾಗಿ ತಾವೇ ನಷ್ಟ ಅನುಭವಿಸಲಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿಪಾದಿಸಿದ್ದಾರೆ. ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಎಚ್-1ಬಿ (H-1B) ವೀಸಾ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿರುವ ಬೆನ್ನಲ್ಲೇ ಜೈಶಂಕರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಬುಧವಾರ (ಡಿಸೆಂಬರ್ 3) ನವದೆಹಲಿಯಲ್ಲಿ ನಡೆದ ವಲಸೆ ಮತ್ತು ಚಲನಶೀಲತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ದೇಶದ ಹೆಸರನ್ನು ಪ್ರಸ್ತಾಪಿಸದಿದ್ದರೂ, ಪರೋಕ್ಷವಾಗಿ ಅಮೆರಿಕದ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಭೆಗಳ ಹರಿವು ಮತ್ತು ಪರಸ್ಪರ ಲಾಭ
ಜಾಗತಿಕ ಮಟ್ಟದಲ್ಲಿ ಪ್ರತಿಭೆಗಳ ಹರಿವಿಗೆ ಅಡೆತಡೆಗಳನ್ನು ಸೃಷ್ಟಿಸಿದರೆ ಅದು ಆಯಾ ದೇಶಗಳಿಗೇ ಹಿನ್ನಡೆಯಾಗಲಿದೆ ಎಂದು ಜೈಶಂಕರ್ ಎಚ್ಚರಿಸಿದರು. "ನಾವು ಸುಧಾರಿತ ಉತ್ಪಾದನಾ ವಲಯದ ಯುಗಕ್ಕೆ ಕಾಲಿಡುತ್ತಿರುವಾಗ, ನಮಗೆ ಇನ್ನೂ ಹೆಚ್ಚಿನ ನುರಿತ ಪ್ರತಿಭೆಗಳ ಅಗತ್ಯವಿರುತ್ತದೆ. ಗಡಿಗಳನ್ನು ಮೀರಿ ಪ್ರತಿಭೆಗಳನ್ನು ಬಳಸಿಕೊಳ್ಳುವುದು ಎರಡು ದೇಶಗಳಿಗೂ ಪರಸ್ಪರ ಲಾಭದಾಯಕವಾಗಿರುತ್ತದೆ ಎಂಬುದನ್ನು ನಾವು ಇತರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡಬೇಕಿದೆ," ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯೋಗ ಮತ್ತು ವಲಸೆ ನೀತಿ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉದ್ಯೋಗದ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ ಸಚಿವರು, "ಅಲ್ಲಿನ ಉದ್ಯೋಗ ಸಮಸ್ಯೆಗಳಿಗೆ ಹೊರಗಿನಿಂದ ಬರುವ ಜನರು ಕಾರಣರಲ್ಲ. ಬದಲಾಗಿ, ಆ ದೇಶಗಳು ತಮ್ಮ ಉತ್ಪಾದನಾ ಘಟಕಗಳನ್ನು ಬೇರೆಡೆಗೆ (ಚೀನಾದಂತಹ ದೇಶಗಳಿಗೆ) ವರ್ಗಾಯಿಸಲು ಅವಕಾಶ ಮಾಡಿಕೊಟ್ಟಿದ್ದೇ ಇದಕ್ಕೆ ಮುಖ್ಯ ಕಾರಣ," ಎಂದು ಪರೋಕ್ಷವಾಗಿ ಚೀನಾ ಅಂಶವನ್ನು ಪ್ರಸ್ತಾಪಿಸಿದರು.
"ಜನರು ಪ್ರಯಾಣಿಸುವುದನ್ನು ಕಷ್ಟಕರವಾಗಿಸಿದರೆ ಕೆಲಸ ನಿಲ್ಲುವುದಿಲ್ಲ. ಒಂದು ವೇಳೆ ಜನರು ಪ್ರಯಾಣಿಸದಿದ್ದರೆ, ಕೆಲಸವೇ ಜನರಿದ್ದಲ್ಲಿಗೆ ಪ್ರಯಾಣಿಸುತ್ತದೆ ," ಎಂದು ಮಾರ್ಮಿಕವಾಗಿ ನುಡಿದರು.
ಎಚ್-1ಬಿ ವೀಸಾ ಮತ್ತು ಭಾರತೀಯರು
ಅಮೆರಿಕದ ಎಚ್-1ಬಿ ವೀಸಾ ಕಾರ್ಯಕ್ರಮದಡಿ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನುಮೋದನೆಗೊಂಡ ಎಚ್-1ಬಿ ವೀಸಾಗಳಲ್ಲಿ ಅಂದಾಜು ಶೇ. 71ರಷ್ಟು ಭಾರತೀಯರದ್ದೇ ಪಾಲಿದೆ. ಈಗ ಟ್ರಂಪ್ ಆಡಳಿತ ವಲಸೆ ನೀತಿಗಳನ್ನು ಬಿಗಿಗೊಳಿಸುತ್ತಿರುವುದು ಭಾರತೀಯ ಟೆಕ್ಕಿಗಳಲ್ಲಿ ಆತಂಕ ಮೂಡಿಸಿದೆ.
ಕಾನೂನುಬದ್ಧ ವಲಸೆಯ ಮಹತ್ವ
ಜೈಶಂಕರ್ ಅವರು ಕಾನೂನುಬದ್ಧ ವಲಸೆಯ ಮಹತ್ವವನ್ನು ಒತ್ತಿಹೇಳಿದರು. "ನಾವು ವಿದೇಶಾಂಗ ನೀತಿಯಲ್ಲಿ ಹೆಚ್ಚಾಗಿ ವ್ಯಾಪಾರದ ಬಗ್ಗೆ ಮಾತನಾಡುತ್ತೇವೆ. ಆದರೆ ಉದ್ಯೋಗಕ್ಕಾಗಿ ಜನರ ಚಲನಶೀಲತೆಯನ್ನು ನಿರ್ಲಕ್ಷಿಸುತ್ತೇವೆ. ಕಳೆದ ವರ್ಷ ಭಾರತಕ್ಕೆ ಹರಿದುಬಂದ ರೆಮಿಟೆನ್ಸ್ (ವಿದೇಶದಲ್ಲಿರುವವರು ಕಳುಹಿಸಿದ ಹಣ) ಬರೋಬ್ಬರಿ 135 ಬಿಲಿಯನ್ ಡಾಲರ್. ಇದು ಅಮೆರಿಕಕ್ಕೆ ನಾವು ಮಾಡುವ ರಫ್ತಿನ ಎರಡು ಪಟ್ಟು ಹೆಚ್ಚು," ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.
ಇದೇ ವೇಳೆ ಅಕ್ರಮ ವಲಸೆಯ ಅಪಾಯಗಳ ಬಗ್ಗೆಯೂ ಸಚಿವರು ಎಚ್ಚರಿಸಿದರು. "ಮಾನವ ಕಳ್ಳಸಾಗಣೆಯಂತಹ ಅಪರಾಧಗಳು ಅಕ್ರಮ ವಲಸೆಯೊಂದಿಗೆ ತಳಕುಹಾಕಿಕೊಂಡಿವೆ. ಪ್ರತ್ಯೇಕತಾವಾದಿ ಅಜೆಂಡಾ ಹೊಂದಿರುವವರು ಮತ್ತು ರಾಜಕೀಯ ದುರುದ್ದೇಶ ಇರುವವರು ಇಂತಹ ಅಕ್ರಮ ಮಾರ್ಗಗಳನ್ನು ಬಳಸಿಕೊಳ್ಳುತ್ತಾರೆ," ಎಂದು ಕಳವಳ ವ್ಯಕ್ತಪಡಿಸಿದರು.
ವಿದೇಶದಲ್ಲಿರುವ ಭಾರತೀಯರಿಗೆ ಸರ್ಕಾರದ ನೆರವು
ಕಳೆದ ಮೂರು ವರ್ಷಗಳಲ್ಲಿ ಕೇವಲ ಕೊಲ್ಲಿ ರಾಷ್ಟ್ರಗಳಲ್ಲೇ 'ಮದದ್' (Madad) ಪೋರ್ಟಲ್ ಮೂಲಕ 1.38 ಲಕ್ಷ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಹಾಗೆಯೇ 'ಭಾರತೀಯ ಸಮುದಾಯ ಕಲ್ಯಾಣ ನಿಧಿ' ಅಡಿಯಲ್ಲಿ 2.38 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಟಿಕೆಟ್ ವ್ಯವಸ್ಥೆ ಮಾಡುವುದು, ಕಾನೂನು ಹೋರಾಟಕ್ಕೆ ನೆರವು ಹಾಗೂ ಮೃತಪಟ್ಟವರ ಅಂತ್ಯಕ್ರಿಯೆಗೆ ಈ ನಿಧಿಯನ್ನು ಬಳಸಲಾಗುತ್ತಿದೆ ಎಂದು ಜೈಶಂಕರ್ ಮಾಹಿತಿ ನೀಡಿದರು.