ಭಾರತಕ್ಕೆ ನಾಳೆ ರಷ್ಯಾ ಅಧ್ಯಕ್ಷರ ಭೇಟಿ: ವ್ಯಾಪಾರ, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮಾತುಕತೆ ಸಾಧ್ಯತೆ
ಭಾರತ ಹಾಗೂ ರಷ್ಯಾ ನಡುವಿನ ವ್ಯಾಪಾರವು ತೀವ್ರ ಅಸಮತೋಲನದಿಂದ ಕೂಡಿದೆ. ರಷ್ಯಾದಿಂದ ಭಾರತವು 65 ಬಿಲಿಯನ್ ಡಾಲರ್ ಮೌಲ್ಯದ ವಸ್ತು ಹಾಗೂ ಸೇವೆಗಳನ್ನು ಖರೀದಿಸಿದರೆ, ಭಾರತದಿಂದ ರಷ್ಯಾವು ಕೇವಲ 5 ಬಿಲಿಯನ್ ಡಾಲರ್ ಮೌಲ್ಯದ ಸರಕು ಸೇವೆ ಪಡೆಯುತ್ತಿದೆ.
ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ : ಪ್ರಾತಿನಿಧಿಕ ಚಿತ್ರ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿ. 4ರಂದು ಎರಡು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಆಗಮಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಮೋದಿ-ಪುಟಿನ್ ಮಾತುಕತೆ ವೇಳೆ ದ್ವಿಪಕ್ಷಿಯ ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ಘೋಷಿಸುವ ಸಾಧ್ಯತೆ ಇದೆ. ಭಾರತಕ್ಕೆ ಅಮೆರಿಕ ವಿಧಿಸಿರುವ ಶೇ 50 ರಷ್ಟು ಸುಂಕ ಹಾಗೂ ರಷ್ಯಾದ ಕಚ್ಚಾ ತೈಲದ ಖರೀದಿಗೆ ಶೇ 25 ರಷ್ಟು ಹೆಚ್ಚುವರಿ ತೆರಿಗೆಗಳ ಕುರಿತಂತೆ ಉಭಯ ನಾಯಕರು ಚರ್ಚಿಸಲಿದ್ದಾರೆ.
ಸೇನಾ ಲಾಜಿಸ್ಟಿಕ್ ಒಪ್ಪಂದಕ್ಕೆ ಮಂಜೂರಾತಿ
ಪುಟಿನ್ ಭಾರತದ ಭೇಟಿಗೂ ಮುನ್ನ ಡಿ.2ರಂದು ರಷ್ಯಾ ಸಂಸತ್ತಿನ ಕೆಳಮನೆಯಾದ “ಸ್ಟೇಟ್ ಡೂಮಾ”, ಭಾರತ–ರಷ್ಯಾ ಸೇನಾ ಲಾಜಿಸ್ಟಿಕ್ ಬೆಂಬಲ (RELOS) ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಫೆ.18ರಂದು ಎರಡೂ ದೇಶಗಳು ಸಹಿ ಮಾಡಿದ್ದ ಈ ಒಪ್ಪಂದದಡಿ ಯುದ್ಧ ನೌಕೆಗಳು, ಸೇನಾ ವಿಮಾನಗಳು, ಭಾರತ–ರಷ್ಯಾ ನಡುವೆ ಪರಸ್ಪರ ಸೇನಾ ಸಿಬ್ಬಂದಿ ಸಂಚಾರ, ನೆಲೆಗಳ ವಿನಿಮಯ, ಜಂಟಿ ಯುದ್ಧಾಭ್ಯಾಸ ಹಾಗೂ ಲಾಜಿಸ್ಟಿಕ್ ಬೆಂಬಲ ಒದಗಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸ್ಟೇಟ್ ಡೂಮಾ ಸಭಾಧ್ಯಕ್ಷ ವ್ಯಾಚೆಸ್ಲಾವ್ ವೊಲೊಡಿನ್ ಅವರು, “ಭಾರತದೊಂದಿಗೆ ನಮ್ಮ ಒಪ್ಪಂದವು ಪರಸ್ಪರ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮತ್ತೊಂದು ಹೆಜ್ಜೆ” ಎಂದು ವ್ಯಾಖ್ಯಾನಿಸಿದ್ದಾರೆ.
ವ್ಯಾಪಾರ ಕೊರತೆ ಬಗ್ಗೆ ಭಾರತದ ಆತಂಕ
ರಷ್ಯಾ ಕ್ರೆಮ್ಲಿನ್ ವಕ್ತಾರ ದಿಮಿತ್ರಿ ಪೆಸ್ಕೊವ್ ಅವರು, ಭಾರತಕ್ಕೆ ಹೆಚ್ಚು ಅನುಕೂಲವಾಗುವಂತೆ ವ್ಯಾಪಾರ ಸಮತೋಲನ ಕಾಯ್ದುಕೊಳ್ಳಲು ಕ್ರಮ ವಹಿಸಿದ್ದೇವೆ ಎಂದು ಹೇಳಿದ್ದಾರೆ.
“ಪ್ರಸ್ತುತ, ಭಾರತವು ರಷ್ಯಾದಿಂದ 65 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಸ್ತು ಹಾಗೂ ಸೇವೆಗಳನ್ನು ಖರೀದಿಸುತ್ತಿದೆ. ರಷ್ಯಾವು ಭಾರತದಿಂದ ಕೇವಲ 5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಸ್ತುಗಳನ್ನು ಮಾತ್ರ ಖರೀದಿಸುತ್ತಿದೆ. ನಮ್ಮ ಈ ವ್ಯಾಪಾರದಲ್ಲಿ ಅಸಮತೋಲನವಿದೆ. ಭಾರತದಿಂದ ನಾವು ಹೆಚ್ಚು ಖರೀದಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ,” ಎಂದು ಹೇಳಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿ ಕುಸಿತಕ್ಕೆ ಆತಂಕ
ಅಮೆರಿಕದ ದುಬಾರಿ ತೆರಿಗೆ ಕ್ರಮಗಳಿಂದಾಗಿ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿದ್ದು, ಇದಕ್ಕೆ ರಷ್ಯಾ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪೆಸ್ಕೊವ್ ಅವರು, ಇದು ಕೇವಲ ʼತಾತ್ಕಾಲಿಕʼ ಎಂದು ಹೇಳಿದ್ದಾರೆ.
“ಬಾಹ್ಯ ಬೆದರಿಕೆಗಳ ನಡುವೆಯೂ ನಮ್ಮ ಉತ್ಪಾದನೆ ಹಾಗೂ ರಫ್ತು ಪ್ರಮಾಣ ಕುಸಿಯದಂತೆ ಹೇಗೆ ನಿರ್ವಹಿಸಬೇಕೆಂಬ ಅನುಭವ ನಮಗಿದೆ,” ಎಂದು ಹೇಳಿದ್ದಾರೆ.
ಬ್ರಹ್ಮೋಸ್, ಸು–57, ಹೆಚ್ಚುವರಿ ಎಸ್-400 ಕುರಿತು ಚರ್ಚೆ
ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆಯ ವೇಳೆ ಬ್ರಹ್ಮೋಸ್ ಕ್ಷಿಪಣಿ ಜಂಟಿ ಉತ್ಪಾದನೆ, ಸು–57 ಯುದ್ಧವಿಮಾನ ಪೂರೈಕೆ, ಹೆಚ್ಚುವರಿ ಎಸ್-400 ವ್ಯವಸ್ಥೆಗಳ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಹೊಸ ಒಡಂಬಡಿಕೆಗೆ ರಷ್ಯಾ ಅನುಮೋದನೆ
ಭಾರತ–ರಷ್ಯಾ ನಾಗರಿಕ ಅಣುಶಕ್ತಿ ಸಹಕಾರ ವಿಸ್ತರಿಸಲು ರಷ್ಯಾ ಸಚಿವ ಸಂಪುಟ ಹೊಸ ಒಡಂಬಡಿಕೆಗೆ ಅನುಮೋದನೆ ನೀಡಿದೆ.
ರೊಸಾಟೊಮ್ ಮುಖ್ಯಸ್ಥ ಅಲೆಕ್ಸೇ ಲಿಗೆಚೆವ್ ಅವರು ಸಣ್ಣ ಅಣು ರಿಯಾಕ್ಟರ್ಗಳ ನಿರ್ಮಾಣ ಸೇರಿದಂತೆ ಹಲವು ಪ್ರಸ್ತಾವನೆಗಳೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ. ರಷ್ಯಾ ಇಂತಹ ರಿಯಾಕ್ಟರ್ಗಳ ನಿರ್ಮಾಣದಲ್ಲಿ ಅನುಭವ ಹೊಂದಿದ್ದು, ಭಾರತಕ್ಕೆ ತಂತ್ರಜ್ಞಾನ ಒದಗಿಸಲು ಸಿದ್ಧವಿದೆ.
ಶಾಂತಿ ಮಾತುಕತೆಗೆ ರಷ್ಯಾ ಸಿದ್ಧ
ಉಕ್ರೇನ್ ಸಂಘರ್ಷ ಕುರಿತಂತೆ ಪೆಸ್ಕೊವ್ ಮಾತನಾಡಿ, “ಅಮೆರಿಕಾದ ಇತ್ತೀಚಿನ ಮಧ್ಯಸ್ಥಿಕೆ ಪ್ರಯತ್ನಗಳು “ಬಹಳ ಪರಿಣಾಮಕಾರಿ” ಎಂದು ಶ್ಲಾಘಿಸಿದ್ದಾರೆ. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನಾವು ಸಿದ್ಧ. ಭಾರತದ ದೃಷ್ಟಿಕೋನವನ್ನು ನಾವು ಗೌರವಿಸುತ್ತೇವೆ” ಎಂದು ಹೇಳಿದ್ದಾರೆ.