Waqf Bill: ತಗ್ಗುದೇ ಇಲ್ಲ; ಬಿಜೆಪಿಯ ವಕ್ಫ್ ಆರೋಪಕ್ಕೆ “ಪುಷ್ಪಾ” ಶೈಲಿಯಲ್ಲಿ ಖರ್ಗೆ ಗುಡುಗು

ಬುಧವಾರ ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಅವರು ಇಂಥದ್ದೊಂದು ಆರೋಪ ಮಾಡಿದ್ದರು.;

Update: 2025-04-03 09:53 GMT

ಸಂಸತ್​​ನಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಚರ್ಚೆ ನಡೆಯುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ” ಎಂಬ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಆರೋಪಕ್ಕೆ ಗುರುವಾರ ರಾಜ್ಯಸಭೆಯಲ್ಲಿ ಕೆರಳಿ ಕೆಂಡವಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸಿದ್ಧ ‘ಪುಷ್ಪಾ’ ಸಿನಿಮಾದ ಡೈಲಾಗ್ ಹೇಳುವ ಮೂಲಕ ಗುಡುಗಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಅವರು ಇಂಥದ್ದೊಂದು ಆರೋಪ ಮಾಡಿದ್ದರು. ಅದಕ್ಕೆ ಸಿನಿಮೀಯ ಪ್ರತ್ಯುತ್ತರ ನೀಡಿರುವ ಖರ್ಗೆ, ಠಾರೂಕ್ ಆರೋಪವನ್ನು ಆಧಾರರಹಿತ ಎಂದು ಹೇಳಿದ್ದಲ್ಲದೇ, ಕೂಡಲೇ ಠಾಕೂರ್ ಕ್ಷಮೆಯಾಚಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಅಲ್ಲದೇ ನಿಮ್ಮ ರಾಜಕೀಯ ದಾಳಿಗೆಲ್ಲ ಬಗ್ಗುವವನು ನಾನಲ್ಲ ಎಂದು ಘರ್ಜಿಸಿದ್ದಾರೆ.

"ಬಿಜೆಪಿಯವರು ನನ್ನನ್ನು ಹೆದರಿಸಿ ಮಣಿಸಬಹುದೆಂದು ಭಾವಿಸಿದರೆ ಅದು ಅವರ ಮೂರ್ಖತನ. ನಾನು ಎಂದಿಗೂ ತಲೆಬಾಗುವವನಲ್ಲ. ಮೇಂ ಟೂಟ್ ಜಾವೂಂಗಾ ಮಗರ್ ಜುಕೂಂಗಾ ನಹೀ. ನೆನಪಿರಲಿ, ಬೆದರಿಕೆಗೆಲ್ಲ ಹೆದರುವ ವ್ಯಕ್ತಿಯಲ್ಲ" ಎಂದು ಖರ್ಗೆ ಹೇಳಿದ್ದಾರೆ.

"ನನ್ನ ಬದುಕು ಯಾವಾಗಲೂ ತೆರೆದ ಪುಸ್ತಕ. ಅದು ಹಲವು ಕಷ್ಟಗಳು ಮತ್ತು ಹೋರಾಟಗಳಿಂದ ಕೂಡಿದ್ದಾಗಿದೆ. ಹಾಗಿದ್ದರೂ ನಾನು ಸಾರ್ವಜನಿಕ ಜೀವನದಲ್ಲಿ ಸದಾ ಅತ್ಯುನ್ನತ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. ಸುಮಾರು 60 ವರ್ಷಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದೇನೆ. ನಿನ್ನೆ ಲೋಕಸಭೆಯಲ್ಲಿ ಅನುರಾಗ್ ಠಾಕೂರ್ ಅವರು ನನ್ನ ಮೇಲೆ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಹೊರಿಸಿದ್ದರು. ನನ್ನ ಪಕ್ಷದ ಇತರೆ ಸಂಸದರು ತರಾಟೆಗೆ ತೆಗೆದುಕೊಂಡ ಬಳಿಕ, ಕೊನೆಗೆ ಠಾಕೂರ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕಾಯಿತು ಎಂದಿದ್ದಾರೆ.

ಅನುರಾಗ್ ಠಾಕೂರ್ ಅವರ ಈ ಆರೋಪವು ನನ್ನ ರಾಜಕೀಯ ಜೀವನದ ಮೇಲೆ ಭಾರೀ ಕಳಂಕವನ್ನುಂಟು ಮಾಡಿದೆ. ಇದಕ್ಕಾಗಿ ಬಿಜೆಪಿ ಕ್ಷಮೆಯಾಚಿಸಬೇಕು ಎಂದೂ ಖರ್ಗೆ ಒತ್ತಾಯಿಸಿದರು. ಜೊತೆಗೆ, ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ತಮ್ಮ ಆರೋಪಗಳನ್ನು ಸಾಬೀತುಪಡಿಸಲಿ. ಅದು ಸಾಧ್ಯವಾಗದಿದ್ದರೆ ಅವರಿಗೆ ಸಂಸತ್ತಿನಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ ಎಂದೂ ಹೇಳಿದರು.

"ಒಂದೋ ಅವರು ರಾಜೀನಾಮೆ ನೀಡಲಿ. ಅವರು ಆರೋಪವನ್ನು ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ವಕ್ಫ್ ಭೂಮಿಯ ಒಂದು ಇಂಚನ್ನು ನಾನಾಗಲೀ, ನನ್ನ ಮಕ್ಕಳಾಗಲೀ ಕಬಳಿಸಿದ್ದೇವೆ ಎಂದಾದರೆ, ನಾನು ರಾಜೀನಾಮೆ ನೀಡಲು ಸಿದ್ಧ. ನಾನು ಇದಕ್ಕೆಲ್ಲ ಹೆದರುವುದಿಲ್ಲ. ಏಕೆಂದರೆ ನಾನೊಬ್ಬ ಕಾರ್ಮಿಕನ ಮಗ" ಎಂದೂ ಖರ್ಗೆ ಹೇಳಿದರು.

Tags:    

Similar News