ಮತ ಕಳವು ಆರೋಪ: ನಾಳೆ ಚುನಾವಣಾ ಆಯೋಗದತ್ತ 'ಇಂಡಿಯಾ' ಮೈತ್ರಿಕೂಟದ ಬೃಹತ್ ಪಾದಯಾತ್ರೆ

2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ, ಸಂಸತ್ತಿನ ಹೊರಗೆ 'ಇಂಡಿಯಾ' ಮೈತ್ರಿಕೂಟ ನಡೆಸುತ್ತಿರುವ ಮೊದಲ ಜಂಟಿ ಪ್ರತಿಭಟನೆ ಇದಾಗಿದೆ.;

Update: 2025-08-10 07:59 GMT

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಹೆಸರಿನಲ್ಲಿ ಮತ ಕಳವು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ 'ಇಂಡಿಯಾ' ಮೈತ್ರಿಕೂಟವು, ನಾಳೆ (ಸೋಮವಾರ) ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ.

2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ, ಸಂಸತ್ತಿನ ಹೊರಗೆ 'ಇಂಡಿಯಾ' ಮೈತ್ರಿಕೂಟ ನಡೆಸುತ್ತಿರುವ ಮೊದಲ ಜಂಟಿ ಪ್ರತಿಭಟನೆ ಇದಾಗಿದೆ. ನಾಳೆ ಬೆಳಗ್ಗೆ 11.30ಕ್ಕೆ ಸಂಸತ್ತಿನಿಂದ ಆರಂಭವಾಗಲಿರುವ ಈ ಪಾದಯಾತ್ರೆಯಲ್ಲಿ, ಮೈತ್ರಿಕೂಟದ ಸುಮಾರು 300 ಸಂಸದರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಎಎಪಿ ಕೂಡ ಈ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಈ ಹಿಂದೆಯೇ ಆರೋಪಿಸಿದ್ದ ರಾಹುಲ್ ಗಾಂಧಿ, ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳನ್ನು ಕಳವು ಮಾಡಲಾಗಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಈ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ವಿಪಕ್ಷಗಳು ಸಜ್ಜಾಗಿವೆ.

ಈ ಪ್ರತಿಭಟನಾ ಮೆರವಣಿಗೆಯನ್ನು ಮೂಲತಃ ಆಗಸ್ಟ್ 8ರಂದೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಜಾರ್ಖಂಡ್​​ನ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನದ ಕಾರಣದಿಂದಾಗಿ ಇದನ್ನು ಮುಂದೂಡಲಾಗಿತ್ತು. ನಾಳಿನ ಪ್ರತಿಭಟನೆಯ ನಂತರ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 'ಇಂಡಿಯಾ' ಮೈತ್ರಿಕೂಟದ ಸಂಸದರಿಗಾಗಿ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಈ ಸಭೆಯಲ್ಲಿ, ಚುನಾವಣಾ ಅಕ್ರಮಗಳ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸಲು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 

Tags:    

Similar News