ಕೇರಳದ ಖ್ಯಾತ ಕವಿ ಮತ್ತು ಸಾಹಿತಿ ಪ್ರಭಾ ವರ್ಮ ಅವರು ʻರೌದ್ರ ಸಾತ್ವಿಕಂʼ ಕಾದಂಬರಿಗೆ ʻಸರಸ್ವತಿ ಸಮ್ಮಾನ್ 2023ʼ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಕೆ.ಕೆ. ಬಿರ್ಲಾ ಪ್ರತಿಷ್ಠಾನ 1991ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯನ್ನು ʻದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ಸಾಹಿತ್ಯ ಪ್ರಶಸ್ತಿʼ ಎಂದು ಗುರುತಿಸಲಾಗಿದೆ. ʼರೌದ್ರ ಸಾತ್ವಿಕಂʼ ಕೃತಿ 2022ರಲ್ಲಿ ಪ್ರಕಟಗೊಂಡಿತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರ್ಜನ್‌ಕುಮಾರ್ ಸಿಕ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಕೃತಿಯನ್ನು ಆಯ್ಕೆ ಮಾಡಿದೆ.
22 ಭಾಷೆಗಳ ಪುಸ್ತಕಗಳ ಪರಿಗಣನೆ: ʻ2013 ಮತ್ತು 2022 ರ ನಡುವೆ ಪ್ರಕಟವಾದ ಪುಸ್ತಕಗಳನ್ನು 22 ಭಾಷಾ ಸಮಿತಿಗಳು ಪರಿಗಣಿಸಿದ್ದು, ಐದು ಪ್ರಾದೇಶಿಕ ಸಮಿತಿಗಳಿಗೆ ತಲಾ ಒಂದು ಪುಸ್ತಕವನ್ನು ಶಿಫಾರಸು ಮಾಡಿದವು. ಅದರಲ್ಲಿ ಐದು ಪುಸ್ತಕಗಳನ್ನು ಪರಿಗಣಿಸಲಾಗಿದೆ. ಅವುಗಳೆಂದರೆ, ಸೈಯದ್ ಮೊಹಮ್ಮದ್ ಅಶ್ರಫ್ ಅವರ ಆಖ್ರಿ ಸವಾರಿಯಾನ್ (ಉರ್ದು ಕಾದಂಬರಿ), ನಾಗೇನ್ ಸೈಕಿಯಾ ಅವರ ಮಿತಾ ಭಾಸ್ ಸಮಗ್ರ (ಅಸ್ಸಾಮಿ ಕಾವ್ಯ), ಗಂಗಾಧರ್ ಹಂಸ್ದಾ ಅವರ ಪೋಸ್ರಾ (ಸಂತಾಲಿ ಕಾದಂಬರಿ), ಹರೀಶ್ ಮೀನಾಶ್ರು ಅವರ ಬನಾರಸ್ ಡೈರಿ (ಗುಜರಾತಿ ಕವನ), ಮತ್ತು ವರ್ಮ ಅವರ ರೌದ್ರ ಸಾತ್ವಿಕಂ ಎಂದು ಪ್ರತಿಷ್ಟಾನ ಹೇಳಿದೆ.
ಸಮಕಾಲೀನ ಮಲಯಾಳಂ ಸಾಹಿತ್ಯದ ಪ್ರಮುಖ ಧ್ವನಿಗಳಲ್ಲಿ ಒಂದಾದ ವರ್ಮ(64) ಅವರ ಕೃತಿಗಳು ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮವನ್ನು ಪ್ರತಿಬಿಂಬಿಸುತ್ತವೆ. ʻರೌದ್ರ ಸಾತ್ವಿಕಂʼ ಅಧಿಕಾರ ಮತ್ತು ರಾಜಕೀಯ, ವ್ಯಕ್ತಿ ಮತ್ತು ರಾಜ್ಯ, ಕಲೆ ಮತ್ತು ಅಧಿಕಾರದ ನಡುವಿನ ಸಂಘರ್ಷವನ್ನು ಅನನ್ಯ ರೀತಿಯಲ್ಲಿ ಶೋಧಿಸುತ್ತದೆ ಎಂದು ಸಮಿತಿ ಹೇಳಿದೆ.
70ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತ: ವರ್ಮಾ ಅವರಿಗೆ ರಾಷ್ಟ್ರೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರಜತ ಕಮಲ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ 70 ಕ್ಕೂ ಹೆಚ್ಚು ಪ್ರಶಸ್ತಿ ಸಂದಿದೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವರ್ಮಾ ಅವರನ್ನು ಅಭಿನಂದಿಸಿದ್ದಾರೆ. ʻಪ್ರಭಾ ವರ್ಮಾ ಅವರಿಗೆ ಹೃತ್ಪೂರ್ವಕ ಅಭಿನಂದನೆ. ಅವರ ಕೃತಿಗಳು ಮಲಯಾಳಂ ಮತ್ತು ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸುವುದನ್ನು ಮುಂದುವರಿಸಲಿʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಅಭಿನಂದನೆ ಸಲ್ಲಿಸಿದ್ದು, ಇದು ರಾಜ್ಯಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ. ವರ್ಮಾ ಅವರು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ.