ಜಿ20 ಶೃಂಗಸಭೆ: ಜಾಗತಿಕ ಅಭಿವೃದ್ಧಿಯ ಮಾನದಂಡಗಳ ಬದಲಾವಣೆಗೆ ಪ್ರಧಾನಿ ಮೋದಿ ಕರೆ

Update: 2025-11-23 00:30 GMT
Click the Play button to listen to article

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳನ್ನು ಮೆಟ್ಟಿ ನಿಲ್ಲಲು ಹಳೆಯ ಅಭಿವೃದ್ಧಿ ಮಾದರಿಗಳು ಸಾಲದು, ನಮಗೆ ಹೊಸ ಆಲೋಚನೆ ಮತ್ತು ಮಾನದಂಡಗಳ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಆರಂಭಿಕ ಅಧಿವೇಶನದಲ್ಲಿ ಮಾತನಾಡಿದ ಅವರು, ಜಾಗತಿಕ ಅಭಿವೃದ್ಧಿಯ ಪಥವನ್ನು ಮರು ವ್ಯಾಖ್ಯಾನಿಸುವ ಸಮಯ ಬಂದಿದೆ ಎಂದು ಪ್ರತಿಪಾದಿಸಿದರು.

ಶನಿವಾರ (ನವೆಂಬರ್ 22) ನಡೆದ "ಯಾರನ್ನೂ ಹಿಂದೆ ಬಿಡದ ಅಂತರ್ಗತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ" ಕುರಿತ ಅಧಿವೇಶನದಲ್ಲಿ ಮಾತನಾಡಿದ ಮೋದಿ, ಭಾರತದ "ಏಕಾತ್ಮ ಮಾನವತಾವಾದ" ತತ್ವವು ಇಂದಿನ ಜಗತ್ತಿಗೆ ದಾರಿದೀಪವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.

ಮಾದಕವಸ್ತು-ಭಯೋತ್ಪಾದನೆ ಜಾಲದ ವಿರುದ್ಧ ಜಿ20 ಸಮರ

ವಿಶ್ವದಾದ್ಯಂತ ಯುವಜನತೆಯನ್ನು ಕಾಡುತ್ತಿರುವ ಮತ್ತು ಭದ್ರತೆಗೆ ಸವಾಲಾಗಿರುವ ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯ ನಂಟನ್ನು ಮುರಿಯಲು ಮೋದಿ ಹೊಸ ಪ್ರಸ್ತಾಪ ಮುಂದಿಟ್ಟರು. "ಫೆಂಟನಿಲ್‌ನಂತಹ ಅತ್ಯಂತ ಅಪಾಯಕಾರಿ ಮಾದಕ ವಸ್ತುಗಳ ಹರಡುವಿಕೆ ತಡೆಯಲು ಮತ್ತು ಮಾದಕವಸ್ತು-ಭಯೋತ್ಪಾದನೆ ಆರ್ಥಿಕತೆಯನ್ನು ಬುಡಮೇಲು ಮಾಡಲು 'ಜಿ20 ಮಾದಕವಸ್ತು-ಭಯೋತ್ಪಾದನೆ ವಿರೋಧಿ ಉಪಕ್ರಮ' ಜಾರಿಗೆ ತರಬೇಕು," ಎಂದು ಅವರು ಕರೆ ನೀಡಿದರು.

ಸಾಂಪ್ರದಾಯಿಕ ಜ್ಞಾನದ ವಿಶ್ವಕೋಶ ಪರಿಸರ ಸ್ನೇಹಿ ಮತ್ತು ಸುಸ್ಥಿರ ಜೀವನಶೈಲಿಗೆ ಉತ್ತೇಜನ ನೀಡಲು, ಜಗತ್ತಿನಾದ್ಯಂತ ಇರುವ ಸಾಂಪ್ರದಾಯಿಕ ಜ್ಞಾನವನ್ನು ಒಂದೇ ಕಡೆ ಕಾಯ್ದಿರಿಸುವ "ಜಿ20 ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ" ಸ್ಥಾಪನೆಗೆ ಪ್ರಧಾನಿ ಸಲಹೆ ನೀಡಿದರು. "ಭಾರತವು ಈ ವಿಷಯದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ನಮ್ಮ ಪೂರ್ವಜರ ಸಾಮೂಹಿಕ ಜ್ಞಾನವು ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಬಳಕೆಯಾಗಬೇಕು," ಎಂದು ಅವರು ಟ್ವೀಟ್ (X) ಮೂಲಕವೂ ತಿಳಿಸಿದ್ದಾರೆ.

ಆಫ್ರಿಕಾ ಕೌಶಲ್ಯ ಅಭಿವೃದ್ಧಿಗೆ ಬಲ

ಆಫ್ರಿಕಾದ ಪ್ರಗತಿಯಿಲ್ಲದೆ ಜಾಗತಿಕ ಪ್ರಗತಿ ಅಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿದ ಮೋದಿ, "ಜಿ20-ಆಫ್ರಿಕಾ ಸ್ಕಿಲ್ಸ್ ಮಲ್ಟಿಪ್ಲೈಯರ್ ಇನಿಶಿಯೇಟಿವ್" ಅನ್ನು ಘೋಷಿಸಿದರು. ಮುಂದಿನ 10 ವರ್ಷಗಳಲ್ಲಿ ಆಫ್ರಿಕಾದಲ್ಲಿ 10 ಲಕ್ಷ (1 ಮಿಲಿಯನ್) ಪ್ರಮಾಣೀಕೃತ ತರಬೇತುದಾರರನ್ನು ರೂಪಿಸುವುದು ಈ ಯೋಜನೆಯ ಗುರಿಯಾಗಿದೆ. "ಭಾರತದ ಅಧ್ಯಕ್ಷತೆಯಲ್ಲೇ ಆಫ್ರಿಕನ್ ಯೂನಿಯನ್ ಜಿ20 ಕಾಯಂ ಸದಸ್ಯತ್ವ ಪಡೆದಿದ್ದು ನಮಗೆ ಹೆಮ್ಮೆಯ ವಿಷಯ," ಎಂದು ಅವರು ಸ್ಮರಿಸಿದರು.

ಜಾಗತಿಕ ಆರೋಗ್ಯ ಪ್ರತಿಕ್ರಿಯೆ ತಂಡ

ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ತುರ್ತು ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು "ಜಿ20 ಜಾಗತಿಕ ಆರೋಗ್ಯ ಪ್ರತಿಕ್ರಿಯೆ ತಂಡ" ರಚನೆಗೂ ಅವರು ಪ್ರಸ್ತಾಪಿಸಿದರು. ಜಿ20 ರಾಷ್ಟ್ರಗಳ ನುರಿತ ವೈದ್ಯಕೀಯ ತಜ್ಞರನ್ನೊಳಗೊಂಡ ಈ ತಂಡವು ಯಾವುದೇ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಲು ಸದಾ ಸಿದ್ಧರಿರಬೇಕು ಎಂಬುದು ಅವರ ಆಶಯ. 

Tags:    

Similar News