ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್
ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ, ಸಂಕಷ್ಟದಲ್ಲಿ ಮಾಜಿ ಸಿಎಂ ಯಡಿಯೂರಪ್ಪ. ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಹಾಯ ಪಡೆಯಲು ಫೆಬ್ರವರಿ 2 ರಂದು ಅವರನ್ನು ಭೇಟಿ ಮಾಡಿದ್ದಾಗ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ.;
ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ (ಮಾ.14) ತಡ ರಾತ್ರಿ ಮಹಿಳೆಯೊಬ್ಬರು ನೀಡಿದ ದೂಡಿನ ಮೇಲೆ ಪ್ರಕರಣ ದಾಖಲಿಸಿ, ಎಫ್ ಐಆರ್ ಮಾಡಿದ್ದಾರೆ.
ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಹಾಯ ಪಡೆಯಲು ಫೆಬ್ರವರಿ 2 ರಂದು ಅವರನ್ನು ಭೇಟಿ ಮಾಡಿದ್ದಾಗ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸದಾಶಿವನಗರ ಪೊಲೀಸರು ಬಿಎಸ್ ಯಡಿಯೂರಪ್ಪ (81) ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354 ಎ ಅಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಫೆಬ್ರವರಿ 2, 2024 ರಂದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಯ ಸಹಾಯ ಪಡೆಯಲು ತಾಯಿ ಮತ್ತು ಮಗಳು ಹೋಗಿದ್ದಾಗ ಈ ಲೈಂಗಿಕ ದೌರ್ಜನ್ಯದ ಘಟನೆ ಸಂಭವಿಸಿದೆ.
ದೂರುದಾರರಿಂದ ಘಟನೆಯ ವಿವರ ಪಡೆಯುತ್ತಿರುವ ಸಿಐಡಿ ಅಧಿಕಾರಿಗಳು
ಸಿಐಡಿ ಅಧಿಕಾರಿಗಳು ಶುಕ್ರವಾರ ಸಂಜೆ (ಮಾ.೧೫) ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಕರೆಯಿಸಿಕೊಂಡು ಘಟನೆಯ ವಿವರವನ್ನು ಸಂಗ್ರಹಿಸಿದ್ದಾರೆ. ಫೆ.೨ರಿಂದ ಈ ವರೆಗಿನ ಘಟನೆಗಳ ಕುರಿತು ವಿವರಣೆಯನ್ನು ಪಡೆಯುತ್ತಿದ್ದಾರೆ. ಆಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ: ಕೆಎಸ್ ಈಶ್ವರಪ್ಪ
ಯಡಿಯೂರಪ್ಪ ಈ ರೀತಿಯ ಕೆಲಸ ಮಾಡುವಂತಹ ವ್ಯಕ್ತಿ ಅಲ್ಲ, ಅವರ ವಿರುದ್ಧ ಷಡ್ಯಂತ್ರ ನಡೆದಿದೆ. ದೂರು ಕೊಟ್ಟಿರುವವರು ಇದೇ ರೀತಿ ಹಿಂದೆ ೫೩ ದೂರು ಕೊಟ್ಟಿದ್ದಾರೆ. ಹಾಗಾಗಿ ದೂರು ಕೊಡುವದೇ ಅವರಿಗೆ ಹವ್ಯಾಸ ಆಗಿದೆ, ಅವರನ್ನು ಇದೀಗ ಬಳಿಸಿಕೊಂಡು ಯಡಿಯೂರಪ್ಪನವರ ವಿರುದ್ಧವೂ ದೂರು ಕೊಡಿಸಿದ್ದಾರೆ. ಈ ಷಡ್ಯಂತ್ರದಿಂದ ಯಡಿಯೂರಪ್ಪನವರು ಹೊರಗೆ ಬರುತ್ತಾರೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಸಿಐಡಿ ಅಂಗಳಕ್ಕೆ
ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ (CID) ವರ್ಗಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್ ಅವರು, ಯಡಿಯೂರಪ್ಪ ವಿರುದ್ಧದದ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶವನ್ನೂ ಹೊರಡಿಸಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದ ಗೃಹ ಸಚಿವ ಪರಮೇಶ್ವರ್
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದು, ಪ್ರಕರಣದ ತನಿಖೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಪ್ರವಾಸದಲ್ಲಿದ್ದು, ಅವರು ಕೂಡ ಪ್ರಕರಣದ ಕುರಿತು ಗೃಹಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ʼಕೆಲವರು ಆ ಮಹಿಳೆ ಮಾನಸಿಕ ಅಸ್ವಸ್ಥೆ ಎನ್ನುತ್ತಾರೆʼ: ಗೃಹಸಚಿವ ಪರಮೇಶ್ವರ್
ʼʼಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ಇದನ್ನು ಎಲ್ಲ ದೃಷ್ಟಿಕೋನದಲ್ಲೂ ತನಿಖೆ ನಡೆಸುತ್ತೇವೆʼʼ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಗೃಹ ಸಚಿವರೇ ದೂರುದಾರಳನ್ನು ಮಾನಸಿಕ ಅಸ್ವಸ್ಥೆ ಎಂದು ಹೇಳಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಪ್ರಕರಣದ ಕುರಿತು ಮಹತ್ವದ ಹೇಳಿಕೆ ಕೊಟ್ಟ ಯಡಿಯೂರಪ್ಪ
ʼʼಒಂದೆರೆಡು ತಿಂಗಳ ಹಿಂದೆ ತಾಯಿ- ಮಗಳು ಅನ್ಯಾಯವಾಗಿದೆ ಎಂದು ನಮ್ಮ ಮನೆಗೆ ಅನೇಕ ಬಾರಿ ಬಂದಿದ್ದರು. ನಾವು ಹತ್ತಿರ ಸೇರಿಸಿರಲಿಲ್ಲ. ಆದರೆ ಅದೊಂದು ಸಲ ಅವರು ಕಣ್ಣೀರು ಹಾಕುತ್ತಿದ್ದಾರೆಂದು ತಾಯಿ ಹಾಗೂ ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಸಮಸ್ಯೆ ಏನು ಎಂದು ಕೇಳಿದ್ದೆ. ನನಗೆ ತುಂಬಾ ಅನ್ಯಾಯ ಆಗಿದೆʼʼ ಎಂದು ಹೇಳಿದ್ದರು.
ʼʼಅವರಿಗೆ ಕಷ್ಟ ಇದೆ ಎಂದು ಹಣವನ್ನು ಕೊಟ್ಟು ಕಳುಹಿಸಿದ್ದೇನೆ. ಇದಾದ ಬಳಿಕ ನಾನು ಪೊಲೀಸ್ ಕಮಿಷನರ್ಗೆ ಕರೆ ಮಾಡಿ ಇವರಿಗೆ ಅನ್ಯಾಯ ಆಗಿದೆ ಹೀಗಾಗಿ ನ್ಯಾಯ ಒದಗಿಸಿ ಎಂದು ದಯಾನಂದ ಅವರಿಗೆ ತಿಳಿಸಿ ತಾಯಿ ಹಾಗೂ ಮಗಳು ಇಬ್ಬರನ್ನೂ ಅಲ್ಲಿಗೆ ಕಳುಹಿಸಿಕೊಟ್ಟೆ. ಅದಾದ ಬಳಿಕ ಅಲ್ಲೇ ನನ್ನ ಮೇಲೂ ಏನೇನೋ ಮಾತನಾಡಲು ಶುರು ಮಾಡಿದರುʼʼ ಎಂದರು.
ʼʼಹೀಗಿರುವಾಗ ಇದೇನು ಸರಿ ಕಾಣಿಸ್ತಿಲ್ಲ, ಆರೋಗ್ಯ ಸರಿ ಇಲ್ಲದಂತೆ ಕಾಣಿಸಿತು. ಹೆಚ್ಚು ಮಾತನಾಡಿದರೆ ಉಪಯೋಗವಿಲ್ಲವೆಂದು ನಾನವರನ್ನು ಪೊಲೀಸ್ ಕಮಿಷನರ್ ಬಳಿ ಕಳುಹಿಸಿದೆ. ಅವರು ಈ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೀಗ ಇದನ್ನು ಬೇರೆ ರೀತಿಯಾಗಿ ತಿರುಗಿಸಿ ಎಫ್ಐಆರ್ ಮಾಡಿದ್ದಾರೆಂದು ತಿಳಿದು ಬಂತು. ಅದನ್ನು ಕಾನೂನು ಅನ್ವಯ ಎದುರಿಸ್ತೀನಿʼʼ ಎಂದು ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ಪೊಕ್ಸೋ ಪ್ರಕರಣ: ಗೃಹ ಸಚಿವ ಪರಮೇಶ್ವರ್ ಏನಂದ್ರು?
ಬಿಎಸ್ ಯಡಿಯೂರಪ್ಪ ವಿರುದ್ಧ ಬಂದಿರುವ ದೂರನ್ನು ತನಿಖೆ ಮಾಡುತ್ತಿದ್ದೇವೆ. ರಾತ್ರಿ 10 ಗಂಟೆಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಬಂದು ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ. ತನಿಖೆ ಆಗುವ ತನಕ ನಾವು ಏನನ್ನೂ ಹೇಳಲಿಕ್ಕೆ ಆಗುವುದಿಲ್ಲ. ಕೆಲವರು ದೂರು ನೀಡಿದ ಮಹಿಳೆಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ. ಆ ಮಹಿಳೆ ದೂರನ್ನು ಕೈಯಲ್ಲಿ ಬರೆದಿರುವುದಲ್ಲ, ಟೈಪ್ಡ್ ಕಾಪಿ ಕೊಟ್ಟಿದ್ದಾರೆ ಎಂದು ನಮ್ಮ ಇಲಾಖೆಯವರು ಹೇಳಿರುವುದಾಗಿ ತಿಳಿಸಿದರು.
ಇದು ಒಬ್ಬ ಮಾಜಿ ಸಿಎಂ ಕುರಿತು ಓರ್ವ ಮಹಿಳೆ ಮಾಡಿರುವ ಆಪಾದನೆ ಆಗಿರುವುದರಿಂದ ಈ ಬಗ್ಗೆ ನಾವು ಭಾರಿ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ದೂರು ನೀಡಿದ ಮಹಿಳೆಗೆ ರಕ್ಷಣೆಯ ಅಗತ್ಯ ಇದ್ದರೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆಯನ್ನು ನೀಡಲಿದೆ. ಯಾರಾದರೂ ದೂರು ಕೊಟ್ಟ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಸತ್ಯಾಸತ್ಯತೆ ಪರಿಶೀಲನೆ ಮಾಡಿ ಆರೋಪ ಸತ್ಯ ಎಂದು ಸಾಬೀತಾದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆಯಲ್ಲಿ ಇದು ದುರುದ್ದೇಶಪೂರ್ವಕವೋ ಅಲ್ಲವೋ ಎಂದು ತಿಳಿದು ಬರುತ್ತದೆ. ನಮಗೆ ಈ ಪ್ರಕರಣದಲ್ಲಿ ಯಾವುದೇ ದುರುದ್ದೇಶ ಇಲ್ಲ. ಮಹಿಳೆ ಬಂದು ದೂರು ನೀಡಿದ್ದಾರೆ. ಓರ್ವ ಮಹಿಳೆ ಬಂದು ದೂರು ನೀಡುವಾಗ ಅದನ್ನು ಸ್ವೀಕರಿಸಬೇಕಿದೆ. ಹಾಗಾಗಿ, ಕಾನೂನು ಪ್ರಕಾರವಾಗಿ ದೂರು ಸ್ವೀಕರಿಸಿದ್ದೇವೆ ಎಂದರು.