ಮೊದಲ ನೂರು ದಿನ, ನಂತರದ ಐದು ವರ್ಷಗಳ ಮಾರ್ಗಸೂಚಿ ರೂಪಿಸಲು ಪ್ರಧಾನಿ ಸೂಚನೆ
ಹೊಸದಿಲ್ಲಿ,ಮಾ.17- ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ನಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದ ಮೊದಲ 100 ದಿನಗಳು ಮತ್ತು ನಂತರದ ಐದು ವರ್ಷಗಳ ಯೋಜನೆಗಳನ್ನು ವಿವರಿಸುವ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಸಚಿವರಿಗೆ ಸೂಚಿಸಿದ್ದಾರೆ.
ಭಾನುವಾರ ನಡೆದ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ, ಮೊದಲ 100 ದಿನಗಳು ಮತ್ತು ಮುಂದಿನ ಐದು ವರ್ಷಗಳ ಕಾರ್ಯಸೂಚಿಯನ್ನು ಹೇಗೆ ಉತ್ತಮವಾಗಿ ಕಾರ್ಯಗತಗೊಳಿಸಬಹುದು ಎಂಬ ಕುರಿತು ಆಯಾ ಸಚಿವಾಲಯಗಳ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲು ಸೂಚನೆ ನೀಡಿದರು.
ಚುನಾವಣೆ ಆಯೋಗದ ಶಿಫಾರಸನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಲಾಯಿತು. 102 ಸ್ಥಾನಗಳಿಗೆ ಏಪ್ರಿಲ್ 19 ರ ಮೊದಲ ಹಂತದ ಚುನಾವಣೆಗೆ ಮಾರ್ಚ್ 20 ರಂದು ಮೊದಲ ಅಧಿಸೂಚನೆ ಹೊರಡಿಸಲಾಗುವುದು. ಇದರೊಂದಿಗೆ ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಲಿದೆ.
ವಿಕಸಿತ ಭಾರತ: ಪ್ರಧಾನಿ ಮತ್ತು ಮಂತ್ರಿಗಳ ಮಂಡಳಿಯು ಮಾರ್ಚ್ 3 ರಂದು 'ವಿಕಸಿತ ಭಾರತ 2047'ಕ್ಕೆ ಮುನ್ನೋಟ ದಾಖಲೆ ಮತ್ತು ಮುಂದಿನ ಐದು ವರ್ಷಗಳ ವಿವರವಾದ ಕ್ರಿಯಾಯೋಜನೆ ಬಗ್ಗೆ ಚರ್ಚೆ ನಡೆಸಿತ್ತು. ಹೊಸ ಸರ್ಕಾರ ರಚನೆಯಾದ ನಂತರ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಚರ್ಚಿಸಲಾಯಿತು.
'ವಿಕಸಿತ ಭಾರತ' ಮಾರ್ಗಸೂಚಿಗೆ ಎರಡು ವರ್ಷಗಳ ಸಿದ್ಧತೆ ನಡೆದಿದೆ ಮತ್ತು ಎಲ್ಲಾ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಸಂಸ್ಥೆಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ಒಳಗೊಂಡಿದೆ. ನಾಗರಿಕ ಸಮಾಜ, ವೈಜ್ಞಾನಿಕ ಸಂಸ್ಥೆಗಳು ಮತ್ತು ಯುವಕರ ಸಜ್ಜುಗೊಳಿಸುವಿಕೆ ಇದರ ಉದ್ದೇಶ.
ʻಇದಕ್ಕಾಗಿ ವಿವಿಧ ಹಂತಳಲ್ಲಿ 2,700 ಕ್ಕೂ ಹೆಚ್ಚು ಸಭೆ, ಕಾರ್ಯಾಗಾರ ಮತ್ತು ಚರ್ಚಾಕೂಟ ನಡೆಸಲಾಗಿದೆ ಮತ್ತು 20 ಲಕ್ಷಕ್ಕೂ ಹೆಚ್ಚು ಯುವಜನರ ಸಲಹೆಗಳನ್ನು ಸ್ವೀಕರಿಸಲಾಗಿದೆʼ ಎಂದು ಅಧಿಕಾರಿಯೊಬ್ಬರು ತಿಳಿಸಿದರು.