ನರೇಗಾ: ಕನಿಷ್ಠ ವೇತನ ನೀಡಲು ಸಂಸದೀಯ ಸ್ಥಾಯಿ ಸಮಿತಿ ಸಲಹೆ

Update: 2024-02-23 09:02 GMT

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್‌, ನರೇಗಾ ) ಕಳಪೆಯಾಗಿ ಅನುಷ್ಠಾನಗೊಳ್ಳುತ್ತಿದೆ. ಕಾರ್ಯಕ್ರಮದಡಿ ಗೌರವಾನ್ವಿತ ವೇತನವನ್ನುಖಾತ್ರಿಪಡಿಸಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಸದೀಯ ಸ್ಥಾಯಿ ಸಮಿತಿ ಸೂಚಿಸಿದೆ. 

ನರೇಗಾ ಕೃಷಿ ಕುಟುಂಬಗಳಿಗೆ ಸುರಕ್ಷತಾ ಕವಚವಾಗಿರುವ ಯುಪಿಎ ಅವಧಿಯ ಯೋಜನೆ. ಇಂಥ ಕುಟುಂಬಗಳಿಗೆ ಪ್ರತಿ ವರ್ಷ 100 ದಿನ ಗಳ ವೇತನವನ್ನು ಖಾತರಿಪಡಿಸುತ್ತದೆ. ಮೊದಲು ಕಾರ್ಯಕ್ರಮವನ್ನು ನಿರ್ಲಕ್ಷಿಸಿದ್ದ ಬಿಜೆಪಿ ಸರ್ಕಾರ, ತರುವಾಯ ಉದ್ಯೋಗ ಖಾತ್ರಿ ಯೋಜನೆಯ ಉಪಯುಕ್ತತೆಯನ್ನು ಅರಿತುಕೊಂಡು, ಕೇಂದ್ರ ಬಜೆಟ್‌ನಲ್ಲಿ ಗಣನೀಯ ಮೊತ್ತವನ್ನು ನೀಡಲು ಪ್ರಾರಂಭಿಸಿತು. 

2023-24ರ ಪರಿಷ್ಕೃತ ಅಂದಾಜಿನಲ್ಲಿ ಹೆಚ್ಚುವರಿ 26,000 ಕೋಟಿ ರೂ. ನೀಡುವ ಮೂಲಕ 86,000 ಕೋಟಿ ರೂ. ನಿಗದಿಗೊಳಿಸಿದೆ.

ಅಕ್ರಮಗಳ ಮಹಾಪೂರ: 

ಆದರೆ ನರೇಗಾ ಅಕ್ರಮಗಳಿಂದ ಹಾನಿಗೀಡಾಗಿದೆ. ಉದಾಹರಣೆಗೆ, ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಕೊಡಬೇಕು ಎಂದಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇವಲ ಶೇ. 2 ರಷ್ಟು ಕುಟುಂಬಗಳಿಗೆ ಮಾತ್ರ 100 ದಿನ ಉದ್ಯೋಗ ಲಭ್ಯವಾಗಿದೆ. ವಾಸ್ತವವಾಗಿ, 2023-24 ರಲ್ಲಿ ಅತ್ಯಂತ ಕಡಿಮೆ ಕುಟುಂಬಗಳು ಅಂದರೆ, 26.32 ಲಕ್ಷ ಕುಟುಂಬಗಳು ಮಾತ್ರ 100 ದಿನ ಉದ್ಯೋಗ ಪಡೆದುಕೊಂಡಿವೆ. ಉಳಿದವರಿಗೆ ವರ್ಷದಲ್ಲಿ ಕೇವಲ 50 ದಿನ ಕೂಡ ಕೆಲಸ ಸಿಕ್ಕಿಲ್ಲ. 

ಹಿಂದಿನ ವರ್ಷಗಳಲ್ಲಿ ಕೂಡ 100 ದಿನಗಳ ಕೆಲಸ ಸಿಕ್ಕಿದ ಕುಟುಂಬಗಳ ಶೇಕಡಾವಾರು ಪ್ರಮಾಣ ಕಡಿಮೆ ಇದೆ. 2022-23 ರಲ್ಲಿ ಕೇವಲ ಶೇ. 6 ಮತ್ತು 2021-22 ರಲ್ಲಿ ಶೇ. 8 ಕುಟುಂಬಗಳು ಮಾತ್ರ ಪೂರ್ಣಾವಧಿ ಕೆಲಸ ಪಡೆದುಕೊಂಡವು. ಬಹುಪಾಲು ಕುಟುಂಬಗಳಿಗೆ 100 ದಿನಗಳ ಕೆಲಸ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. 

ಕೆಲಸ ಕೇಳಿದ 15 ದಿನಗಳ ಬಳಿಕ ನೀಡದಿದ್ದರೆ, ನಿರುದ್ಯೋಗ ಭತ್ಯೆ ನೀಡಬೇಕೆಂಬ ಎರಡನೇ ನಿಬಂಧನೆ ಕೂಡ ಪಾಲನೆಯಾಗುತ್ತಿಲ್ಲ. 2023-24ರಲ್ಲಿ ನಿರುದ್ಯೋಗ ಭತ್ಯೆಗೆ ಅರ್ಹರಾದ 278 ಕುಟುಂಬಗಳಲ್ಲಿ ಕೇವಲ 20ಕ್ಕೆ ಮಾತ್ರ ಭತ್ಯೆ ಕೊಡಲಾಗಿದೆ.

ಅಸಮರ್ಪಕ ವೇತನ: ನರೇಗಾ ಅಡಿಯಲ್ಲಿ ನೀಡುವ ವೇತನವು ರಾಜ್ಯ ಸರ್ಕಾರಗಳ ಕನಿಷ್ಠ ವೇತನಕ್ಕಿಂತ ಕಡಿಮೆ ಇದೆ ಮತ್ತು ಕೇಂದ್ರವು ಯೋಜನೆಗೆ ಮೀಸಲಿಟ್ಟ ಹಣವನ್ನು ರಾಜ್ಯಗಳಿಗೆ ಪಾವತಿಸುವಲ್ಲಿ ವಿಳಂಬವಾಗುತ್ತಿದೆ. ವಿಳಂಬಕ್ಕೆ ಪರಿಹಾರ ಪಾವತಿಸುವುದು ಕೂಡ ಅಪರೂಪ.

ಈ ಸಮಸ್ಯೆಗಳನ್ನು ಪ್ರಸ್ತಾಪಿಸಿರುವ ಸಂಸದೀಯ ಸ್ಥಾಯಿ ಸಮಿತಿ, ಗ್ರಾಮೀಣ ಕುಟುಂಬಗಳ ಬದುಕಿನಲ್ಲಿ ಗಮನಾರ್ಹ ಬದಲಾವಣೆಗೆ ಅಗತ್ಯವಿರುವಷ್ಟು ವೇತನ ನಿಗದಿಪಡಿಸಬೇಕೆಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚಿಸಿದೆ.

ನರೇಗಾ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗಿಂತ ಮೇಸ್ತ್ರಿಗಳು ಮತ್ತು ಕೃಷಿ ಕಾರ್ಮಿಕರು ಹೆಚ್ಚು ದಿನಗೂಲಿ ಗಳಿಸುತ್ತಾರೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಉದಾಹರಣೆ ಗಮನಿಸಿ: 2023-24ರಲ್ಲಿ ನರೇಗಾ ಅಡಿಯಲ್ಲಿ 221 ರೂ.ದಿನಗೂಲಿ ನೀಡಿತು. ಆದರೆ, ನಿಗದಿಪಡಿಸಿದ ಕನಿಷ್ಠ ವೇತನ 375 ರೂ.ಆಗಿರಬೇಕು ಎಂದು ಸರ್ಕಾರ ನೇಮಿಸಿದ ಸಮಿತಿ ಈ ಹಿಂದೆ ಹೇಳಿತ್ತು. 

ಹರಿಯಾಣದಂತಹ ಕೆಲವು ರಾಜ್ಯಗಳು ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ವೇತನ ಮಧ್ಯಪ್ರದೇಶಕ್ಕಿಂತ ಹೆಚ್ಚಿದೆ. ಆದರೆ, ಯಾವ ರಾಜ್ಯವೂ ಇಲ್ಲಿಯವರೆಗೆ 375 ರೂ. ವೇತನ ನೀಡಿಲ್ಲ.

ಮೂಲ ವರ್ಷದ ಪರಿಷ್ಕರಣೆ: ವೇತನ ಸೂಚ್ಯಂಕದ ಮೂಲ ದರವನ್ನು ಲೆಕ್ಕಾಚಾರ ಮಾಡಲು 2009-10 ಅನ್ನು ಮೂಲ ವರ್ಷವಾಗಿ ಬಳಸುವುದು ಸರಿಯಲ್ಲ ಮತ್ತು ಅದನ್ನು 2014 ಕ್ಕೆ ಪರಿಷ್ಕರಿಸಬೇಕು ಎಂದು ಸಂಸದೀಯ ಸಮಿತಿ ಸೂಚಿಸಿದೆ. 

ಮಜ್ದೂರ್‌ ಕಿಸಾನ್‌ ಶಕ್ತಿ ಸಂಘಟನೆ(ಎಂಕೆಎಸ್‌ಎಸ್‌)ನ ನಿಖಿಲ್ ಡೇ, ನರೇಗಾಕ್ಕೆ ಸಾಕಷ್ಟು ಬಜೆಟ್ ಅನುದಾನ ನೀಡಬೇಕು ಮತ್ತು ವೇತನವನ್ನು ಹೆಚ್ಚಿಸಬೇಕು ಎನ್ನುತ್ತಾರೆ. 2018 ರಿಂದ 2023 ರ ಅವಧಿಯಲ್ಲಿ ಕೆಲವು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ನಿರುದ್ಯೋಗ ಭತ್ಯೆ ನೀಡಿಲ್ಲ ಎಂಬುದನ್ನು ಸಂಸದೀಯ ಸಮಿತಿ ಗಮನಿಸಿದೆ. ಉದ್ಯೋಗ ಒದಗಿಸದವರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವುದು ಅಗತ್ಯ. ಈಸಂಬಂಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಉನ್ನತ ಮಟ್ಟದಲ್ಲಿ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದೆ. 

ಆಧಾರ್ ತೊಂದರೆ: ಕಳೆದ ವರ್ಷ ಸರ್ಕಾರ ನರೇಗಾ ಅಡಿಯಲ್ಲಿ ಪಾವತಿ ಸ್ವೀಕರಿಸಲು ಆಧಾರ್ ಕಾರ್ಡ್‌ಗಳ ನೋಂದಣಿಯನ್ನು ಕಡ್ಡಾಯಗೊಳಿಸಿತು. ಇದರಿಂದ ಕೆಲಸದ ಅಗತ್ಯವಿರುವ ಕುಟುಂಬಗಳಿಗೆ ತೊಂದರೆಯಾಗಿದೆ. ಯೋಜನೆಯಡಿ ನೋಂದಾಯಿಸಿದ ಕುಟುಂಬಗಳಿಗಿಂತ ಕೆಲಸದ ಬೇಡಿಕೆ ಹೆಚ್ಚು ಇದೆ ಎಂದು ಕಾರ್ಯಕರ್ತರು ಗಮನ ಸೆಳೆದಿದ್ದಾರೆ. ಆದರೆ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ(ಎಬಿಪಿಎಸ್)ಯಿಂದ ಆಧಾರ್‌ ನಲ್ಲಿರುವ ವ್ಯತ್ಯಯಗಳಿಂದ ಅರ್ಹ ಕುಟುಂಬಗಳನ್ನುತೆಗೆದುಹಾಕಲಾಗಿದೆ. ನರೇಗಾ ದತ್ತಾಂಶ ಮತ್ತು ಎಬಿಪಿಎಸ್‌ ದತ್ತಾಂಶದಲ್ಲಿ ಹೊಂದಾಣಿಕೆಯಿಲ್ಲದೆ ಇರುವುದರಿಂದ, 14 ಕೋಟಿಗೂ ಹೆಚ್ಚು ನರೇಗಾ ಜಾಬ್ ಕಾರ್ಡ್ ಹೊಂದಿರುವವರು ಆಧಾರ್‌ ಜೋಡಣೆ ಮಾಡಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಒಪ್ಪಿಕೊಂಡಿದೆ. ಆಧಾರ್‌ ಹೊರತಾದ ಮಾರ್ಗವನ್ನು ಬಳಸುವ ಬಗ್ಗೆ ಸಂಸದೀಯ ಸಮಿತಿಯು ಹೇಳದೆ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ.

Similar News