ತೆಲಂಗಾಣದಲ್ಲಿ ಟ್ರಕ್-ಬಸ್ ಮಧ್ಯೆ ಭೀಕರ ಅಪಘಾತ; 24 ಮಂದಿ ಧಾರುಣ ಸಾವು
ಗಾಯಾಳುಗಳನ್ನು ತಕ್ಷಣ ಹೈದರಾಬಾದ್‌ಗೆ ಸ್ಥಳಾಂತರಿಸಿ, ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಚೆವೆಲ್ಲಾ ಸಮೀಪದ ಮಿರ್ಜಗುಡದಲ್ಲಿ ಸೋಮವಾರ ಮುಂಜಾನೆ ಜಲ್ಲಿಕಲ್ಲು ತುಂಬಿದ್ದ ಟ್ರಕ್ ಹಾಗೂ ಟಿಜಿಎಸ್‌ಆರ್‌ಟಿಸಿ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿ 24 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಟಿಜಿಎಸ್‌ಆರ್‌ಟಿಸಿ ಬಸ್ ತಂದೂರಿನಿಂದ ಚೆವೆಲ್ಲಾಗೆ ಹೊರಟಿತ್ತು. ಈ ವೇಳೆ ಜಲ್ಲಿಕಲ್ಲು ತುಂಬಿದ್ದ ಟ್ರಕ್, ಬಸ್ ಮಧ್ಯೆ ಅಪಘಾತ ಸಂಭವಿಸಿದ್ದು, ಟ್ರಕ್ ಚಾಲಕ ಸೇರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 24 ಮಂದಿ ಮೃತಪಟ್ಟಿದ್ದಾರೆ ಎಂದು ಚೆವೆಲ್ಲಾ ಎಸಿಪಿ ಬಿ.ಕಿಶನ್ ದೃಢಪಡಿಸಿದ್ದಾರೆ.
ದುರ್ಘಟನೆ ಸಮಯದಲ್ಲಿ ಆರ್ ಟಿಸಿ ಬಸ್ ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಮೃತದೇಹಗಳು ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಘಟನೆ ಕುರಿತಂತೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಿ ಅಗತ್ಯ ರಕ್ಷಣಾ ಹಾಗೂ ಪರಿಹಾರ ಕಾರ್ಯ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಗಾಯಾಳುಗಳನ್ನು ತಕ್ಷಣ ಹೈದರಾಬಾದ್‌ಗೆ ಸ್ಥಳಾಂತರಿಸಿ, ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
"ಟ್ರಕ್ ಚಾಲಕ ಟಿಜಿಎಸ್‌ಆರ್‌ಟಿಸಿ ಬಸ್ಸನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆಯೇ ಅಥವಾ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುತ್ತಿದ್ದನೇ ಎಂಬುದನ್ನು ಪರಿಶೀಲಿಸಬೇಕಾಗಿದೆ," ಎಂದು ಡಿಸಿಪಿ ರಾಜೇಂದ್ರನಗರ ಡಿಸಿಪಿ ಯೋಗೇಶ್ ಗೌತಮ್ ಅವರು ಹೇಳಿದರು.
ಅಪಘಾತದ ಕುರಿತು ಮಾಹಿತಿ ನೀಡಿರುವ ಚೆವೆಲ್ಲಾ ಪೊಲೀಸರು, "ಖಾನಾಪುರ ಗೇಟ್ ಬಳಿ ಟಿಜಿಎಸ್‌ಆರ್‌ಟಿಸಿ ಬಸ್ ಮತ್ತು ಟ್ರಕ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರ ವಿವರಗಳು ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಇಂದು ಮುಂಜಾನೆ ಸಂಭವಿಸಿದೆ. ನಾವು ಸ್ಥಳಕ್ಕೆ ತಲುಪಿದ್ದೇವೆ" ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಕರ್ನೂಲು ಸಮೀಪ ಖಾಸಗಿ ಟ್ರಾವೆಲ್ಸ್ ಗೆ ಬೆಂಕಿ ಹೊತ್ತಿಕೊಂಡು ಕನಿಷ್ಠ 20 ಮಂದಿ ಸಜೀವ ದಹನವಾಗಿದ್ದರು.