ಅನಿಲ್ ಅಂಬಾನಿಗೆ ಸೇರಿದ 3,084 ರೂ. ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇಡಿ
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳಿಂದ ಸಂಗ್ರಹಿಸಲಾದ ಸಾರ್ವಜನಿಕ ನಿಧಿಗಳ ಅಕ್ರಮ ಬಳಕೆಯ ಆರೋಪದ ಮೇಲೆ ಇಡಿ ಈ ಕ್ರಮಕೈಗೊಂಡಿದೆ.
ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಗೆ ಸಂಬಂಧಿಸಿದ 35 ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಪ್ರಕರಣದಲ್ಲಿ ಅನಿಲ್ ಅಂಬಾನಿ ಅವರನ್ನು ಪ್ರಶ್ನಿಸಿತು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಒಡೆತನದ ಸುಮಾರು 3,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಇಡಿ( ಜಾರಿ ನಿರ್ದೇಶನಾಲಯ) ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ನಾಲ್ಕು ತಾತ್ಕಾಲಿಕ ಆದೇಶಗಳನ್ನು ಹೊರಡಿಸಿದ್ದು, ಮುಂಬೈನ ಪಾಲಿ ಹಿಲ್‌ನಲ್ಲಿರುವ ಅನಿಲ್ ಅಂಬಾನಿ ನಿವಾಸ ಸೇರಿದಂತೆ ಹಲವು ವಸತಿ ಮತ್ತು ವಾಣಿಜ್ಯ ಆಸ್ತಿಗಳು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಮಹಾರಾಜ ರಂಜಿತ್ ಸಿಂಗ್ ಮಾರ್ಗದಲ್ಲಿರುವ ರಿಲಯನ್ಸ್ ಸೆಂಟರ್‌ಗೆ ಸೇರಿದ ಭೂಮಿ, ಜೊತೆಗೆ ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಮತ್ತು ಪೂರ್ವ ಗೋದಾವರಿಯಲ್ಲಿನ ಹಲವು ಆಸ್ತಿಗಳು ಸೇರಿದಂತೆ ಒಟ್ಟು 3,084 ರೂ.ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆ
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳಿಂದ ಸಂಗ್ರಹಿಸಲಾದ ಸಾರ್ವಜನಿಕ ನಿಧಿಗಳ ಅಕ್ರಮ ಬಳಕೆಯ ಆರೋಪದ ಮೇಲೆ ಇಡಿ ಈ ಕ್ರಮ ಕೈಗೊಂಡಿದೆ.
2017 ರಿಂದ 2019ರವರೆಗೆ ಯೆಸ್ ಬ್ಯಾಂಕ್ ಆರ್‌ಹೆಚ್‌ಎಓಎಲ್ ಸಾಧನಗಳಲ್ಲಿ 2,965ರೂ. ಕೋಟಿ ಹಾಗೂ ಆರ್‌ಸಿಎಫ್‌ಎಲ್ ಸಾಧನಗಳಲ್ಲಿ 2,045 ರೂ.ಕೋಟಿ ಹೂಡಿಕೆ ಮಾಡಿತ್ತು. ಆದರೆ, 2019ರ ಡಿಸೆಂಬರ್ ವೇಳೆಗೆ ಈ ಹೂಡಿಕೆಗಳು ವರ್ಗಾವಣೆಯಾಗದ ಸ್ಥಿತಿಗೆ ತಲುಪಿದ್ದು, ಆರ್‌ಸಿಎಫ್‌ಎಲ್‌ಗೆ 1,353.50ರೂ. ಕೋಟಿ ಮತ್ತು ಆರ್‌ಸಿಎಫ್‌ಎಲ್‌ಗೆ 1,984 ಕೋಟಿ ರೂ. ಬಾಕಿಯಾಗಿದೆ ಎಂದು ಇಡಿ ಹೇಳಿದೆ.
17,000 ರೂ. ಕೋಟಿ ಸಾಲದ ತನಿಖೆ
ಇಡಿ ಕೈಗೊಂಡ ಈ ಕ್ರಮವು ಅನಿಲ್ ಅಂಬಾನಿ ಮತ್ತು ಅವರ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವು ಕಂಪನಿಗಳಿಂದ ಸುಮಾರು 17,000 ಕೋಟಿ ಮೌಲ್ಯದ ಸಾಲಗಳ ಆರೋಪಕ್ಕೆ ಸಂಬಂಧಿಸಿದೆ.
ಇಡಿ ಜುಲೈ 24ರಂದು ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ 50 ಕಂಪನಿಗಳಿಗೆ ಸಂಬಂಧಿಸಿದ 35 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಆಗಸ್ಟ್‌ನಲ್ಲಿ ಇಡಿ ಅನಿಲ್ ಅಂಬಾನಿಯನ್ನು ವಿಚಾರಣೆಗೆ ಗುರಿಪಡಿಸಿತ್ತು. ಈ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಸಲ್ಲಿಸಿದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಕೈಗೊಂಡಿದೆ.