2026 ಮೇ ತಿಂಗಳಲ್ಲಿ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದಲ್ಲಿ ಸಂಚಾರ; ಹೇಗಿದೆ ಮೆಟ್ರೋ ಕಾಮಗಾರಿ?
ಉತ್ತಮ ಸಂಪರ್ಕಕ್ಕೆ ನಮ್ಮ ಬದ್ಧತೆ ಮುಂದುವರಿಯುತ್ತದೆ. ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ʼನಮ್ಮ ಮೆಟ್ರೋʼ ಪಿಂಕ್ ಲೈನ್ ಮೇ 2026 ರ ವೇಳೆಗೆ ಕಾರ್ಯನಿರ್ವಹಿಸಲಿದೆ.
ನಮ್ಮ ಮೆಟ್ರೋ
ʼನಮ್ಮ ಮೆಟ್ರೋʼ ಗುಲಾಬಿ ಮಾರ್ಗವು ಮೇ 2026 ರೊಳಗೆ ಕಾರ್ಯಾರಂಭ ಮಾಡುಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವು ಒಟ್ಟು 13.76 ಕಿ.ಮೀ ಉದ್ದವಾಗಿದೆ. ಬೆಂಗಳೂರಿನ ಉತ್ತರ-ದಕ್ಷಿಣ ಸಂಪರ್ಕಿಸುವ ಈ ಮೆಟ್ರೋ ಮಾರ್ಗದಿಂದ ಬೆಂಗಳೂರಿನ ಸಂಚಾರ ದಟ್ಟಣೆ ಇನ್ನಷ್ಟು ಕಡಿಮೆಯಾಗುವ ವಿಶ್ವಾಸವಿದೆ.
ಬೆಂಗಳೂರಿನ ಸುಗಮ ಸಂಚಾರ ಹಾಗೂ ಉತ್ತಮ ಸಂಪರ್ಕದೆಡೆಗಿನ ನಮ್ಮ ಬದ್ಧತೆ ಮುಂದುವರಿಯಲಿದೆ. ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ʼನಮ್ಮ ಮೆಟ್ರೋʼ ಗುಲಾಬಿ ಲೈನ್ ಮೇ 2026 ರ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ʻನಮ್ಮ ಮೆಟ್ರೋʼದ ನೇರಳೆ ಮಾರ್ಗ, ಹಸಿರು ಮಾರ್ಗ ಹಾಗೂ ಇತ್ತೀಚೆಗೆ ಉದ್ಘಾಟನೆಗೊಂಡ ಹಳದಿ ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ. ಗುಲಾಬಿ ಮಾರ್ಗದ ಆರಂಭದಿಂದಾಗಿ ಬೆಂಗಳೂರಿನ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. 21 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದೆ ಎಂದು ಉಲ್ಲೇಖಿಸಿದ್ದಾರೆ.
ಸುರಂಗ ಕೊರೆಯುವ ಕಾಮಗಾರಿಯು 2020 ಆಗಸ್ಟ್ 22ರಂದು ಆರಂಭವಾಗಿ 2024 ಅಕ್ಟೋಬರ್ 30ರಂದು ಮುಕ್ತಾಯಗೊಂಡಿದೆ. ಪ್ರಸ್ತುತ, ಭೂಗತ ನಿಲ್ದಾಣಗಳಲ್ಲಿ ಮೆಟ್ಟಿಲು ನಿರ್ಮಾಣ, ಹಳಿ ಜೋಡಣೆ, ವಿದ್ಯುತ್ ಸಂಪರ್ಕ, ಎಲಿವೇಟರ್, ಎಸಿ ಮತ್ತು ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ ಕಾರ್ಯವು ಸಾಗುತ್ತಿದೆ. ಆರಂಭದಲ್ಲಿ 6 ನಿಲ್ದಾಣಗಳನ್ನು (ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7 ಕಿ.ಮೀ ಮಾರ್ಗ) 2025ರ ಅಂತ್ಯದೊಳಗೆ ಆರಂಭಿಸಲು ಬಿಎಂಆರ್‌ಸಿಎಲ್ ಗುರಿ ಹೊಂದಿತ್ತು. ಆದರೆ, ನಿಲ್ದಾಣಗಳ ಕಾಮಗಾರಿ ಬಾಕಿ ಇರುವ ಕಾರಣ, ಈ ಮಾರ್ಗವನ್ನು 2026ರ ಮೇ ತಿಂಗಳಲ್ಲಿ ಆರಂಭಿಸಲು ಹೊಸ ಗಡುವು ನಿಗದಿಪಡಿಸಿದೆ.
ಇಂಟರ್‌ಚೇಂಜ್ ನಿಲ್ದಾಣಗಳು
ಗುಲಾಬಿ ಮಾರ್ಗದಲ್ಲಿ ಒಟ್ಟು 3 ಇಂಟರ್‌ಚೇಂಜ್ ನಿಲ್ದಾಣಗಳು ಬರಲಿವೆ. ಜಯದೇವ ಆಸ್ಪತ್ರೆಯ ಇಂಟರ್‌ಚೇಂಜ್ ನಿಲ್ದಾಣವು ಹಳದಿ ಮಾರ್ಗದ (ಆರ್.ವಿ. ರಸ್ತೆ - ಬೊಮ್ಮಸಂದ್ರ) ಜೊತೆ ಸಂಪರ್ಕ ಕಲ್ಪಿಸಲಿದೆ. ಎಂ.ಜಿ ರಸ್ತೆ ಇಂಟರ್ ಚೇಂಜ್ ನಿಲ್ದಾಣವು ನೇರಳೆ ಮಾರ್ಗದ (ಚಲ್ಲಘಟ್ಟ - ವೈಟ್‌ಫೀಲ್ಡ್) ಜೊತೆ ಸಂಪರ್ಕ ಕಲ್ಪಿಸಲಿದೆ. ನಾಗವಾರ ಇಂಟರ್ ಚೇಂಜ್ ನಿಲ್ದಾಣವು ಯೋಜಿತ ನೀಲಿ ಮಾರ್ಗದ (ವಿಮಾನ ನಿಲ್ದಾಣ - ಸಿಲ್ಕ್ ಬೋರ್ಡ್) ಜೊತೆ ಸಂಪರ್ಕ ಕಲ್ಪಿಸಲಿದೆ.
ಹೊಸ ರೈಲುಗಳು, ನಿಲ್ದಾಣ
ಗುಲಾಬಿ ಮತ್ತು ನೀಲಿ ಮಾರ್ಗಗಳಿಗೆ ಒಟ್ಟು 60 ರೈಲು ಸೆಟ್‌ಗಳನ್ನು ಬಿಇಎಂಎಲ್ ನಿಂದ ಖರೀದಿಸಲಾಗುತ್ತಿದೆ. ಮೊದಲ ಮಾದರಿಯ ರೈಲು ನವೆಂಬರ್ ಅಂತ್ಯದ ವೇಳೆಗೆ ಬರುವ ನಿರೀಕ್ಷೆಯಿದೆ. ಇದನ್ನು ಕೊತ್ತನೂರು ಡಿಪೊದಲ್ಲಿ ಪರೀಕ್ಷಿಸಲಾಗುತ್ತದೆ. ಗುಲಾಬಿ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳು ಬರಲಿವೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ, ಡೈರಿ ವೃತ್ತ, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಟೌನ್, ರಾಷ್ಟ್ರೀಯ ಸೈನಿಕ ಶಾಲೆ, ಮಹಾತ್ಮ ಗಾಂಧಿ ರಸ್ತೆ, ಶಿವಾಜಿ ನಗರ, ಬೆಂಗಳೂರು ಕಂಟೋನ್‌ಮೆಂಟ್ ರೈಲು ನಿಲ್ದಾಣ, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತು ನಾಗವಾರದಲ್ಲಿ ಹೊಸ ರೈಲು ನಿಲ್ದಾಣ ತಲೆ ಎತ್ತಿವೆ.
ಹಳದಿ ರೈಲು ಮಾರ್ಗ
ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬಹುನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗ ವು ಇತ್ತೀಚೆಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಇದು ನಗರದ ಐಟಿ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಮಾರ್ಗಕ್ಕೆ ಆಗಸ್ಟ್ 10ರಂದು ಚಾಲನೆ ನೀಡಿದ್ದರು.
ಹಳದಿ ಮಾರ್ಗವು ನಗರದ ದಕ್ಷಿಣ ಭಾಗದಲ್ಲಿರುವ ಆರ್.ವಿ. ರಸ್ತೆ (ರಾಷ್ಟ್ರೀಯ ವಿದ್ಯಾಲಯ ರಸ್ತೆ) ಯಿಂದ ಬೊಮ್ಮಸಂದ್ರದವರೆಗೆ (ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ) ಸುಮಾರು 19.15 ಕಿ.ಮೀ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವು ಹಸಿರು ಮಾರ್ಗವನ್ನು ಆರ್.ವಿ. ರಸ್ತೆ ನಿಲ್ದಾಣದಲ್ಲಿ, ಗುಲಾಬಿ ಮಾರ್ಗವನ್ನು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ, ನೀಲಿ ಮಾರ್ಗವನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣದ ಮಾರ್ಗದಲ್ಲಿ ಸಂಪರ್ಕಿಸಲಿದೆ.
ಹಳದಿ ಮಾರ್ಗವು 16 ಎತ್ತರದ ನಿಲ್ದಾಣಗಳನ್ನು ಒಳಗೊಂಡಿದೆ. ಆರ್.ವಿ. ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಸ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ರಸ್ತೆ, ಬೊಮ್ಮಸಂದ್ರ ಮುಂತಾದ ಮಾರ್ಗಗಳನ್ನು ಹೊಂದಿದೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಸಂಚರಿಸುತ್ತಿದ್ದು, ಇದಕ್ಕಾಗಿ ಸಿಬಿಟಿಸಿ ತಂತ್ರಜ್ಞಾನ ಬಳಸಲಾಗಿದೆ.