Mangalore Violence | ಉದ್ವಿಗ್ವ ಬಿ ಸಿ ರೋಡ್‌, ಕಾಟಿಪಳ್ಳದಲ್ಲಿ ಪರಿಸ್ಥಿತಿ ಹತೋಟಿಗೆ

Update: 2024-09-16 08:05 GMT

ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರ ಪ್ರಚೋದನಕಾರಿ ನಡವಳಿಕೆಯ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ದಕ್ಷಿಣಕನ್ನಡದ ಬಿ ಸಿ ರೋಡ್ ಮತ್ತು ಕಾಟಿಪಳ್ಳದಲ್ಲಿ ಸೋಮವಾರ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳ ಮಸೀದಿ ಮೇಲೆ ಭಾನುವಾರ ರಾತ್ರಿ ಕಲ್ಲು ತೂರಾಟ ಮಾಡಿದ್ದ ಪ್ರಕರಣದಲ್ಲಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭರತ್, ಚೆನ್ನಪ್ಪ, ನಿತಿನ್, ಸುಜಿತ್, ಮನು, ಪ್ರೀತಮ್ ಎಂದು ಗುರುತಿಸಲಾಗಿದೆ.

ಮಂಗಳೂರು ಹೊರವಲಯದ ಕಾಟಿಪಳ್ಳ 3 ನೇ ಬ್ಲಾಕಿನ ಬದ್ರಿಯಾ ಮಸೀದಿ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿತ್ತು. ಬೈಕ್ನಲ್ಲಿ ಬಂದ ತಂಡ ಕಲ್ಲು ತೂರಾಟ ನಡೆಸಿತ್ತು.

ಇನ್ನು ಮತ್ತೊಂದು ಪ್ರಕರಣದಲ್ಲಿ ಬಿಸಿ ರೋಡ್ ನಲ್ಲಿ ಸೋಮವಾರ ಬೆಳಿಗ್ಗೆ ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಇಬ್ಬರು ಮುಸ್ಲಿಂ ಮುಖಂಡರು, ತಾಕತ್ತಿದ್ದರೆ ಮೆರವಣಿಗೆ ತಡೆಯಿರಿ ಎಂದು ಹಿಂದುತ್ವವಾದಿ ಸಂಘಟನೆಗಳ ಶರಣ್ ಪಂಪ್ವೆಲ್ ಮತ್ತು ಪುನೀತ್ ಅತ್ತಾವರ ಅವರಿಗೆ ಸವಾಲು ಹಾಕಿದ್ದರು. ಆ ಹೇಳಿಕೆ ವೈರಲ್ ಆದ ಹಿನ್ನೆಲೆಯಲ್ಲಿ ಹಿಂದೂ ಮುಖಂಡರು ಪ್ರತಿ ಸವಾಲು ಹಾಕಿ ನೀವು ಹೇಳಿದ ಜಾಗಕ್ಕೆ ಬರುತ್ತೇವೆ. ಹಿಂದುತ್ವ ಗೆಲ್ಲುವುದೋ, ಜಿಹಾದಿಗಳು ಗೆಲ್ಲುತ್ತಾರೋ ನೋಡೋಣ ಎಂದು ಹೇಳಿಕೆ ನೀಡಿದ್ದರು. ಜೊತೆಗೆ ಸೋಮವಾರ ಬಿ ಸಿ ರೋಡ್ ಚಲೋಗೆ ಕರೆ ನೀಡಿದ್ದರು.

ಆ ಹಿನ್ನೆಲೆಯಲ್ಲಿ ಸೋಮವಾರದ ಈದ್ ಮೆರವಣಿಗೆಗೆ ಭಾರೀ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಆದಾಗ್ಯೂ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಹಲವಾರು ಮಂದಿ ಬಿ ಸಿ ರೋಡ್ನಲ್ಲಿ ಈದ್ ಮೆರವಣಿಗೆ ಸಾಗುವ ದಾರಿಯಲ್ಲಿ ಅಡ್ಡ ಕುಳಿತು ಪ್ರತಿಭಟನೆ ನಡೆಸಿದ್ದರು. ತಮಗೆ ಬಿ ಸಿ ರೋಡ್ ಚಲೋ ಮಾಡಲು ಅವಕಾಶ ನೀಡದ ಪೊಲೀಸ್ ಇಲಾಖೆ, ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಯುವಕರ ಬೈಕ್ ರ್ಯಾಲಿಗೆ ಅವಕಾಶ ಕೊಟ್ಟಿದ್ದು ಹಿಂದೂ ಮುಖಂಡರನ್ನು ಕೆರಳಿಸಿತ್ತು.

‘ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ’ ಎಂದು ಶರಣ್ ಪಂಪ್ವೆಲ್ಗೆ ಸವಾಲು ಹಾಕಿದ್ದ ಇಬ್ಬರನ್ನು ಸೋಮವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ವಿಎಚ್ಪಿ ಹಾಗೂ ಬಜರಂಗದಳ ಮುಖಂಡರಾದ ಶರಣ್ ಪಂಪ್ವೆಲ್ ಮತ್ತು ಪುನೀತ್ ಅತ್ತಾವರ ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿರುವ ಮಂಗಳೂರು ಪೊಲೀಸರು, ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಈಗಾಗಲೇ ಎಚ್ಚರಿಕೆಯನ್ನೂ ನೀಡಿದ್ದಾರೆ.

Tags:    

Similar News