Loksabha Election 2024 | ಏ.24ರಿಂದ 26 ರವರೆಗೆ ರೆಸಾರ್ಟ್‌, ಹೋಮ್‌ ಸ್ಟೇಗಳಿಗೆ ನಿರ್ಬಂಧ

ಬೆಂಗಳೂರಿನ ನಾಲ್ಕು ಕ್ಷೇತ್ರ ಸೇರಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.;

Update: 2024-04-14 05:48 GMT

ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮತದಾನ ಮಾಡಿಸುವ ಸಲುವಾಗಿ ರೆಸಾರ್ಟ್‌, ಹೋಮ್‌ ಸ್ಟೇಗಳಿಗೆ ಚುನಾವಣಾಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಏ.24ರಿಂದ ಏ.26ರವರೆಗೆ ಹಾಸನ ಜಿಲ್ಲೆಯ ಎಲ್ಲಾ ಹೋಮ್‌ ಸ್ಟೇ, ರೆಸಾರ್ಟುಗಳಲ್ಲಿ ವಾಸ್ತವ್ಯ ನಿರ್ಬಂಧಗೊಳಿಸಿ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ. 

ಎಪ್ರಿಲ್‌ 24 ರಂದು ಸಂಜೆ 6 ಗಂಟೆಯಿಂದ ಏಪ್ರಿಲ್‌ 26 ರ ಮಧ್ಯರಾತ್ರಿ 12 ಗಂಟೆವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದ್ದು, ಮತದಾನದ ಹಕ್ಕನ್ನು ಚಲಾಯಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತದಾನ ನಡೆಯುವ ದಿನ ರಜೆ ಇರಲಿದ್ದು, ಆ ಸಂದರ್ಭಗಳಲ್ಲಿ ರೆಸಾರ್ಟ್‌, ಹೋಟೆಲ್‌ ಹಾಗೂ ಹೋಂ ಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಮತದಾನ ತಪ್ಪಿಸುವ ಸಾಧ್ಯತೆಗಳಿರುತ್ತದೆ. ರಜೆಯಿಂದಾಗಿ ಮತದಾರರು ತಮ್ಮ ಕರ್ತವ್ಯ ಮರೆತು ಮೋಜು ಮಸ್ತಿಗಾಗಿ ಪಿಕ್‌ ನಿಕ್‌, ಪ್ರವಾಸ ಹೋಗುವುದನ್ನು ತಪ್ಪಿಸುವುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಕರ್ನಾಟಕದ 14 ಕ್ಷೇತ್ರದಲ್ಲಿ ಮೊದಲನೇ ಹಂತದ ಚುನಾವಣೆ ನಡೆಯಲಿದ್ದು, ಬೆಂಗಳೂರಿನ ನಾಲ್ಕು ಕ್ಷೇತ್ರ ಸೇರಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

Tags:    

Similar News