ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ: ರಂಗೇರಿದ ರಾಜ್ಯಸಭಾ ಚುನಾವಣಾ ಕಣ

ಕುಪೇಂದ್ರ ರೆಡ್ಡಿ ಕಣದಲ್ಲಿರುವುದರಿಂದ ಕಾಂಗ್ರೆಸ್ ಗೆ ಅಡ್ಡ ಮತದಾನದ ಭೀತಿ

Update: 2024-02-22 09:46 GMT
ರಾಜ್ಯಸಭೆ ಚುನಾವಣೆಯ ಕಣದಲ್ಲಿರುವ ಸ್ಪರ್ಧಿಗಳು

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ. 27ರಂದು ನಡೆಯಲಿದ್ದು, ಅಂತಿಮವಾಗಿ ಐದನೇ ಅಭ್ಯರ್ಥಿಯಾಗಿ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರು ಕಣಕ್ಕಿಳಿಸುತ್ತಿರುವುದು ಸಹಜವಾಗಿಯೇ ರಾಜ್ಯಸಭಾ ಚುನಾವಣೆಯ ಕಣವನ್ನು ರಂಗೇರಿಸಿದೆ.

ಈಗಾಗಲೇ ಕಾಂಗ್ರೆಸ್ ನಿಂದ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಒಬ್ಬ ಅಭ್ಯರ್ಥಿಯನ್ನು ಘೋಷಿಸಿದೆ. ಸದ್ಯದ ಪಕ್ಷಗಳ ಬಲಾಬಲದ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಗಳು ಆಯಾ ಪಕ್ಷದ ವಿಧಾನಸಭಾ ಸದಸ್ಯರ ಮತಗಳ ಮೇಲೆ ನಿರಾಯಾಸವಾಗಿ ಜಯಗಳಿಸಲಿದ್ದಾರೆ. ಆದರೆ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಕಣದಲ್ಲಿರುವುದರಿಂದ ಅಡ್ಡ ಮತದಾನದ ಭೀತಿ ಕಾಂಗ್ರೆಸ್ ಗೆ ಕಾಡುತ್ತಿದೆ.

ನಾಮಪತ್ರ ವಾಪಸ್‌ ಪಡೆಯಲು ಮಂಗಳವಾರ ಕೊನೆಯ ದಿನವಾಗಿತ್ತು. ತಮ್ಮ ಗೆಲುವಿಗೆ 9 ಮತಗಳ ಕೊರತೆ ಎದುರಿಸುತ್ತಿರುವ ಕುಪೇಂದ್ರ ರೆಡ್ಡಿ ಅವರು ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂಪಡಿಯಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.

ಕುಪೇಂದ್ರ ರೆಡ್ಡಿ ಲೆಕ್ಕಾಚಾರ:

ಕುಪೇಂದ್ರ ರೆಡ್ಡಿಗೆ ಬಿಜೆಪಿಯ ಹೆಚ್ಚುವರಿ 20 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾಗಬಹುದೆಂಬ ಲೆಕ್ಕಾಚಾರವಿದ್ದು, ಅವರ ಗೆಲುವಿಗೆ ಇನ್ನೂ 9 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಈ ಲೆಕ್ಕಾಚಾರದಿಂದ ಕಾಂಗ್ರೆಸ್‌ ನ ಮತಗಳನ್ನು ಕದಿಯುವ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ. ಜೆಡಿಎಸ್‌ ನ ಅತೃಪ್ತರನ್ನು ಸೆಳೆಯಲು ಕಾಂಗ್ರೆಸ್‌ ಕೂಡ ಪ್ರತಿತಂತ್ರ ರೂಪಿಸುತ್ತಿದೆ.

ಕುಪೇಂದ್ರ ರೆಡ್ಡಿ ಪರ ಮತ ಚಲಾಯಿಸುವಂತೆ ಬ್ಲ್ಯಾಕ್ ಮೇಲ್: ಕಾಂಗ್ರೆಸ್‌ ದೂರು

ಕುಪೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸುವಂತೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಗಣಿಗ ರವಿ, ಪೊನ್ನಣ್ಣ, ಕೋನರೆಡ್ಡಿ ನೇತೃತ್ವದ ಕಾಂಗ್ರೆಸ್ ನಿಯೋಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಐದನೇ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ಬಿಜೆಪಿ ಕಡೆಯವರು ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಕಣದಲ್ಲಿ ಕಾಂಗ್ರೆಸ್‌ ನಿಂದ ಅಜಯ್‌ ಮಾಕೆನ್‌, ಜಿ.ಸಿ. ಚಂದ್ರಶೇಖರ್‌, ಡಾ| ನಾಸೀರ್‌ ಹುಸೇನ್‌ ಕಣದಲ್ಲಿದ್ದಾರೆ. ಕಾಂಗ್ರೆಸ್‌ ನ ಎಲ್ಲ 136 ಮತಗಳು ಈ ಮೂವರಿಗೆ ಚಲಾವಣೆಯಾದರೆ ಆತಂಕ ಇಲ್ಲದೆ ಗೆಲುವಿನ ದಡ ಸೇರಲಿದ್ದಾರೆ. ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧಿಸಿದ್ದಾರೆ. ಒಂದು ವೇಳೆ ಅಡ್ಡ ಮತದಾನ ವಾದರೆ ಲೆಕ್ಕಾಚಾರ ಬುಡಮೇಲಾಗುತ್ತದೆ.

ರಾಜ್ಯಸಭೆ ಚುನಾವಣೆ ಫೆ.27 ರಂದು ನಡೆಯಲಿದೆ. ಅಂದೇ ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಕೂಡ ಹೊರಬೀಳಲಿದೆ.

Tags:    

Similar News