ದೇಶಾದ್ಯಂತದ ರೈತರು ಮಾರ್ಚ್ 6 ರಂದು ಪ್ರತಿಭಟನೆಗೆ ದಿಲ್ಲಿಗೆ ಆಗಮಿಸಬೇಕೆಂದು ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಕರೆ ನೀಡಿದ್ದಾರೆ. ಖನೌರಿಯಲ್ಲಿ ಹರಿಯಾಣದ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟ ರೈತನ ಸ್ವಗ್ರಾಮ ಬಟಿಂಡಾ ಜಿಲ್ಲೆಯ ಬಲ್ಲೊಹ್ ಗ್ರಾಮದಲ್ಲಿ ಅವರು ಮಾತನಾಡಿದರು.
ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾರ್ಚ್ 10 ರಂದು ದೇಶಾದ್ಯಂತ ನಾಲ್ಕು ಗಂಟೆ 'ರೈಲ್ ರೋಕೋ' ನಡೆಸಬೇಕು. ಹಾಲಿ ಪ್ರತಿಭಟನಾ ಸ್ಥಳಗಳಲ್ಲಿ ಆಂದೋಲನವನ್ನು ತೀವ್ರಗೊಳಿಸ ಲಾಗುವುದು ಮತ್ತು ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೆ ಆಂದೋಲನ ಮುಂದುವರಿಯುತ್ತದೆ ಎಂದು ರೈತ ಮುಖಂಡರು ಹೇಳಿದರು.
ದೆಹಲಿ ಚಲೋ: ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) 'ದೆಹಲಿ ಚಲೋ' ಜಾಥಾ ಮುನ್ನಡೆಸುತ್ತಿದೆ. ಪಂಜಾಬ್ ಮತ್ತು ಹರಿಯಾಣದ ರೈತರು ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸುತ್ತಿದ್ದಾರೆ. ಇತರ ರಾಜ್ಯಗಳ ರೈತರು- ರೈತ ಕಾರ್ಮಿಕರು ಮಾರ್ಚ್ 6 ರಂದು ಪ್ರತಿಭಟನೆಗೆ ದೆಹಲಿ ತಲುಪಬೇಕು ಎಂದು ಸಂಘಟನೆಗಳು ನಿರ್ಧರಿಸಿವೆ.
ಮಾರ್ಚ್ 10 ರಂದು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ 'ರೈಲ್ ರೋಕೋ' ಪ್ರತಿಭಟನೆ ನಡೆಸಲಾಗುವುದು ಎಂದು ಪಂಧೇರ್ ಹೇಳಿದರು. ಹರಿಯಾಣ ಪೊಲೀಸರು ಇತ್ತೀಚೆಗೆ ಡ್ರೋನ್ ಬಳಸಿದ್ದು, ಕೇಂದ್ರ ಹಿಂದೆಂದೂ ಡ್ರೋನ್ ಬಳಸಿರಲಿಲ್ಲ ಎಂದು ಹೇಳಿದರು.
ʻಆಂದೋಲನವು ಪಂಜಾಬ್‌ಗೆ ಸೀಮಿತವಾಗಿದೆ ಮತ್ತು ಹೋರಾಟ ಕೇವಲ ಎರಡು ವೇದಿಕೆಗಳ ನೇತೃತ್ವದಲ್ಲಿದೆ ಎಂಬ ಭಾವನೆ ಮೂಡಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ಆದರೆ, ದೇಶದ 200 ಕ್ಕೂ ಹೆಚ್ಚು ಸಂಘಟನೆಗಳು ಹೋರಾಟದ ಭಾಗವಾಗಿವೆ,ʼ ಎಂದು ಹೇಳಿದರು.
ರೈತರ ಸಮಸ್ಯೆಯನ್ನು ಪರಿಹರಿಸಲು ಕೇಂದ್ರಕ್ಕೆ ಇಷ್ಟವಿಲ್ಲ ಎಂದು ಆರೋಪಿಸಿದ ಪಂಧೇರ್, ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಒಡೆದು ಆಳುವ ರಾಜಕಾರಣ ಮಾಡುತ್ತಿದೆ. ರೈತರು ಮತ್ತು ಕೃಷಿ ಕಾರ್ಮಿಕರು ಅವರ ಕಾರ್ಯಸೂಚಿಯಲ್ಲಿಲ್ಲʼ ಎಂದು ಪಂಧೇರ್ ಹೇಳಿದರು.