ಸಿಎಎ: ಪ್ರತಿಪಕ್ಷಗಳಿಗೆ ಧ್ರುವೀಕರಣದ ಆತಂಕ

ಚುನಾವಣೆ ಬಾಂಡ್‌ ಪ್ರಕರಣದಲ್ಲಿ ಪ್ರತಿಪಕ್ಷಗಳಿಂದ ದಾಳಿ ಎದುರಿಸುತ್ತಿರುವ ಬಿಜೆಪಿ, ಜನರ ಗಮನ ಬೇರೆಡೆಗೆ ಸೆಳೆಯಲು ಈ ಕೆಲಸಕ್ಕೆ ಮುಂದಾಗಿದೆ.

Update: 2024-03-12 07:37 GMT

ಸಂಸತ್ತು ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), 2019 ಜಾರಿಗೊಳಿಸಿದ ಐದು ವರ್ಷಗಳ ನಂತರ, ಕೇಂದ್ರ ಸರ್ಕಾರವು ಮಾರ್ಚ್ 11ರಂದು ವಿವಾದಾತ್ಮಕ ಕಾನೂನಿನ ಅನುಷ್ಠಾನಕ್ಕೆ ನಿಯಮಗಳನ್ನು ಸೂಚಿಸಿದೆ.

ಡಿಸೆಂಬರ್ 31, 2014ಕ್ಕೆ ಮೊದಲು ಭಾರತದಲ್ಲಿ ಆಶ್ರಯ ಪಡೆದಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಪ್ರಜೆಗಳು, ಮುಸ್ಲಿಮರನ್ನು ಹೊರತುಪಡಿಸಿ, ಹಿಂದೂಗಳು, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಜೈನರು ಭಾರತೀಯ ಪೌರತ್ವವನ್ನು ಪಡೆಯಲು ಅನುವು ಮಾಡಿಕೊಡುವ ಈ ಕಾಯಿದೆಯನ್ನು ಸಂಸತ್ತು ಡಿಸೆಂಬರ್ 2019 ರಲ್ಲಿ ಅಂಗೀಕರಿಸಿತು.

2019 ರ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಕುರಿತ ಪ್ರಶ್ನೆ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಬಾಕಿ ಇದೆ. ಲೋಕಸಭೆ ಚುನಾವಣೆಗೆ ಮುನ್ನ ಜಾರಿಗೊಳಿಸಿದ ಈ ನಿಯಮಗಳು ಬಿಜೆಪಿ ಸರ್ಕಾರದ ಮತ್ತೊಂದು ಕೋಮು ವಿಭಜಕ ತಂತ್ರ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಬಿಜೆಪಿಯ ಕುತಂತ್ರದ ಶಂಕೆ: ಸಿಎಎ 2019 ರ ಅನುಷ್ಠಾನ ಭಾರತೀಯ ಮುಸ್ಲಿಮರ ಪೌರತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ, ದೇಶದ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಿಂದ ʻಪ್ರತಿಕ್ರಿಯೆಯನ್ನು ಪ್ರಚೋದಿಸಲುʼ ಬಿಜೆಪಿ ಮುಂದಾಗಿದೆ. ಮತದಾರರನ್ನು ಧ್ರುವೀಕರಿಸು ವುದು ಅದರ ಉದ್ದೇಶ ಎಂದು ವಿರೋಧ ಪಕ್ಷಗಳು ದೂರಿವೆ.

ಸಿಎಎ ಸೇರಿದಂತೆ ವಿವಾದಾತ್ಮಕ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಯನ್ನು ವಿರೋಧಿಸಿ, ಭಾರತೀಯ ಮು ಸ್ಲಿಂ ನಾಗರಿಕರು ಮತ್ತು ನಾಗರಿಕ ಹಕ್ಕುಗಳ ಗುಂಪುಗಳು ಡಿಸೆಂಬರ್ 2019 ಮತ್ತು ಮಾರ್ಚ್ 2020 ರ ನಡುವೆ ವಿಶೇಷವಾಗಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಕೇಂದ್ರದ ವಿರುದ್ಧ ಅಹಿಂಸಾ ತ್ಮಕ ಆಂದೋಲನ ಪ್ರಾರಂಭಿಸಿದವು.

ಚುನಾವಣೆ ಬಾಂಡ್‌ ವಿವರವನ್ನು ಮಾ.12ರಂದೇ ಸಲ್ಲಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಎಸ್‌ಬಿಐಗೆ ಆದೇಶಿಸಿರುವುದರ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರತಿಪಕ್ಷಗಳಿಂದ ಬಿರುಸಿನ ದಾಳಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಿಎಎ ಕಾಯಿದೆಯ ನಿಯಮಗಳನ್ನು ಜಾರಿಗೊಳಿ ಸಿರುವುದು ʻಕಾಕತಾಳೀ ಯʼ ವೇನಲ್ಲ ಎನ್ನುವುದು ಪ್ರತಿಪಕ್ಷಗಳ ವಾದ. ಅಮಿತ್ ಶಾ ನೇತೃತ್ವದ ಗೃಹ ವ್ಯವಹಾರಗಳ ಸಚಿವಾಲಯವು ಸಿಎಎ ಅಧಿಸೂಚನೆಯಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಅಧಿಸೂಚನೆ ಹೊರಡಿಸುವುದು ವಿಳಂಬವಾಗಿದೆ ಎಂದು ಹೇಳಿಕೊಂಡಿದೆ. ಆದರೆ, ವಿರೋಧ ಪಕ್ಷಗಳು ಈ ವಾದವನ್ನು ತಳ್ಳಿಹಾಕಿವೆ.

ಪ್ರಶ್ನೆಗಳ ಸಮಯ: ʻಅಧಿಸೂಚನೆ ಹೊರಡಿಸಿದ ಸಮಯ ಶಂಕೆಗೆ ಕಾರಣವಾಗಿದೆ. ಡಿಸೆಂಬರ್ 2019 ರಲ್ಲಿ ಸಿಎಎ ಜಾರಿಗೊಳಿಸಿದ ಬಳಿಕ ನಡೆದ ಪ್ರತಿಭಟನೆಗಳನ್ನು ಇಡೀ ಜಗತ್ತು ನೋಡಿದೆ. ಸರ್ಕಾರ ಈ ಕಾನೂನಿಗೆ ಅಷ್ಟೊಂದು ಬದ್ಧವಾಗಿದ್ದರೆ, ಅದನ್ನು ಜಾರಿಗೊಳಿಸಲು ಇಷ್ಟು ಕಾಲ ಏಕೆ ತೆಗೆದುಕೊಂಡಿತು? ಲೋಕಸಭೆ ಚುನಾವಣೆಗೆ ಕೆಲವೇ ವಾರಗಳ ಮೊದಲು ಏಕೆ? ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವಲ್ಲಿನ ವೈಫಲ್ಯ ದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಈ ಕೆಲಸಕ್ಕೆ ಮುಂದಾಗಿದೆ. ಹಿಂದೂ-ಮುಸ್ಲಿಂ ವಿಷಯದ ಮೇಲೆ ಚುನಾವಣೆಯನ್ನು ಧ್ರುವೀಕರಿಸಲು ಬಯಸುತ್ತಾರೆʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.

ಬಿಹಾರದ ಕಿಶನ್‌ಗಂಜ್ ಕ್ಷೇತ್ರದ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್, ʻಇಂತಹ ಅಸಾಂವಿಧಾನಿಕ ಮತ್ತು ಕೋಮು ವಿಭಜಕ ಕಾನೂನಿನ ಮೂಲಕ ದೇಶದ ಸೌಹಾರ್ದವನ್ನು ಹರಿದು ಹಾಕಲು ಕೇಂದ್ರ ಪ್ರಯತ್ನಿಸುತ್ತಿದೆ,ʼ ಎಂದು ಆರೋಪಿಸಿದರು. ಜಾವೇದ್ ಅವರ ಸಂಸದೀಯ ಕ್ಷೇತ್ರ ದೇಶದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದಿದೆ. ʻಕಿರುಕುಳಕ್ಕೊಳಗಾದ ಹಿಂದೂಗಳು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿಗಳಿಗೆ ಸರ್ಕಾರ ಪೌರತ್ವವನ್ನು ನೀಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಈ ಕಾನೂನು ಮಾನವೀಯ ಮುಖ ಹೊಂದಿದೆ ಎಂದು ನೀವು ಹೇಳುವಿರಾದರೆ, ಕಿರುಕುಳ ಕ್ಕೊಳಗಾದ ಮುಸ್ಲಿಮರನ್ನು ಹೊರಗಿಡುವುದು ಮಾನವೀಯತೆಯೇ?ʼ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ತನ್ನ ನಾಯಕರನ್ನು ಸಾಲುಗಟ್ಟಿ ನಿಲ್ಲಿಸಿ, ʻಇನ್ನೊಂದು ಐತಿಹಾಸಿಕ ಮೈಲುಗಲ್ಲುʼ ಎಂದು ಪ್ರಧಾನಿಯನ್ನು ಅಭಿನಂದಿಸಲು ಮುಂದಾಗಿದೆ. ಆದರೆ, ಎಲ್ಲ ವಿರೋಧ ಪಕ್ಷಗಳು ಕಾಯಿದೆಯನ್ನು ಖಂಡಿಸಿವೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ʻಕೇಂದ್ರ ಈ ಹಿಂದೆಯೇ ನಿಯಮಗಳನ್ನು ಜಾರಿಗೊಳಿಸಲಿಲ್ಲವೇಕೆ?ʼ ಎಂದು ಪ್ರಶ್ನಿಸಿದ್ದಾರೆ. ʻನೀವು ಆರು ತಿಂಗಳ ಹಿಂದೆಯೇ ನಿಯಮಗಳನ್ನು ಪ್ರಕಟಿಸಬೇಕಿತ್ತು. ದೇಶಕ್ಕೆ ಒಳ್ಳೆಯದಾಗುವ ವಿಷಯಗಳನ್ನು ನಾವು ಯಾವಾಗಲೂ ಬೆಂಬಲಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ಇಲ್ಲವಾದಲ್ಲಿ ಟಿಎಂಸಿ ವಿರೋಧಿಸುತ್ತದೆ. ನಿಯಮಗಳನ್ನು ರಂಜಾನ್ ಗಿಂತ ಮೊದಲು ಏಕೆ ಪ್ರಕಟಿಸಲಾಗಿದೆ ಎನ್ನುವುದು ನನಗೆ ತಿಳಿದಿದೆ. ಜನರು ಶಾಂತವಾಗಿರುವಂತೆ ಮತ್ತು ಯಾವುದೇ ವದಂತಿಗಳನ್ನು ನಂಬಬಾರದೆಂದು ಮನವಿ ಮಾಡುತ್ತೇನೆʼ ಎಂದು ಬ್ಯಾನರ್ಜಿ ಹೇಳಿದರು.

ಪ್ರತಿಸ್ಪರ್ಧಿಗಳೆಲ್ಲ ಒಂದೆಡೆ: ಸಿಎಎ ನಿಯಮಗಳ ಜಾರಿ ಬ್ಯಾನರ್ಜಿ ಮತ್ತು ಅವರ ಪ್ರತಿಸ್ಪರ್ಧಿಗಳನ್ನು ಒಂದೆಡೆ ತಂದಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಚುನಾವಣೆ ಬಾಂಡ್‌ ಕುರಿತ ಸುಪ್ರೀಂ ಕೋರ್ಟ್‌ ಆದೇಶದ ನಂತರ ಮೋದಿ ಸರ್ಕಾರ ಜನರ ಗಮನ ʻಬೇರೆಡೆಗೆ ತಿರುಗಿಸಲುʼ ಅಧಿಸೂಚನೆ ಹೊರಡಿಸಿದೆ ಎಂದು ಬರೆದಿದ್ದಾರೆ.

ಹಲವಾರು ವಿರೋಧ ಪಕ್ಷದ ನಾಯಕರು ಫೆಡರಲ್ ಜೊತೆ ಮಾತನಾಡಿದ್ದು, ಮೋದಿ ಸರ್ಕಾರ ದ ʻವಿಮುಖಗೊಳಿಸುವ ತಂತ್ರಗಳುʼ ಮತ್ತು ʻಹೆಡ್‌ ಲೈನ್‌ ಮ್ಯಾನೇಜ್ಮೆಂಟ್‌ʼ ಗಳನ್ನು ಸಾರ್ವಜನಿಕರುಅರ್ಥ ಮಾಡಿಕೊಳ್ಳುತ್ತಾರೆ ಎಂಬ ಆಶಾಭಾವ ವ್ಯಕ್ತಪಡಿಸಿದರು. ಆದರೆ, ʻಮುಸ್ಲಿಂ ಸಮುದಾಯದ ರಾಜಕೀಯ, ಸಾಮಾಜಿಕ ಅಥವಾ ಧಾರ್ಮಿಕ ಮುಖಂಡರಿಂದ ಆತುರದ ಪ್ರತಿಕ್ರಿಯೆಗಳು ಬಿಜೆಪಿಗೆ ಜನರನ್ನು ಧ್ರುವೀಕರಿಸುವ ಅವಕಾಶ ನೀಡುತ್ತವೆʼ ಎಂಬ ಭಯವೂ ಇದ್ದಿತ್ತು.

ʻಸಿಎಎ ನಿಯಮಗಳು ಸ್ಪಷ್ಟವಾಗಿ ಅಸಾಂವಿಧಾನಿಕ ಮತ್ತು ಅನ್ಯಾಯಕರ. ದೇಶದ ಮುಸ್ಲಿಮರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಮುಸ್ಲಿಂ ಮತದಾರರಿಗೆ ವಿವರಿಸುವುದು ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಸಮುದಾಯದ ನಾಯಕರ ಜವಾಬ್ದಾರಿ.

ನಿರಾಶ್ರಿತರಿಗೆ ಪೌರತ್ವ ನೀಡುವಿಕೆಯು ದೇಶದ ಮುಸ್ಲಿಮರ ಪೌರತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿಎಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಮತ್ತು ನ್ಯಾಯಾಲಯದ ತೀರ್ಪಿಗೆ ಕಾಯಬೇಕಿದೆ. ಸಿಎಎಯನ್ನು ಎನ್ಪಿಆರ್‌ ಮತ್ತು ಎನ್‌ಆರ್‌ಸಿ ಯೊಂದಿಗೆ ಸಂಯೋಜಿಸಿದರೆ ಮಾತ್ರ ಅದು ಮುಸ್ಲಿಂ ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು; ಅಂಥ ಸಂದರ್ಭದಲ್ಲಿ ಪ್ರತಿಪಕ್ಷಗಳು ಅದನ್ನು ತಡೆಯಲು ಶಕ್ತಿ ಮೀರಿ ಪ್ರಯತ್ನಿಸಲಿವೆ. ಅಲ್ಲಿವರೆಗೆ ಶಾಂತಿ ಕಾಪಾಡಿಕೊಳ್ಳಬೇಕು ಮತ್ತು ಬಿಜೆಪಿ ಇದನ್ನು ಚುನಾವಣೆಗೆ ಬಳಸಿಕೊಳ್ಳಲು ಬಿಡಬಾರದುʼ ಎಂದು ಸುಪ್ರೀಂ ಕೋರ್ಟ್‌ ವಕೀಲರೂ ಆಗಿರುವ ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

ಸಮಾಜವಾದಿ ಪಕ್ಷದ ನಾಯಕರೊಬ್ಬರು ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʻಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಹೆಚ್ಚು ಜಾಗರೂಕರಾಗಿರಬೇಕು. ಅಸ್ಸಾಂನ ಕೆಲವು ಭಾಗಗಳಲ್ಲಿ, ದೆಹಲಿ, ಬಂಗಾಳದಲ್ಲಿ ಸಿಎಎ-ಎನ್‌ಆರ್‌ಸಿ ಅಲ್ಪಸಂಖ್ಯಾತರಿಗೆ ಭಾವನಾತ್ಮಕ ವಿಷಯವಾಗಿದೆ. ವಿರೋಧ ಪಕ್ಷಗಳು ಪ್ರಭಾವಿ ಮುಸ್ಲಿಂ ಸಂಘಟನೆಗಳ ಜೊತೆ ಸೇರಿ, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ. ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ನಮ್ಮ ಮತದ ಶಕ್ತಿಯನ್ನು ಬಳಸುವುದೇ ನಮ್ಮ ಏಕೈಕ ಗುರಿಯಾಗಬೇಕು. ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಇಲ್ಲದಿದ್ದರೆ, ಸಿಎಎ ವಿಷಯ ಚುನಾವಣೆಯಲ್ಲಿ ಪರಿಗಣನೆ ಆಗುವುದಿಲ್ಲ.ಇಲ್ಲವಾದಲ್ಲಿ ಮೋದಿ ಇದನ್ನು ಪುಲ್ವಾಮಾ ಆಗಿ ಪರಿವರ್ತಿಸುತ್ತಾರೆʼ ಎಂದರು.

Tags:    

Similar News