ಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಗೆ ಅಂಗನವಾಡಿ ಕಾರ್ಯಕರ್ತರು, ಪಿಎಂ ಕೇರ್ಸ್ ಮಕ್ಕಳು ವಿಶೇಷ ಅತಿಥಿಗಳು

ಭಾರತದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣದಲ್ಲಿ ಅಸಾಧಾರಣ ಪಾತ್ರ ವಹಿಸಿದ 171 ತಳಮಟ್ಟದ ಕೊಡುಗೆದಾರರನ್ನು ಈ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.;

Update: 2025-08-14 04:46 GMT

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಮುಖ್ಯ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತರು, ಮಕ್ಕಳ ಪಾಲನಾ ಸಂಸ್ಥೆಗಳ ಬಾಲಕ-ಬಾಲಕಿಯರು, ಪಿಎಂ ಕೇರ್ಸ್ (PM CARES) ಯೋಜನೆಯಡಿ ಬೆಂಬಲ ಪಡೆದ ಮಕ್ಕಳು ಹಾಗೂ 'ಒನ್-ಸ್ಟಾಪ್' ಕೇಂದ್ರಗಳ ಸಿಬ್ಬಂದಿ ಸೇರಿದಂತೆ ಹಲವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾರತದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣದಲ್ಲಿ ಅಸಾಧಾರಣ ಪಾತ್ರ ವಹಿಸಿದ 171 ತಳಮಟ್ಟದ ಕೊಡುಗೆದಾರರನ್ನು ಈ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಅತಿಥಿಗಳು ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಆವರಣದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಮಾತನಾಡುವುದಕ್ಕೆ ಸಾಕ್ಷಿಯಾಗಲಿದ್ದಾರೆ.

ದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯ ಸೇವೆಗಳನ್ನು ಕೊನೆಯ ಹಂತದವರೆಗೂ ತಲುಪಿಸುವಲ್ಲಿ ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸುವಲ್ಲಿ ಈ ವ್ಯಕ್ತಿಗಳು ನೀಡಿದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಈ ಆಯ್ಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬುಧವಾರದಿಂದ ಶನಿವಾರದವರೆಗೆ ದೆಹಲಿಗೆ ಭೇಟಿ ನೀಡಲಿರುವ ಈ ತಂಡವು ಸಂಸತ್ ಭವನ, ಪ್ರಧಾನಮಂತ್ರಿ ಸಂಗ್ರಹಾಲಯ, ಕರ್ತವ್ಯ ಪಥ ಹಾಗೂ ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದೆ.

ಈ ಕುರಿತು ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ, "ಮಹಿಳೆಯರ ಸಬಲೀಕರಣ ಮತ್ತು ಮಕ್ಕಳ ಪೋಷಣೆಯಿಂದಲೇ ನಿಜವಾದ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ಪ್ರಧಾನಿಯವರ ದೃಷ್ಟಿಕೋನವನ್ನು ಈ ಗೌರವ ಪ್ರತಿಬಿಂಬಿಸುತ್ತದೆ. ಈ ವಿಶೇಷ ಅತಿಥಿಗಳು ಆ ನಂಬಿಕೆಯ ಜೀವಂತ ಉದಾಹರಣೆಗಳು. ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಅವರು ಅಸಂಖ್ಯಾತ ಕುಟುಂಬಗಳಿಗೆ ಭರವಸೆ ಮತ್ತು ಘನತೆಯನ್ನು ತರುತ್ತಾರೆ. ಈ ಸ್ವಾತಂತ್ರ್ಯ ದಿನದಂದು ಅವರನ್ನು ಗುರುತಿಸುವುದು, ಸದೃಢ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ರೂಪಿಸುವಲ್ಲಿ ಅವರ ಸಮರ್ಪಣೆಯನ್ನು ನಾವು ಆಚರಿಸುವ ವಿಧಾನವಾಗಿದೆ" ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಅತಿಥಿಗಳನ್ನು "ಬದಲಾವಣೆಯ ಹರಿಕಾರರು" ಎಂದು ಬಣ್ಣಿಸಿದ್ದು, ಸಮಗ್ರ ರಾಷ್ಟ್ರವನ್ನು ನಿರ್ಮಿಸುವ ಪ್ರಯತ್ನಗಳಿಗೆ ಇವರ ಬದ್ಧತೆ ಮತ್ತು ಸೇವೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದೆ.

Tags:    

Similar News