ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಸಾಬೀತಾದರೆ, ಇಡೀ ಪ್ರಕ್ರಿಯೆ ರದ್ದು: ಸುಪ್ರೀಂ ಕೋರ್ಟ್

ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.;

Update: 2025-08-12 11:13 GMT

ಬಿಹಾರದಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಫಲಿತಾಂಶದಲ್ಲಿ ಯಾವುದೇ ಅಕ್ರಮ ನಡೆದಿದ್ದು, ಅದು ತಡವಾಗಿ ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಬೀತಾದರೂ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್ 12) ಸ್ಪಷ್ಟಪಡಿಸಿದೆ.

ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯಿದೆ ಮತ್ತು ಇದು ಲಕ್ಷಾಂತರ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

ಚುನಾವಣಾ ಆಯೋಗದ ಭರವಸೆ

ಈ ವಿಚಾರದಲ್ಲಿ ಆಗಸ್ಟ್ 10 ರಂದು ನಡೆದ ವಿಚಾರಣೆ ವೇಲೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಅದರ ಪ್ರಕಾರ, ಯಾವುದೇ ಮತದಾರರ ಹೆಸರನ್ನು ಪೂರ್ವ ಸೂಚನೆ ನೀಡದೆ, ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡದೆ ಮತ್ತು ಸೂಕ್ತ ಕಾರಣಗಳನ್ನು ದಾಖಲಿಸದೆ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೆ, ಕಾನೂನಿನ ಪ್ರಕಾರ, ಪಟ್ಟಿಯಿಂದ ಹೊರಗುಳಿದವರ ಪ್ರತ್ಯೇಕ ಪಟ್ಟಿಯನ್ನು ಅಥವಾ ಅದಕ್ಕೆ ಕಾರಣಗಳನ್ನು ಪ್ರಕಟಿಸುವ ಅಗತ್ಯವಿಲ್ಲ ಎಂದೂ ಆಯೋಗ ಹೇಳಿತ್ತು.

ಎಡಿಆರ್ ಸಂಸ್ಥೆಯು, ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾದ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಮತ್ತು ಅದಕ್ಕೆ ಕಾರಣಗಳನ್ನು (ಅವರು ಮೃತರಾಗಿದ್ದಾರೆಯೇ, ವಲಸೆ ಹೋಗಿದ್ದಾರೆಯೇ ಅಥವಾ ಇತರೆ) ಪ್ರಕಟಿಸುವಂತೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದೆ.

ನ್ಯಾಯಾಲಯದ ನಿಲುವು

ವಿಚಾರಣೆಯು ಬುಧವಾರವೂ (ಆಗಸ್ಟ್ 13) ಮುಂದುವರಿಯಲಿದೆ. ಈ ಹಿಂದೆ, ಜುಲೈ 28 ರಂದು ನಡೆದ ವಿಚಾರಣೆಯ ವೇಳೆ, "ಬೃಹತ್ ಪ್ರಮಾಣದಲ್ಲಿ ಮತದಾರರ ಕೈಬಿಡುವಿಕೆ" ಕಂಡುಬಂದಲ್ಲಿ ತಾನು ಮಧ್ಯಪ್ರವೇಶಿಸುವುದಾಗಿ ನ್ಯಾಯಾಲಯವು ಮೌಖಿಕವಾಗಿ ಹೇಳಿತ್ತು. ಇದೀಗ, ಅಕ್ರಮಗಳು ಸಾಬೀತಾದರೆ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡುವ ಮೂಲಕ, ಮತದಾರರ ಹಕ್ಕುಗಳ ರಕ್ಷಣೆಗೆ ತಾನು ಬದ್ಧವಾಗಿರುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

Tags:    

Similar News