Hindi Imposition: ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿ ಕ್ಷಮೆಯಾಚಿಸಿದ ಟೆಕಿ
ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುವ ಕೆಲಸವಾಗುತ್ತಿದ್ದು ಅನ್ಯ ಭಾಷಿಕರಿಂದ ಪದೇ ಪದೇ ಕನ್ನಡ ಭಾಷೆಯ ಮೇಲೆ ದಾಳಿಯಾಗುವ ಕೆಲಸವಾಗುತ್ತಿದ್ದು ಈಗ ಆ ಸಾಲಿಗೆ ಮತ್ತೊಂದು ಘಟನೆ ನಡೆದಿದೆ.;
ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸುತ್ತಿರುವ ಯುವಕ
ಬೆಂಗಳೂರಿನಲ್ಲಿ ಕನ್ನಡಿಗರು ಹಾಗೂ ಕನ್ನಡ ಭಾಷೆಯ ಮೇಲಿನ ದಬ್ಬಾಳಿಕೆ ಹಾಗೂ ಸುಳ್ಳು ಆರೋಪಗಳ ಕೃತ್ಯಗಳು ಮುಂದುವರಿದ್ದು ಹಿಂದಿ ಮಾತನಾಡುವ ಟೆಕಿಯೊಬ್ಬರು ಆಟೋ ಚಾಲಕನಿಕೆ ಹಿಂದಿ ಮಾತನಾಡುವಂತೆ ಬೆದರಿಸಿದ ಪ್ರಕರಣ ನಗರದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ. ಆದರೆ, ತನ್ನ ಕೃತ್ಯ ತನಗೆ ಮುಳುವಾಗುತ್ತಿದೆ ಎಂದು ಗೊತ್ತಾದ ತಕ್ಷಣ ಸೋಶಿಯಲ್ ಮೀಡಿಯಾಗಳ ಮೂಲಕ ಸಾರ್ವಜನಿಕವಾಗಿ ಕ್ಷಮೆ ಕೋರಿ ಬಚಾವಾಗಿದ್ದಾರೆ.
ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಟೆಕಿ ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಹಾಗೂ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಆತ ಕ್ಷಮೆ ಕೇಳಿದ್ದಾನೆ,
ಆಟೋ ಚಾಲಕ ಹಾಗೂ ಟೆಕಿಯ ನಡುವಿನ ವಾಗ್ವಾದ ನಡೆದಿದ್ದು ''ಬೆಂಗಳೂರಿನಲ್ಲಿ ಉಳಿಯಬೇಕೆಂದರೆ ಹಿಂದಿಯಲ್ಲಿ ಮಾತನಾಡಿ'' ಎಂದು ಆಟೋ ಚಾಲಕನಿಗೆ ಯುವಕ ಕೋಪದಿಂದ ಹೇಳುತ್ತಿರುವ ದೃಶ್ಯ ದಾಖಲಾಗಿದೆ. ಇದಕ್ಕೆ ಉತ್ತರವಾಗಿ ಆಟೋ ಚಾಲಕ ಕೆಲಸ ಹುಡುಕಿಕೊಂಡು ನೀವು ಬೆಂಗಳೂರಿಗೆ ಬಂದಿದ್ದು, ''ನೀವು ಕನ್ನಡ ಕಲಿಯುಬೇಕು. ನಾನು ಹಿಂದಿ ಮಾತನಾಡುವುದಿಲ್ಲ,'' ಎಂದು ಹೇಳಿದ್ದರು.
ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಟೆಕಿಯ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಎಚ್ಚೆತ್ತುಕೊಂಡ ಆತ ಬಳಿಕ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದು, ನಾನು ಒಂಬತ್ತು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದೇನೆ. ನಗರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು ಇಲ್ಲಿ ನಾನು ಗೌರವದೊಂದಿಗೆ ಜೀವನ ನಡೆಸುತ್ತಿದ್ದೇನೆ. ಯಾರ ಭಾವನೆಗಾದರು ಧಕ್ಕೆಯಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ''ತನ್ನ ಮೇಲೆಯೇ ಹಲ್ಲೆಯಾಗಿದೆ'' ಎಂದು ಸುಳ್ಳು ಪ್ರಕರಣ ದಾಖಲಿಸಿದ್ದು ಬೆಂಗಳೂರಿನಲ್ಲಿ ಸಾಕಷ್ಟು ಸುದ್ದಿಯಾಗಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂಬುದಾಗಿ ಕನ್ನಡ ಪರ ಸಂಘಟನೆಗಳು ಆರೋಪಿಸಿವೆ.